ಯಮುನಾ ನದಿ ಎಲ್ಲಾ ದಾಖಲೆ ಪುಡಿ ಮಾಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಇದೀಗ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಆವರಣದತ್ತ ನೀರು ನುಗ್ಗಿದೆ.
ನವದೆಹಲಿ(ಜು.13) ಈಗಾಗಲೇ ಪ್ರಳಯ ಸೇರಿದಂತೆ ಹಲವು ಭವಿಷ್ಯಗಳು ಚರ್ಚೆಯಾಗಿದೆ. ಇದರ ನಡುವೆ ಕೆಲ ಅಧ್ಯಯನ ವರದಿಗಳು ಈಗಾಗಲೇ ಹಲವು ಎಚ್ಚರಿಕೆ ನೀಡಿದೆ. ಭವಿಷ್ಯದಲ್ಲಿ ಕೆಲ ನಗರಗಳು ಕಣ್ಮರೆಯಾಗಲಿದೆ ಎಂದಿದೆ. ಈ ವರದಿಯಲ್ಲಿ ಬೆಂಗಳೂರು ನೀರಿಲ್ಲದೆ ಬತ್ತಿ ಹೋಗಲಿದೆ ಎಂದಿದೆ. ಸಮುದ್ರ ಕಿನಾರೆ, ನದಿ ಪಾತ್ರದ ಪ್ರಮುಖ ನಗರಗಳು ಮುಳುಗಡೆ ಭೀತಿ ಎದುರಿಸುತ್ತಿದೆ ಎಂದಿತ್ತು. ಇದೀಗ ಈ ಭವಿಷ್ಯ ನಿಜವಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. ಇದರ ನಡುವೆ ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಖಂಡ ಸೇರಿದಂತೆ ಪ್ರಮುಖ ರಾಜ್ಯಗಳ ಪರಿಸ್ಥಿತಿ ಆತಂಕ ತರುತ್ತಿದೆ. ಯಮುನಾ ನದಿ ಅಪಾಯದ ಮಟ್ಟ ಮೀರಿ ಕೆಲ ದಿನಗಳೇ ಉರುಳಿದೆ. ಇದರ ಪರಿಣಾಮ ದೆಹಲಿಯ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದೀಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಆವರಣದತ್ತ ನೀರು ನುಗ್ಗಿದೆ.
ಯಮುನಾ ನದಿ ನೀರಿನ ಮಟ್ಟ 208.46 ಮೀಟರ್‌ಗೆ ಏರಿಕೆಯಾಗಿದೆ. 1978ರಲ್ಲಿ 207.49 ಮೀಟರ್ ದಾಖಲೆ ಬರೆದಿತ್ತು.ಇದೀಗ 45 ವರ್ಷಗಳ ಬಳಿಕ ಎಲ್ಲಾ ದಾಖಲೆ ಪುಡಿ ಮಾಡಿರು ಯಮುನಾ ನದಿ ಪ್ರತಿ ದಿನ ಅಪಾಯ ಹೆಚ್ಚಿಸಿದೆ. ದೆಹಲಿಯ ರಿಂಗ್ ರೋಡ್, ಸಿವಿಲ್ ಲೈನ್ಸ್ ಏರಿಯಾದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿದೆ. ಈ ಪ್ರದೇಶ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಾವಾಲ್ ಮನೆಗಿಂತ 500 ಮೀಟರ್ ದೂರದಲ್ಲಿದೆ.
ಅಪಾಯದ ಮಟ್ಟ ಮೀರಿ 45 ವರ್ಷದ ದಾಖಲೆ ಮುರಿದ ಯಮುನಾ ನದಿ, ತುರ್ತು ಸಭೆ ಕರೆದ ಸಿಎಂ!
ಸಿವಿಲ್ ಲೈನ್ ಏರಿಯಾದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ. ಸ್ಕೂಟರ್, ಬೈಕ್‌ಗಳು ಮುಳುಗಡೆಯಾಗಿದೆ. ತಗ್ಗ ಪ್ರದೇಶಗಳಲ್ಲಿದ್ದ ಮನೆಗಳು ಭಾಗಶಃ ಮುಳುಗಡೆಯಾಗಿದೆ. ಇನ್ನು ಅಪಾರ್ಟ್‌ಮೆಂಟ್‌ಗಳ ಗ್ರೌಂಡ್ ಫ್ಲೋರ್ ಮುಳುಗಡೆಯಾಗಿದೆ. ನಿಗಮ್ ಭೋದ್ ಘಾಟ್, ಕಾಶ್ಮೀರ್ ಗೇಟ್, ದೆಹಲಿ ಕೆಂಪು ಕೋಟೆ, ಜಿಟಿ ಕರ್ನಲ್ ರೋಡ್ ಸೇರಿದಂತೆ ಹಲವು ಪ್ರದೇಶಗಳು ನೀರಿನ ಆವೃತಗೊಂಡಿದೆ.
ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಖಂಡ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದೆ. ಹೀಗಾಗಿ ದೆಹಲಿಯ ಯಮುನಾ ನದಿಯ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಬಹುತೇಕ ದೆಹಲಿ ಮುಳುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಪ್ರವಾಹಕ್ಕೆ ತುತ್ತಾಗಬಹುದಾದ ಪ್ರದೇಶಗಳಲ್ಲಿ ಸಿಆರ್‌ಪಿಸಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಿ, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ: ರಾಜಧಾನಿ ಸುತ್ತುವರಿದ ಯಮುನಾ..!
ಕಳೆದೆರಡು ದಿನದಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿ ಪರಿಸ್ಥಿತಿ ಕುರಿತು ಸರಣಿ ತುರ್ತು ಸಭೆ ನಡೆಸಿದ್ದಾರೆ. ಜಲಾವೃತಗೊಂಡಿರುವ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಅಪಾಯದ ಮುನ್ಸೂಚನೆ ಇರುವ ಪ್ರದೇಶಗಳಿಂದ ಜನರ ಸ್ಥಳಾಂತರ ಸೇರಿದಂತೆ ಹಲವು ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇತ್ತ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಇದರ ಹೊರತಾಗಿಯೂ ನದಿ ಆಸುಪಾಸಿನ ಜನವಸತಿ ಪ್ರದೇಶ, ಮಾರುಕಟ್ಟೆಗಳಲ್ಲಿ ಆಳೆತ್ತರಕ್ಕೆ ನೀರು ನುಗ್ಗಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಸಚಿವ ಸಂಪುಟದ ತುರ್ತು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಲೆಫ್ಟಿನೆಂಟ್ ಗವರ್ನರ್ ಎಲ್.ಜಿ. ಸಕ್ಸೇನಾ ಗುರುವಾರ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯ ಸಭೆ ಕರೆದಿದ್ದಾರೆ.
