ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೊಮ್ಮೆ ಮಹತ್ವದ ರಾಜಕೀಯ ಮತ್ತು ಸಾಂವಿಧಾನಿಕ ಪ್ರಕ್ರಿಯೆಗೆ ಮುಂದಾಗಿದೆ.

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಕುರಿತಾದ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ನ.30ರಿಂದ 4 ದಿನ ವಿಶೇಷ ಅಧಿವೇಶನ ಕರೆದಿದೆ. ಈಗಾಗಲೇ ಕಳೆದ ಏಪ್ರಿಲ್‌ನಲ್ಲಿ ಸೋಲು ಕಂಡಿದ್ದ ಮಸೂದೆಗಳನ್ನು ಈ ಬಾರಿ ಪಾಸು ಮಾಡಲು ಸರ್ಕಾರ ಶತಪ್ರಯತ್ನ ಮಾಡುತ್ತಿದ್ದರೆ, ಪ್ರತಿಪಕ್ಷಗಳು ಮಾತ್ರ ಸರ್ಕಾರದ ಈ ನಡೆಯ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಿದೆ ಎಂದು ಆರೋಪಿಸಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ಕುರಿತ ಪರ-ವಿರೋಧದ ಚರ್ಚೆಗಳ ವಿವರ ಇಲ್ಲಿದೆ.

ಲೋಕಸಭಾ ಸ್ಥಾನಗಳ ವಿಸ್ತರಣೆ ಏಕೆ?:

ಪ್ರಸ್ತುತ ಲೋಕಸಭಾ ಸ್ಥಾನಗಳ ಹಂಚಿಕೆ 1971ರ ಜನಗಣತಿ ಆಧರಿಸಿದೆ. ಆ ಸಮಯದಲ್ಲಿ ದೇಶದ ಜನಸಂಖ್ಯೆ ಸುಮಾರು 55 ಕೋಟಿಯಷ್ಟಿತ್ತು. ಆದರೆ ಈಗ ಜನಸಂಖ್ಯೆ 3 ಪಟ್ಟು ಹೆಚ್ಚಾಗಿದ್ದರೂ, ಕೆಳಮನೆಯ ಸಂಖ್ಯಾಬಲ ಮಾತ್ರ ಹೆಚ್ಚಾಗಿಲ್ಲ. ಪ್ರಸ್ತುತ ಒಂದು ಲೋಕಸಭಾ ಕ್ಷೇತ್ರದ ಜನಸಂಖ್ಯೆ ಸುಮಾರು 27 ಲಕ್ಷವಿದ್ದು, ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಿದರೆ ಈ ಪ್ರಮಾಣ 18 ಲಕ್ಷಕ್ಕೆ ಇಳಿಯಲಿದೆ. ಕ್ಷೇತ್ರಗಳ ವಿಸ್ತರಣೆಯಿಂದ ಕ್ಷೇತ್ರಗಳ ಗಾತ್ರ ಚಿಕ್ಕದಾಗಿ, ಸಂಸದರು ಜನರಿಗೆ ಸುಲಭವಾಗಿ ಸಿಗುವಂತಾಗುತ್ತದೆ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ.

ದಕ್ಷಿಣಕ್ಕೆ ಅನ್ಯಾಯ ಆತಂಕವೇಕೆ?

ಜನಸಂಖ್ಯೆ ಆಧರಿತ ಮರುವಿಂಗಡಣೆ ಮಾಡಿದರೆ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆಯಾದಂತಾಗುತ್ತದೆ ಮತ್ತು ರಾಷ್ಟ್ರೀಯ ನೀತಿ ನಿರೂಪಣೆ ಹಾಗೂ ಆರ್ಥಿಕ ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣದ ಪ್ರಭಾವ ಕುಗ್ಗುತ್ತದೆ ಎಂಬುದು ವಿಪಕ್ಷಗಳ ಆಕ್ಷೇಪ. ಇದನ್ನು ನಿವಾರಿಸಲು ಸರ್ಕಾರವು ಎಲ್ಲಾ ರಾಜ್ಯಗಳಲ್ಲೂ ಏಕರೂಪವಾಗಿ ಶೇ.50ರಷ್ಟು ಸ್ಥಾನ ಹೆಚ್ಚಿಸುವ ಮತ್ತು 2051ರವರೆಗೆ ರಾಜ್ಯಗಳ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸದಿರುವ ಅಂಶಗಳನ್ನು ಹೊಸ ಮಸೂದೆಯಲ್ಲಿ ಸೇರಿಸಿದೆ. ಆದರೆ ಇದರಲ್ಲೂ ದಕ್ಷಿಣದ ರಾಜ್ಯಗಳಿಗೆ ನ್ಯಾಯ ಸಿಗುವುದಿಲ್ಲ ಎಂಬ ವಾದ ದಕ್ಷಿಣದ ರಾಜ್ಯಗಳದ್ದಾಗಿದೆ.

ಗಡಿ ಬದಲಾವಣೆ ಕುರಿತು ಅನುಮಾನ

ಕೇಂದ್ರ ಸರ್ಕಾರವು ಚುನಾವಣಾ ಲಾಭಕ್ಕಾಗಿ ಕ್ಷೇತ್ರಗಳ ಗಡಿಗಳನ್ನು ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವ (ಜೆರಿಮ್ಯಾಂಡರಿಂಗ್) ಬಗ್ಗೆ ವಿಪಕ್ಷಗಳು ತೀವ್ರ ಆತಂಕ ವ್ಯಕ್ತಪಡಿಸಿವೆ. 2029ರ ಚುನಾವಣೆಗೆ ಮುನ್ನ ಬಿಜೆಪಿಯು ತನಗೆ ಅನುಕೂಲವಾಗುವಂತೆ ದೇಶದ ಚುನಾವಣಾ ನಕ್ಷೆಯನ್ನು ಮರುರಚಿಸಲು ಹೊರಟಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಏಕರೂಪ ಹೆಚ್ಚಳಕ್ಕೂ ವಿರೋಧವೇಕೆ?:

ದಕ್ಷಿಣದ ರಾಜ್ಯಗಳ ಆತಂಕವನ್ನು ದೂರ ಮಾಡಲು ಸರ್ಕಾರ ಶೇ.50ರಷ್ಟು ಏಕರೂಪ ಸ್ಥಾನ ಹೆಚ್ಚಳದ ಸೂತ್ರ ಮುಂದಿಟ್ಟಿದೆ. ಆದರೆ ಇದು ರಾಜ್ಯಗಳ ನಡುವಿನ ಸಂಖ್ಯಾತ್ಮಕ ಅಂತರವನ್ನು ಹೆಚ್ಚಿಸಲಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಸೂತ್ರದ ಪ್ರಕಾರ ಉತ್ತರ ಪ್ರದೇಶದ ಸ್ಥಾನಗಳು 80ರಿಂದ 120ಕ್ಕೆ ಮತ್ತು ಕೇರಳದ ಸ್ಥಾನಗಳು 20ರಿಂದ 30ಕ್ಕೆ ಏರಿಕೆಯಾಗಲಿದ್ದು, ಎರಡೂ ರಾಜ್ಯಗಳ ನಡುವಿನ ಸ್ಥಾನಗಳ ವ್ಯತ್ಯಾಸ 60ರಿಂದ 90ಕ್ಕೆ ಹೆಚ್ಚಾಗಲಿದೆ. ಆದರೆ ಲೋಕಸಭೆಯ ಒಟ್ಟು ಬಲ ಮತ್ತು ಬಹುಮತದ ಮಿತಿಯೂ ಅದೇ ಅನುಪಾತದಲ್ಲಿ ಹೆಚ್ಚಾಗುವುದರಿಂದ ಉತ್ತರ ಪ್ರದೇಶದ ರಾಜಕೀಯ ಪ್ರಾಬಲ್ಯ ಹೆಚ್ಚಾಗುವುದಿಲ್ಲ ಎಂಬುದು ಸರ್ಕಾರದ ವಾದ.

ಮರುವಿಂಗಡಣೆಗೆ ಮಹಿಳಾ ಮಸೂದೆ ಲಿಂಕ್‌ ಏಕೆ?:

ಪ್ರಸ್ತುತ ಇರುವ 543 ಸ್ಥಾನಗಳಲ್ಲೇ ಶೇ.33ರಷ್ಟು ಮಹಿಳಾ ಮೀಸಲು ಜಾರಿಗೊಳಿಸಿದರೆ, ಸಾಮಾನ್ಯ ಸ್ಥಾನಗಳಿಗೆ ಕೇವಲ 362 ಸೀಟುಗಳು ಉಳಿಯುತ್ತವೆ. ಆದರೆ ಲೋಕಸಭಾ ಕ್ಷೇತ್ರಗಳನ್ನು 815ಕ್ಕೆ ಏರಿಸಿದರೆ, ಸುಮಾರು 543 ಸ್ಥಾನಗಳು ಪುರುಷರು ಮತ್ತು ಮಹಿಳೆಯರಿಬ್ಬರ ಸ್ಪರ್ಧೆಗೂ ಮುಕ್ತವಾಗಿರುತ್ತವೆ ಎಂಬುದು ಸರ್ಕಾರದ ವಾದ. ಆದರೆ ಈಗಿರುವ ಸದನದ ಬಲದಲ್ಲೇ ಮೀಸಲಾತಿ ಜಾರಿಗೊಳಿಸಬೇಕೆಂಬುದು ವಿಪಕ್ಷಗಳ ಒತ್ತಾಯ.

ಜನಗಣತಿ ಆಧಾರದ ಬಗ್ಗೆ ವಿವಾದ:

2027ರ ಜನಗಣತಿಯ ಅಂಕಿಅಂಶಗಳು ಪ್ರಕಟವಾಗಿ ನಂತರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯುತ್ತಾ ಕುಳಿತರೆ 2029ರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದು ಸರ್ಕಾರದ ಉದ್ದೇಶ. ಆದರೆ, ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ 18 ವರ್ಷಗಳಷ್ಟು ಹಳೆಯದಾಗಲಿರುವ 2011ರ ಜನಗಣತಿಯನ್ನು ಬಳಸಿಕೊಂಡು, ದೇಶದ ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಲು ಸರ್ಕಾರ ಹುನ್ನಾರ ನಡೆಸಿದೆ ಎಂಬುದು ವಿಪಕ್ಷಗಳ ಆಕ್ಷೇಪ.

ಲೋಕಸಭೆಯಲ್ಲಿ ಪಕ್ಷಗಳ ಬಲಾಬಲ ಹೇಗಿದೆ?

ನವದೆಹಲಿ: ಈ ಹಿಂದೆ ಏಪ್ರಿಲ್‌ನಲ್ಲಿ ಮಂಡನೆಯಾಗಿ, ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ಸೋತಿದ್ದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ನ.30ರಿಂದ ಲೋಕಸಭೆಯಲ್ಲಿ ಹಾಗೂ ಡಿ.2ರಿಂದ ರಾಜ್ಯಸಭೆಯಲ್ಲಿ ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ಮತ್ತೆ ಮಂಡಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿರುವುದಕ್ಕೆ ಮೈತ್ರಿಕೂಟದ ಬಲಾಬಲ ಏರಿಕೆಯಾಗಿರುವುದೇ ಪ್ರಮುಖ ಕಾರಣ.

ಬಲದಲ್ಲಿ ಆದ ಬದಲಾವಣೆಯೇನು?:

ಏಪ್ರಿಲ್‌ನಲ್ಲಿ ಮಸೂದೆ ಮಂಡನೆಯಾದಾಗ 298 ಮತ ಪಡೆದಿತ್ತಾದರೂ, ಅಂದು ಹಾಜರಿದ್ದವರಲ್ಲಿ ಮೂರನೇ ಎರಡರಷ್ಟಾದ 352 ಸಂಸದರ ಬೆಂಬಲವಿಲ್ಲದೆ ಅನುಮೋದನೆ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಮೇನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಟಿಎಂಸಿಯ 20 ಸಂಸದರು ಬಂಡೆದ್ದು ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು. ಅತ್ತ ಶಿರೋಮಣಿ ಅಕಾಲಿ ದಳದಲ್ಲಿದ್ದ ಓರ್ವ ಸಂಸದ ಕೂಡ ಎನ್‌ಡಿಎಗೆ ಜೈ ಎಂದ ಹಿನ್ನೆಲೆ, ಆಡಳಿತಾರೂಢ ಮೈತ್ರಿಕೂಟದ ಬಲ 319 ಆಗಿದೆ. ಜತೆಗೆ 8 ಸಂಸದರಿರುವ ಎನ್‌ಸಿಪಿ (ಶರದ್‌ ಬಣ) ಕೂಡ ಎನ್‌ಡಿಎ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದೆ

ಜೊತೆಗೆ ದಕ್ಷಿಣದ ರಾಜ್ಯಗಳ ಆತಂಕ ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಡಿಎಂಕೆಯ 22, ವೈಎಸ್‌ಆರ್‌ ಕಾಂಗ್ರೆಸ್‌ನ 4 ಸಂಸದರು ಮಸೂದೆಯ ಪರವಾಗಿ ಮತ ಚಲಾಯಿಸಬಹುದು ಎನ್ನುವ ನಿರೀಕ್ಷೆ ಸರ್ಕಾರದ್ದು. ಜೊತೆಗೆ ಕೆಲ ಪಕ್ಷೇತರರ ಮತಗಳ ನಿರೀಕ್ಷೆಯಲ್ಲೂ ಸರ್ಕಾರ ಇದೆ.

ಒಂದು ವೇಳೆ ವಿಪಕ್ಷಗಳ ಪೈಕಿ ಕೆಲ ಪಕ್ಷಗಳು ಮತ ಚಲಾಯಿಸದೇ ಗೈರಾದರೆ ಆಗ ಸದನದ ಬಲ ಕುಸಿದು, ಲಭ್ಯವಿರುವ ಸಂಖ್ಯಾಬಲದಿಂದಲೇ ಮಸೂದೆ ಅಂಗೀಕಾರವಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಗೆಲುವಿನ ಲೆಕ್ಕಾಚಾರದ ಹಾದಿ

  • 543 ಸದಸ್ಯ ಬಲದ ಲೋಕಸಭೆಯಲ್ಲಿ ಹಾಲಿ 540 ಸದಸ್ಯರು
  • ಮೂರನೇ ಎರಡರಷ್ಟು ಬಹುಮತ ಪಡೆಯಲು 360 ಮತ ಬೇಕು
  • ಎನ್‌ಡಿಎ ಮೈತ್ರಿಕೂಟದ ಬಳಿ ಇದೀಗ ಇರುವುದು 319 ಮಾತ್ರ
  • ಟಿಎಂಸಿ, ಉದ್ಧವ ಬಣದ ಬಂಡಾಯ ಸಂಸದರ ಬೆಂಬಲ ನಿರೀಕ್ಷೆ
  • ಡಿಎಂಕೆ, ವೈಎಸ್ಸಾರ್‌, ಪಕ್ಷೇತರರು ಬೆಂಬಲಿಸಿದರೆ ಜಯ ಸಾಧ್ಯತೆ