ಶಬರಿಮಲೆ ದೇವಸ್ಥಾನದ ಅರವಣ ಪ್ರಸಾದ ತಯಾರಿಕೆಗೆ ಮಿಲ್ಮಾ ತುಪ್ಪದ ಬದಲು ಕಡಿಮೆ ಗುಣಮಟ್ಟದ ತುಪ್ಪ ಪೂರೈಸಿ 2.5 ಕೋಟಿ ರೂ. ನಷ್ಟ ಉಂಟುಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ಲಾರಿ ಕಾಂಟ್ರ್ಯಾಕ್ಟರ್ ಎಸ್.ಎಸ್. ಬಿನು ಎಂಬಾತನನ್ನು ವಿಚಕ್ಷಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಅರವಣ ಪ್ರಸಾದ ತಯಾರಿಸಲು ಸಾಗಿಸಬೇಕಿದ್ದ 11 ಸಾವಿರ ಲೀಟರ್‌ ಮಿಲ್ಮಾ ತುಪ್ಪದ ಬದಲು ಕಡಿಮೆ ಗುಣಮಟ್ಟದ ತುಪ್ಪ ಪೂರೈಸುವ ಮೂಲಕ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ 2.5 ಕೋಟಿ ರು. ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಲಾರಿ ಕಾಂಟ್ರ್ಯಾಕ್ಟರ್‌ ಒಬ್ಬರನ್ನು ಬಂಧಿಸಲಾಗಿದೆ.

11,000 ಲೀ. ಮಿಲ್ಮಾ ತುಪ್ಪ ಬದಲು ಕಡಿಮೆ ಗುಣಮಟ್ಟದ ತುಪ್ಪ ಪೂರೈಕೆ

ಬಂಧಿತನನ್ನು ಎಸ್‌.ಎಸ್‌.ಬಿನು ಎಂದು ಗುರುತಿಸಲಾಗಿದ್ದು, ಈತ 2025ರಿಂದ ಶಬರಿಮಲೆ ದೇಗುಲಕ್ಕೆ ಮಿಲ್ಮಾ ಡೈರಿಯಿಂದ ತುಪ್ಪ ಸಾಗಿಸುವ ಕಾಂಟ್ರ್ಯಾಕ್ಟ್‌ ಪಡೆದಿದ್ದ. ತುಪ್ಪ ಪೂರೈಕೆಯಲ್ಲಿ ಭಾರೀ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಉಸ್ತುವಾರಿಯಲ್ಲಿ ತನಿಖೆ ನಡೆಸುತ್ತಿರುವ ವಿಚಕ್ಷಣ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬಿನುನನ್ನು ಬಂಧಿಸಿದ್ದಾರೆ.

ಸಾರಿಗೆ ಕಾಂಟ್ರ್ಯಾಕ್ಟರ್‌ ಬಂಧಿಸಿದ ವಿಚಕ್ಷಣ ದಳ

ಕರ್ನಾಟಕದ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನಂತೆ ಕೇರಳದ ಸಹಕಾರಿ ಹಾಲು ಒಕ್ಕೂಟವು ಮಿಲ್ಮಾ ಬ್ರ್ಯಾಂಡ್‌ನಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಶಬರಿಮಲೆಯ ಅರವಣ (ಸಿಹಿ) ಪ್ರಸಾದಕ್ಕಾಗಿ ಟಿಡಿಬಿಯು ಪಟ್ಟಣಂತಿಟ್ಟ ಮಿಲ್ಮಾ ಡೈರಿ ಜತೆ ನೇರ ಒಪ್ಪಂದ ಮಾಡಿಕೊಂಡಿತ್ತು.

ತುಪ್ಪ ಸಾಗಣೆ ವೇಳೆ ಅಕ್ರಮ, 2.5 ಕೋಟಿ ನಷ್ಟ ಉಂಟುಮಾಡಿದ ಆರೋಪ

ಡೈರಿಯಿಂದ ತುಪ್ಪವನ್ನು ಸಾಗಿಸುವ ಗುತ್ತಿಗೆಯನ್ನು ಆರೋಪಿ ಬಿನುಗೆ ನೀಡಲಾಗಿತ್ತು. ಆದರೆ ಆರೋಪಿ ಬಿನು ಮಿಲ್ಮಾ ಡೈರಿಯಿಂದ ಲಾರಿಗೆ ತುಂಬುತ್ತಿದ್ದ ನೈಜ ತುಪ್ಪ ಬೇರೆಡೆ ವರ್ಗಾಯಿಸಿ, ಶಬರಿಮಲೆಗೆ ಕಡಿಮೆ ಗುಣಮಟ್ಟದ ತುಪ್ಪ ಪೂರೈಸಿದ್ದ. ತಮಿಳುನಾಡಿನ ಶ್ರೀ ವೆಂಕಟೇಶ್ವರ ಟ್ರೇಡರ್ಸ್‌ ಮತ್ತು ಲಿಯೋ ಟ್ರೇಡರ್ಸ್‌ಗೆ ನೈಜ ಮಿಲ್ಮಾ ತುಪ್ಪವನ್ನು ನಕಲಿ ದಾಖಲೆಗಳನ್ನು ಬಳಸಿ ಸಾಗಿಸಲಾಗಿದೆ ಎಂಬ ಆರೋಪವಿದೆ.