NHPC ಕಚೇರಿ, ಪೊಲೀಸ್ ಠಾಣೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷನ ಮನೆಯನ್ನು ಧ್ವಂಸ ಮಾಡಿದ್ದಾರೆ. ಇತ್ತ ಬಿಜೆಪಿ ಮಾಜಿ ಶಾಸಕನ ಮನೆಯನ್ನು ದೋಚಲಾಗಿದೆ. ಪ್ರತಿಭಟನೆ ಇದೀಗ ಹಿಂಸೆಗೆ ತಿರುಗಿದ್ದು ಹಲವು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ.

ಇಟಾನಗರ (ಅ.25) ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಹಿಂಸೆಗೆ ತಿರುಗಿದೆ. ಪರಿಣಾಮ ರಾಷ್ಟ್ರೀಯ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಶನ್(NHPC) ಕಚೇರಿ, ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷನ ಮನೆಯನ್ನು ಪುಡಿ ಮಾಡಿದ್ದಾರೆ. ಇತ್ತ ಬಿಜೆಪಿ ಮಾಜಿ ಶಾಸಕನ ಮನೆಯನ್ನು ದೋಚಲಾಗಿದೆ. ದಂಗೆಯ ಸ್ವರೂಪ ಪಡೆದುಕೊಂಡ ಪ್ರತಿಭಟನೆಯಿಂದ ಹಲವರು ಪೊಲೀಸರು ಗಂಭೀರವಾಗಿ ಗಾಯಗೊಂಡ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಅರುಣಾಚಲ ಪ್ರದೇಶ ಪವರ್ ಪ್ರಾಜೆಕ್ಟ್ ವಿರುದ್ಧ ಆರಂಭಗೊಂಡ ಪ್ರತಿಭಟನೆ ಇದೀಗ ಹಿಂಸೆಗೆ ತಿರುಗಿದ್ದು, ಕೋಲಾಹಲ ಸೃಷ್ಟಿಯಾಗಿದೆ.

ಉದ್ರಿಕ್ತರ ಗುಂಪಿನಿಂದ ಕೃತ್ಯ

11,200 MW ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪವರ್ ಪ್ರಾಜೆಕ್ಟ್ ಯೋಜನೆಗೆ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಪಸಿಘಾಟ್‌ನಲ್ಲಿ ಆರಂಭಗೊಂಡ ಪ್ರತಿಭಟನೆ ಇಡೀ ಸಿಯಾಂಗ್ ಜಿಲ್ಲೆಗೆ ಆವರಿಸಿದೆ. ಹೈಡ್ರೋ ಪವರ್ ಪ್ರಾಜೆಕ್ಟ್ ವಿರುದ್ಧ 12 ಗಂಟೆ ಬಂದ್ ಆಚರಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಶುಕ್ರವಾರ ಈ ಪ್ರತಿಭಟನೆಗೆ ಪೊಲೀಸರು ಸಕಲ ತಯಾರಿ ನಡೆಸಿದ್ದರು, ಪ್ರತಿಭಟನೆ ವೇಳೆ ನೂಕಾಟ, ತಳ್ಳಾಟಗಳು ನಡೆದಿತ್ತು. ಪ್ರತಿಭಟನೆ ಬಳಿಕ ಪೊಲೀಸ್ ನಿಯೋಜನೆ ಸಡಿಲಗೊಂಡಿತ್ತು. ಇದೇ ವೇಳೆ ಉದ್ರಿಕ್ತರ ಗುಂಪು ಏಕಾಏಕಿ ರಸ್ತೆಗಳಲ್ಲಿ ನುಗ್ಗಿದೆ. ಪವರ್ ಪ್ರಾಜೆಕ್ಟ್ ಕಚೇರಿಗಳು, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಪಸಿಘಾಟ್ ಸುಪರಿಡೆಂಟ್ ಆಫ್ ಪೊಲೀಸಿ ಟೋನಿ ತಾಟಕ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷನ ಮನೆ ಧ್ವಂಸ

ಪ್ರತಿಭಟನೆ ಬಳಿಕ ಉದ್ರಿಕ್ತರ ಗುಂಪು ನೇರವಾಗಿ ಅರುಣಾಚಲ ಬಿಜೆಪಿ ರಾಜಾಧ್ಯಕ್ಷ ಹಾಗೂ ಮಾಜಿ ಶಾಸಕ ಕಲಿಂಗ್ ಮಯೋಂಗ್ ಅವರ ಮನೆಯತ್ತ ನುಗ್ಗಿದೆ. ಪಸಿಘಾಟ್‌ನಲ್ಲಿರುವ ಮಯೋಂಗ್ ಮನೆಗೆ ನುಗ್ಗಿದ್ದ ಉದ್ರಿಕ್ತರ ಗುಂಪು ಮನೆಯನ್ನು ಪುಡಿ ಮಾಡಿದೆ. ಆರಂಭದಲ್ಲಿ ಕಲ್ಲು ತೂರಾಟ ನಡೆಸಿದರೆ ಬಲಿಕ ನೇರವಾಗಿ ಮನೆಗೆ ನುಗ್ಗಿ ಪಿಠೋಪಕರಣ ಸೇರಿದಂತಂ ವಸ್ತುಗಳನ್ನು ಪುಡಿ ಮಾಡಿ ಹೊರಗೆಸೆದಿದ್ದಾರೆ. ಕೌಂಪೌಂಡ್ ಧ್ವಂಸಗೊಳಿಸಲಾಗಿದೆ. ಬಾಗಿಲು ಮುರಿಯಲಾಗಿದೆ.

ಪವರ್ ಕಾರ್ಪೋರೇಶನ್ ಕಚೇರಿಗೆ ಬೆಂಕಿ

ಪಸಿಘಾಟ್‌ನಲ್ಲಿರುವ NHPC ಕಚೇರಿಯತ್ತ ನುಗ್ಗಿದ ಉದ್ರಿಕ್ತರು ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಇಡೀ ಕಚೇರಿ ಹೊತ್ತಿ ಉರಿದಿದೆ. ಪೆಟ್ರೋಲ್ ಸೇರಿದಂತೆ ಎಲ್ಲಾ ತಯಾರಿಯೊಂದಿಗೆ ಉದ್ರಿಕ್ತರು ಆಗಮಿಸಿದ್ದರು. ಕೆಲವೇ ಕ್ಷಣದಲ್ಲಿ NHPC ಕಚೇರಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ವೇಳೆ ಕಚೇರಿ ಸಂಪೂರ್ಣ ಹೊತ್ತಿ ಉರಿದಿತ್ತು.

ಪೊಲೀಸ್ ಠಾಣೆಗೆ ಬೆಂಕಿ

ಇದೇ ವೇಳೆ ಉದ್ರಿಕ್ತರ ಗುಂಪು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿದೆ. 1500ಕ್ಕೂ ಹೆಚ್ಚು ಉದ್ರಿಕ್ತರು ಕೈಯಲ್ಲಿ ಆಯುಧ, ಪೆಟ್ರೋಲ್ ಹಿಡಿದುಕೊಂಡೆ ಪೊಲೀಸ್ ಠಾಣೆಗೆ ನುಗ್ಗಿದ್ದರು. ಪೊಲೀಸ್ ವಾಹನ, ಪೊಲೀಸ್ ಠಾಣೆಗೆ ಬೇಕಿ ಹಚ್ಚಿದ್ದಾರೆ. ಪ್ರತಿಭಟನಕಾರರನ್ನು ಹತ್ತಿಕ್ಕಲು ಆಗಮಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉದ್ರಿಕ್ತ ಗುಂಪು ಹಲವು ಬೇಡಿಕೆ ಮುಂದಿಟ್ಟಿದೆ. ಬಂಧಿತ 10 ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಮೊದಲ ಬೇಡಿಕೆ ಮುಂದಿಟ್ಟಿದೆ. ಪ್ರಸ್ತಾವಿತ ಪವರ್ ಪ್ರಾಜೆಕ್ಟ್ ಯೋಜನೆ ಕೈಬಿಡುವಂತೆ ಸೂಚಿಸಿದೆ. ಪ್ಯಾರಾಮಿಲಿಟರಿ ತುಕಡಿಯನ್ನು ಹಿಂಪಡೆಯುವಂತೆ ಉದ್ರಿಕ್ತರು ಹಾಗೂ ಪ್ರತಿಭಟನಾಕಾರರು ಬೇಡಿಕೆ ಮುಂದಿಟ್ಟಿದ್ದಾರೆ.