ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಪ್ರದೇಶದ ಸ್ಮಶಾನವೊಂದರಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇಟ್ಟು ವಾಮಾಚಾರ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರತಿ ಬಾರಿ ಚುನಾವಣೆ ಸಮೀಪಿಸಿದಾಗಲೆಲ್ಲ ಪ್ರಧಾನಿ ಮೋದಿಯವರ ವಿರುದ್ಧ ಹಲವು ಸಂಚುಗಳು ನಡೆಯುತ್ತಲೇ ಇವೆ. ಈ ಹಿಂದಿನ ಚುನಾವಣೆಗಳಲ್ಲೂ ಹ ತ್ಯೆಯ ಸಂಚು ರೂಪಿಸಲಾಗಿತ್ತು. ಇತ್ತೀಚಿಗೆ ಮುಂಬೈನಲ್ಲೂ ಇಂದಿರಾ ಗಾಂಧಿ ಹ ತ್ಯೆ ಮಾದರಿಯಲ್ಲಿ ಸಂಚು ರೂಪಿಸಿದ್ದ ಉಗ್ರನೊಬ್ಬನ ಬಂಧಿಸಿದ್ದಾಯ್ತು, ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಶಾಕಿಂಗ್ ಘಟನೆ ನಡೆದಿದೆ. ಪ್ರಧಾನಿ ಮೋದಿಯವರ ವಿರುದ್ಧದ ಸಂಚಿಗೆ ಈ ಬಾರಿ ವಾಮಾಚಾರ ಕೃತ್ಯ ನಡೆಸಲಾಗಿದೆ.
ಹೌದು ಪ್ರಧಾನಿ ಮೋದಿ ಅವರ ಫೋಟೋವನ್ನಿಟ್ಟು ಸ್ಮಶಾನದಲ್ಲಿ ವಾಮಾಚಾರ ನಡೆಸಿರುವ ಕೃತ್ಯವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ಘಟನೆ ಸಂಬಂಧ ಉತ್ತರ ಪ್ರದೇಶ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.
ಸ್ಮಶಾನದಲ್ಲಿ ಪ್ರಧಾನಿ ಮೋದಿ ಫೋಟೋ ಇಟ್ಟು ವಾಮಾಚಾರ
ಈ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ದೋಹ್ರಿಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸರಯೂ ನದಿ ದಂಡೆಯ ಮೇಲೆ ಈ ಕೃತ್ಯ ನಡೆದಿದ್ದು, ಪ್ರಧಾನಿ ಮೋದಿಯವರ ಭಾವಚಿತ್ರದ ಮುಂದೆ ತೆಂಗಿನಕಾಯಿ, ನಿಂಬೆಹಣ್ಣು, ಕಿತ್ತಳೆ ಬಣ್ಣದ ಪುಡಿ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಮಾಚಾರಕ್ಕೆ ಬಳಸುವ ಎಲ್ಲ ವಸ್ತುಗಳು ಇಲ್ಲಿವೆ.
ಪೊಲೀಸರಿಂದ ತನಿಖೆ ಚುರುಕು
ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ವೈರಲ್ ಆಗಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ಪೊಲೀಸರು, ಮೊದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟವರು ಯಾರು? ವಿಡಿಯೋ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸ್ಥಳದಿಂದಲೂ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಪ್ರಧಾನಿ ಮೋದಿ ಭಾವಚಿತ್ರಕ್ಕೆ ದುಷ್ಕರ್ಮಿಗಳು ವಾಮಾಚಾರ ನಡೆಸಿರುವ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ನಡೆದ ಸುತ್ತಮುತ್ತಲಿನ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಘೋಸಿ ಸರ್ಕಲ್ ನ ಪೊಲೀಸ್ ಅಧಿಕಾರಿ ಸತ್ಯೇಂದ್ರ ಭೂಷಣ್ ತಿವಾರಿ ಅವರು ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆಸಿರುವ ಅಪರಿಚಿತ ಆರೋಪಿಗಳ ವಿರುದ್ಧ ಬಿಎನ್ಎಸ್ ಆಕ್ಟ್ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಕೃತ್ಯವೆಸಗಿದ್ದು ಯಾರು? ಏನಿವರ ಉದ್ದೇಶ? ಪ್ರಧಾನಿ ಮೋದಿ ಫೋಟೋ, ವಾಮಾಚಾರದ ವಸ್ತುಗಳನ್ನ ದಡಕ್ಕೆ ತಂದಿಟ್ಟವರು ಯಾರು? ವಿಡಿಯೋವನ್ನು ಮೊದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವವರು ಯಾರು? ಈ ಕೃತ್ಯದ ಹಿಂದಿನ ಉದ್ದೇಶವೇನು? ಈ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







