ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಗುರುಗ್ರಾಮದಲ್ಲಿ ದೇಶದ ಮೊದಲ 'ಎಲ್‌ಪಿಜಿ ಎಟಿಎಂ' ಅನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಸ್ವಯಂಚಾಲಿತ ಯಂತ್ರವು ಕೆಲವೇ ನಿಮಿಷಗಳಲ್ಲಿ ಹಗುರವಾದ ಕಾಂಪೋಸಿಟ್ ಸಿಲಿಂಡರ್‌ಗಳನ್ನು ವಿತರಿಸುತ್ತದೆ.

ಗುರುಗ್ರಾಮ (ಮಾ.19): ಬ್ಯಾಂಕ್ ಎಟಿಎಂನಿಂದ ಹಣ ಪಡೆಯುವಷ್ಟೇ ಸುಲಭವಾಗಿ ಇನ್ಮುಂದೆ ನೀವು ಗ್ಯಾಸ್ ಸಿಲಿಂಡರ್ ಅನ್ನೂ ಪಡೆಯಬಹುದು! ಹೌದು, ಹರಿಯಾಣದ ಗುರುಗ್ರಾಮದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ 'ಎಲ್‌ಪಿಜಿ ಎಟಿಎಂ' (LPG ATM) ಅನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದ ಹಲವು ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ ಈ ನವೀನ ಪ್ರಯೋಗ ಮಾಡಲಾಗಿದೆ. ಸೋಹ್ನಾದ ಸೆಕ್ಟರ್ 33ರ ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿಯಲ್ಲಿ ಅಳವಡಿಸಲಾಗಿರುವ ಈ ಎಟಿಎಂ, ಕೇವಲ 2 ರಿಂದ 3 ನಿಮಿಷಗಳಲ್ಲಿ ಸಿಲಿಂಡರ್ ಅನ್ನು ರೀಫಿಲ್ ಮಾಡುವ ಮೂಲಕ ನಿವಾಸಿಗಳಿಗೆ ದೊಡ್ಡ ನೆಮ್ಮದಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಅಗತ್ಯವೇಕೆ?

ಭಾರತೀಯ ಕುಟುಂಬಗಳು ಅಡುಗೆ ಇಂಧನಕ್ಕಾಗಿ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, ಕಳೆದ ವರ್ಷ ಭಾರತವು ಸುಮಾರು 33.15 ಮಿಲಿಯನ್ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಬಳಸಿದೆ. ಇದರಲ್ಲಿ ಶೇ. 60 ರಷ್ಟು ಬೇಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕವೇ ಪೂರೈಸಲಾಗುತ್ತದೆ. ಈ ಆಮದಿನ ಪೈಕಿ ಸುಮಾರು ಶೇ. 90 ರಷ್ಟು ಭಾಗ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಬರುತ್ತದೆ. ಪ್ರಸ್ತುತ ಅಮೆರಿಕ-ಇರಾನ್ ಸಂಘರ್ಷದ ಕಾರಣದಿಂದಾಗಿ ಈ ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಈ ಎಟಿಎಂ ಯಂತ್ರ ಹೇಗೆ ಕೆಲಸ ಮಾಡುತ್ತದೆ

ಸೋಹ್ನಾದಲ್ಲಿ ಅಳವಡಿಸಲಾಗಿರುವ ಈ ಎಟಿಎಂ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಮಾನವ ಸಂಪರ್ಕವಿಲ್ಲದೆ (Contactless) ಕೆಲಸ ಮಾಡುತ್ತದೆ. ಇದು ಹಲವು ವೈಶಿಷ್ಟ್ಯಗಳನ್ನೂ ಹೊಂದಿದೆ. ಇಲ್ಲಿ ಕಬ್ಬಿಣದ ಸಿಲಿಂಡರ್‌ಗಳ ಬದಲಿಗೆ ಹಗುರವಾದ ಮತ್ತು ಸ್ವಚ್ಛವಾದ 'ಕಾಂಪೋಸಿಟ್ ಸಿಲಿಂಡರ್‌'ಗಳನ್ನು ಬಳಸಲಾಗುತ್ತದೆ. ಸಾಂಪ್ರದಾಯಿಕ ಸಿಲಿಂಡರ್‌ಗಳು ಗ್ಯಾಸ್ ಸೇರಿ 31 ಕೆಜಿ ತೂಗಿದರೆ, ಇವು ಕೇವಲ 15 ಕೆಜಿ ತೂಗುತ್ತವೆ. ಈ ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು, ಒಳಗಿರುವ ಅನಿಲದ ಮಟ್ಟವನ್ನು ಗ್ರಾಹಕರು ಸುಲಭವಾಗಿ ನೋಡಬಹುದು. ಇದು ಹೆಚ್ಚು ಸುರಕ್ಷಿತವೂ ಹೌದು.

ಯೂಸರ್‌ಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ಪರಿಶೀಲಿಸಬೇಕು. ನಂತರ ಖಾಲಿ ಸಿಲಿಂಡರ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ (UPI) ಅಥವಾ ಡೆಬಿಟ್ ಕಾರ್ಡ್ ಮೂಲಕ ಡಿಜಿಟಲ್ ಪಾವತಿ ಮಾಡಬೇಕು. ಕೂಡಲೇ ಮಷಿನ್ ತುಂಬಿದ ಸಿಲಿಂಡರ್ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ಖಾಲಿ ಸಿಲಿಂಡರ್ ಅನ್ನು ತನ್ನೊಳಗೆ ಸಂಗ್ರಹಿಸುತ್ತದೆ.

ಸಿಲಿಂಡರ್‌ ತುಂಬುವುದು ಹೇಗೆ

ಮಾರ್ಚ್ 6 ರಂದು ಸ್ಥಾಪಿಸಲಾದ ಈ ಎಟಿಎಂ ಏಕಕಾಲಕ್ಕೆ 10 ಸಿಲಿಂಡರ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಸಿಲಿಂಡರ್‌ಗಳ ಸಂಖ್ಯೆ ಎರಡಕ್ಕೆ ಇಳಿಕೆಯಾದಾಗ, ತಕ್ಷಣವೇ ಹತ್ತಿರದ ಗ್ಯಾಸ್ ಏಜೆನ್ಸಿಗೆ ಅಲರ್ಟ್ ಸಂದೇಶ ಹೋಗುತ್ತದೆ. ಆಗ ಏಜೆನ್ಸಿಯವರು ಬಂದು ಮತ್ತೆ ಸಿಲಿಂಡರ್ ತುಂಬಿಸುತ್ತಾರೆ. ಸದ್ಯ ಈ ಸೌಲಭ್ಯದ ಬಗ್ಗೆ ಜಾಗೃತಿ ಕಡಿಮೆ ಇರುವುದರಿಂದ ಇದುವರೆಗೆ ಕೇವಲ ನಾಲ್ಕು ಸಿಲಿಂಡರ್‌ಗಳು ಮಾತ್ರ ವಿತರಣೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾಂಪೋಸಿಟ್ ಸಿಲಿಂಡರ್‌ಗಳು ತುಕ್ಕು ಹಿಡಿಯುವುದಿಲ್ಲ, ಸಾಗಿಸಲು ಸುಲಭ ಮತ್ತು ಹೆಚ್ಚು ಸುರಕ್ಷಿತವಾಗಿವೆ. ಗ್ರಾಹಕರು ತಮ್ಮ ಹಳೆಯ ಕಬ್ಬಿಣದ ಸಿಲಿಂಡರ್‌ಗಳನ್ನು ನೀಡಿ ಇವುಗಳನ್ನು ಪಡೆದುಕೊಳ್ಳುವ ಅವಕಾಶವೂ ಇಲ್ಲಿದೆ. ಈ ಎಟಿಎಂ ಸೌಲಭ್ಯದಿಂದಾಗಿ ಜನರು ಇನ್ಮುಂದೆ ಗ್ಯಾಸ್ ಡೆಲಿವರಿ ಬಾಯ್‌ಗಳಿಗಾಗಿ ಅಥವಾ ಡೆಲಿವರಿ ಸಮಯಕ್ಕಾಗಿ ಕಾಯುವ ಕಿರಿಕಿರಿ ತಪ್ಪಿದಂತಾಗಿದೆ.