ಮಹಿಳಾ ಮೀಸಲಾತಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದ್ದು, ಇದು ರಾಜಕೀಯ ಪ್ರೇರಿತವಾಗಿದೆ. ಜನಸಂಖ್ಯೆ ಆಧಾರಿತ ಈ ಮರುವಿಂಗಡಣೆಯು, ಉತ್ತಮ ಪ್ರಗತಿ ಸಾಧಿಸಿರುವ ದಕ್ಷಿಣದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕುಗ್ಗಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ ಎಂದರು.

- ಸಿದ್ದರಾಮಯ್ಯ, ಮಾನ್ಯ ಮುಖ್ಯಮಂತ್ರಿಗಳು

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ದಿಢೀರ್‌ ಮುಂದಾಗಿರುವ ಜೊತೆಗೆ ಅದನ್ನು ಕ್ಷೇತ್ರ ಮರುವಿಂಗಡಣೆಗೆ ಜೋಡಿಸುವ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ಮೋದಿಯವರು ಮತ್ತು ಕೇಂದ್ರ ಸರ್ಕಾರ ತೋರುತ್ತಿರುವ ಅತೀವ ಆಸಕ್ತಿಯೇ ಅವರ ನಿಜವಾದ ಉದ್ದೇಶದ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ. ಇದು ಶುದ್ಧ ಚುನಾವಣಾ ರಾಜಕಾರಣವಲ್ಲದೆ ಬೇರೇನೂ ಅಲ್ಲ.

ಮಹಿಳೆಯರ ಸಾಮಾಜಿಕ, ಆರ್ಥಿಕ, ರಾಜಕೀಯ ಸಬಲೀಕರಣಕ್ಕೆ ಕಾಂಗ್ರೆಸ್‌ ಪಕ್ಷ ಸದಾಕಾಲ ಬೆಂಗಾವಲಾಗಿ ನಿಂತಿದೆ. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಯ ಪರವಾಗಿದೆ ಮತ್ತು ಅಧಿಕಾರದಲ್ಲಿದ್ದಾಗೆಲ್ಲ ಇದನ್ನು ಜಾರಿಗೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನೂ ಮಾಡಿದೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದು ತಿಳಿದುಕೊಂಡಿದ್ದೇನೆ. ಮಹಿಳಾ ಮೀಸಲಾತಿ ಕಾಯಿದೆಯನ್ನು ತೋರಿಕೆಗಷ್ಟೇ ಮುಂದುವರಿಸಿಕೊಂಡು ಕ್ಷೇತ್ರ ಮರುವಿಂಗಡಣೆ ನಡೆಸಲು ತರಾತುರಿಯಲ್ಲಿ ಮುಂದಾಗಿರುವ ಹಿಂದೆ ರಾಜಕೀಯ ಉದ್ದೇಶವಿರುವುದು ಸುಸ್ಪಷ್ಟ.

ದಕ್ಷಿಣ ರಾಜ್ಯಗಳಿಗೆ ಅನ್ಯಾಯ

ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಲೋಕಸಭಾ ಸ್ಥಾನಗಳ ಸಂಖ್ಯೆ ಇಳಿಕೆಯಾಗುವುದಿಲ್ಲ, ಬದಲಿಗೆ ಹೆಚ್ಚಳವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ನಾನು ಪ್ರತಿಕ್ರಿಯಿಸಿದ್ದೆ. ಪ್ರಶ್ನೆಯಿರುವುದು ಸೀಟುಗಳ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಅಲ್ಲ, ಬದಲಿಗೆ ಈ ಹೆಚ್ಚಳವು ಹಿಂದಿ ಭಾಷಿಕ ರಾಜ್ಯಗಳೂ ಸೇರಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆಡೆಗೆ ಹೆಚ್ಚು ಪಕ್ಷಪಾತಿಯಾಗಿರಲಿದೆ ಎನ್ನುವುದರಲ್ಲಿ ಎಂದು ತಿಳಿಸಿದ್ದೆ. ಈ ರಾಜ್ಯಗಳ ಹೋಲಿಕೆಯಲ್ಲಿ ದಕ್ಷಿಣದ ರಾಜ್ಯಗಳು ಕಡಿಮೆ ಸ್ಥಾನಗಳನ್ನು ಪಡೆಯಲಿವೆ ಎಂದು ವಿವರಿಸಿದ್ದೆ.

ದೇಶದಲ್ಲಿ ಮತದಾರರ ಪಟ್ಟಿಯ ಆಮೂಲಾಗ್ರ ಪರಿಷ್ಕರಣೆಯು (ಎಸ್‌ಐಆರ್‌) ಹಂತಹಂತವಾಗಿ ನಡೆಯುತ್ತಿದ್ದು, ಇದು ಉಂಟುಮಾಡಿರುವ ಗೊಂದಲಗಳಿಗೆ ಯಾವುದೇ ಸಮರ್ಪಕ ಪರಿಹಾರಗಳು ಲಭಿಸಿಲ್ಲ. ವಿಶೇಷವಾಗಿ ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಪರಿಷ್ಕರಣೆ ಮೂಡಿಸಿರುವ ಅನುಮಾನಗಳು ಇದನ್ನೊಂದು ರಾಜಕೀಯೇತರವಾದ ಪ್ರಕ್ರಿಯೆಯಾಗಿ ನೋಡುವ ವಿಶ್ವಾಸವವನ್ನು ಉಳಿಸಿಲ್ಲ.

ಮರುವಿಂಗಡಣೆ ರಾಜಕೀಯ ಅಸ್ತ್ರವಾಗದಿರಲಿ

ಕ್ಷೇತ್ರ ಮರುವಿಂಗಡಣೆಯಂಥ ಮಹತ್ವದ ವಿಚಾರದಲ್ಲಿ ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು, ಅದರಲ್ಲೂ ವಿಶೇಷವಾಗಿ ವಿಪಕ್ಷಗಳ ಅಭಿಪ್ರಾಯ ಪಡೆದು, ಅವರ ಆತಂಕಗಳನ್ನು ಪರಿಹರಿಸಿದ ನಂತರವಷ್ಟೇ ಮುಂದುವರಿಯುವುದು ನೈಜ ಅರ್ಥದಲ್ಲಿ ಒಕ್ಕೂಟ ತತ್ವ ಎತ್ತಿಹಿಡಿಯಲಿದೆ. ಆದರೆ, ಕೇವಲ ರಾಜಕಾರಣವೇ ಮುಖ್ಯವಾದರೆ, ಮರುವಿಂಗಡಣೆ ಎಂಬುದು ಒಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗಿ ವಿಪಕ್ಷಗಳನ್ನು ಚುನಾವಣಾ ರಾಜಕಾರಣದಲ್ಲಿ ಮೂಲೆಗೆ ಸರಿಸುವ, ಅವುಗಳ ದನಿಯನ್ನು ಹತ್ತಿಕ್ಕುವ ಗೋಪ್ಯ ಉದ್ದೇಶ ಹೊರಬೀಳಲಿದೆ. ಹಾಗಲ್ಲವಾದರೆ, ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕ ಮಾನದಂಡಗಳ ಮೂಲಕ ಮರುವಿಂಗಡಣೆಯ ಕಾರ್ಯ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಈ ವಿಚಾರವಾಗಿ ಕೆಲ ಪ್ರಮುಖ ಅಂಶಗಳ ಬಗ್ಗೆ ನಾನು ಗಮನಸೆಳೆಯಲು ಬಯಸುತ್ತೇನೆ.

ಕುಗ್ಗದಿರಲಿ ದಕ್ಷಿಣದ ರಾಜ್ಯಗಳ ದನಿ

ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆಯ ಅಡಿ ಪ್ರತಿ ರಾಜ್ಯದ ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ ಉಂಟಾಗಲಿರುವುದು ಸ್ಪಷ್ಟವಾದರೂ ದಕ್ಷಿಣದ ರಾಜ್ಯಗಳ ದನಿ ಸಂಸತ್ತಿನಲ್ಲಿ ಕುಗ್ಗುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿ ಪ್ರಾಬಲ್ಯದ ಉತ್ತರದ, ಹಿಂದಿ ಭಾಷಿಕ ರಾಜ್ಯಗಳಿಗೆ ಈ ವಿಂಗಡಣೆಯಿಂದ ನಿಚ್ಚಳವಾಗಿ ಅನುಕೂಲವಾಗಲಿದೆ. ಮರುವಿಂಗಡಣೆಯಿಂದಾಗಿ ಪ್ರಸ್ತುತ ದೇಶದಲ್ಲಿರುವ 543 ಲೋಕಸಭಾ ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದೆ ಎನ್ನುವ ಅಭಿಪ್ರಾಯವಿದೆ.

ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ ಪ್ರಸ್ತುತ ಇರುವ 80 ರಿಂದ 120 ಸ್ಥಾನಗಳಿಗೆ ಏರಿಕೆ ಕಂಡರೆ (+40), ಬಿಹಾರವು 40 ರಿಂದ 60 (+20), ಮಧ್ಯಪ್ರದೇಶವು 29 ರಿಂದ 43–44 (+14–15), ರಾಜಸ್ಥಾನವು 25 ರಿಂದ 37-38 (+12-13) ಮಹಾರಾಷ್ಟ್ರವು 48 ರಿಂದ 72 (+24), ಮತ್ತು ಗುಜರಾತ್‌‌ನ ಲೋಕಸಭಾ ಸ್ಥಾನಗಳ ಸಂಖ್ಯೆ 26 ರಿಂದ 39ಕ್ಕೆ (+13) ಏರಿಕೆಯಾಗಲಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ದಕ್ಷಿಣ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಸಾಧಾರಣ ಹೆಚ್ಚಳ ಮಾತ್ರವೇ ಕಂಡುಬರಲಿದೆ. ಕರ್ನಾಟಕ 28 ರಿಂದ 42 ಕ್ಕೆ (+14), ತಮಿಳುನಾಡು 39 ರಿಂದ 58-59 (+20), ಆಂಧ್ರಪ್ರದೇಶ 25 ರಿಂದ 37-38 (+12-13), ತೆಲಂಗಾಣ 17 ರಿಂದ 25-26 (+8-9), ಮತ್ತು ಕೇರಳದಲ್ಲಿ 20 ರಿಂದ 30ಕ್ಕೆ (+10) ಸ್ಥಾನಗಳು ಏರಿಕೆಯಾಗಲಿವೆ.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮಾನವಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣದ ಐದು ರಾಜ್ಯಗಳು ಒಟ್ಟು ಕೇವಲ 63-66 ಹೆಚ್ಚುವರಿ ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಪ್ರಾಬಲ್ಯವಿರುವ ಏಳು ರಾಜ್ಯಗಳಲ್ಲಿಯೇ ಸುಮಾರು 128-131 ಸ್ಥಾನಗಳು ಏರಿಕೆಯಾಗಲಿವೆ. ದಕ್ಷಿಣದ ರಾಜ್ಯಗಳ ಹೋಲಿಸಿದಲ್ಲಿ ಸುಮಾರು ಎರಡು ಪಟ್ಟು ಹೆಚ್ಚಳವನ್ನು ನಾವು ಕಾಣಬಹುದು. ಕ್ಷೇತ್ರ ಮರುವಿಂಗಡಣೆಯ ವೇಳೆ ಪ್ರಸಕ್ತ ಸಂಸತ್ತಿನಲ್ಲಿ ವಿವಿಧ ರಾಜ್ಯಗಳು ಹೊಂದಿರುವ ಪ್ರಾತಿನಿಧ್ಯದ ಅನುಪಾತವನ್ನೇ ಮುಂದುವರಿಸಲಾಗುವುದು ಎಂದು ಹೇಳಲಾಗುತ್ತಿದೆಯಾದರೂ ಇದು ವಿವಿಧ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಸಂಖ್ಯೆಗಳ ನಡುವೆ ಉಂಟಾಗಲಿರುವ ‘ಅಗಾಧ ಅಂತರಕ್ಕೆ’ ಸಮರ್ಥ ಉತ್ತರವಾಗದು.

ಅಧಿಕಾರದ ಅಸಮಾನ ಕೇಂದ್ರೀಕರಣ

ಪ್ರಸ್ತಾವಿತ ಮರು ವಿಂಗಡಣೆಯಡಿ ದೇಶದ ವಿವಿಧ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳಲ್ಲಿ ಉಂಟಾಗುವ ಅಂತರದ ಕಂದರವನ್ನು ಒಮ್ಮೆ ಗಮನಿಸೋಣ. ಉತ್ತರ ಪ್ರದೇಶವು ಪ್ರಸ್ತುತ ಕರ್ನಾಟಕಕ್ಕಿಂತ 52 ಸ್ಥಾನಗಳನ್ನು ಹೆಚ್ಚು ಹೊಂದಿದೆ. ಕ್ಷೇತ್ರ ಮರುವಿಂಗಡಣೆ ನಂತರ ಈ ಕಂದರ 78ಕ್ಕೆ ಏರಲಿದೆ. ಅದೇ ರೀತಿ, ಪ್ರಸಕ್ತ ಮಹಾರಾಷ್ಟ್ರವು ಕರ್ನಾಟಕಕ್ಕಿಂತ 20 ಸ್ಥಾನಗಳನ್ನು ಹೆಚ್ಚು ಹೊಂದಿದ್ದು, ಮರುವಿಂಗಡಣೆ ನಂತರ ಈ ಅಂತರ 30 ಸ್ಥಾನಗಳಿಗೆ ವಿಸ್ತರಿಸಲಿದೆ. ಈ ಬಗೆಯ ಅಂತರ ಕೇವಲ ಸಂಖ್ಯೆಗಳ ನಡುವಿನದ್ದಲ್ಲ, ಜನತಂತ್ರದ ಆಶಯಕ್ಕೆ ವಿರುದ್ಧವಾದ ‘ಅಧಿಕಾರದ ಅಸಮಾನ ಕೇಂದ್ರೀಕರಣ’ದ ದಿಕ್ಸೂಚಿಯಾಗಿದೆ. ಸಂವಿಧಾನವು ರಾಜ್ಯಗಳ ನಡುವೆ ಭೇದವನ್ನು ಎಣಿಸುವುದಿಲ್ಲ, ಬದಲಿಗೆ ರಾಜ್ಯಗಳ ನಡುವಿನ ಸರಿಸಮಾನತೆಯನ್ನು ಎತ್ತಿಹಿಡಿಯುತ್ತದೆ, ಸಾಂವಿಧಾನಿಕ ಚೌಕಟ್ಟಿಗೆ ಒಳಪಟ್ಟು ಪ್ರತಿಯೊಂದು ರಾಜ್ಯದ ಸಾರ್ವಭೌಮತೆಯನ್ನು ಖಚಿತಪಡಿಸುತ್ತದೆ.

ನಮ್ಮ ಒಕ್ಕೂಟ ವ್ಯವಸ್ಥೆಯು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಸಮತೋಲಿತವಾಗುತ್ತಿದೆ. ಈಗಾಗಲೇ ಅನುದಾನ ಹಾಗೂ ತೆರಿಗೆ ಪಾಲಿನ ವಿಚಾರದಲ್ಲಿ ಈ ಅಸಮತೋಲನ ಉಂಟುಮಾಡಿರುವ ಗಂಭೀರ ಆರ್ಥಿಕ ಪರಿಣಾಮಗಳನ್ನು ಕರ್ನಾಟಕ ಸಮರ್ಥವಾಗಿ ದೇಶದ ಮುಂದಿರಿಸಿದೆ. ಈ ಅಸಮತೋಲನ ಸಂಸದೀಯ ವ್ಯವಸ್ಥೆಗೂ ವಿಸ್ತರಿಸಿ ಇಡೀ ಒಕ್ಕೂಟ ವ್ಯವಸ್ಥೆಯೇ ನಿರರ್ಥಕವಾಗಬಾರದು ಎನ್ನುವುದು ಕರ್ನಾಟಕವೂ ಸೇರಿ ದಕ್ಷಿಣದ ರಾಜ್ಯಗಳ ಕಾಳಜಿ. ಹಾಗಾಗಿ, ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕೇವಲ ಜನಸಂಖ್ಯೆ ಮತ್ತು ಭೌಗೋಳಿಕತೆಯನ್ನು ಮಾತ್ರ ಪರಿಗಣಿಸುವ ಪರಿಪಾಠಕ್ಕೆ ಸೀಮಿತಗೊಳ್ಳದೆ ಅದನ್ನು ವಿಸ್ತರಿಸಬೇಕಾದುದು ಇಂದಿನ ಅಗತ್ಯ. ಆ ಮುಖೇನ ಒಕ್ಕೂಟ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರುಗೊಳ್ಳಬೇಕಿದೆ.

ಕ್ಷೇತ್ರ ವಿಂಗಡಣೆಗಿರಲಿ ವೈಜ್ಞಾನಿಕ ಸೂತ್ರ

ಮಾನವಿಕ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಯಲ್ಲಿ ಉತ್ತಮ ಸಾಧನೆ ಮೆರೆದು ಒಕ್ಕೂಟದ ಆಶಯಗಳನ್ನು ಎತ್ತಿಹಿಡಿದಿರುವ ದಕ್ಷಿಣದ ರಾಜ್ಯಗಳನ್ನು ಅವುಗಳ ‘ಸಾಧನೆಗಾಗಿಯೇ ಶಿಕ್ಷಿಸುವ’ ಪರಿಪಾಠ ನಿಲ್ಲಿಸಿ, ಅವುಗಳಿಗೆ ಅರ್ಹ ಮನ್ನಣೆ ನೀಡುವ, ಬೇರೆ ರಾಜ್ಯಗಳೂ ಆ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಕೆಲಸಕ್ಕೆ ಮುಂದಾಗಬೇಕಿದೆ.

‘ಒಬ್ಬ ವ್ಯಕ್ತಿ, ಒಂದು ಮತ’ ಎನ್ನುವ ಸಾಂವಿಧಾನಿಕ ತತ್ವ ಎತ್ತಿಹಿಡಿಯುತ್ತಲೇ, ಜನಸಂಖ್ಯೆಯ ಪ್ರಮಾಣಾನುಗುಣದ ಜೊತೆಗೆ ದೇಶದ ಅಭಿವೃದ್ಧಿಗೆ ಪ್ರತಿಯೊಂದು ರಾಜ್ಯವೂ ನೀಡುತ್ತಿರುವ ಕೊಡುಗೆ, ಮಾನವಿಕ ಅಭಿವೃದ್ದಿಯಲ್ಲಿ ಮಾಡಿರುವ ಸಾಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತಹ ವೈಜ್ಞಾನಿಕ ಸೂತ್ರವೊಂದನ್ನು ಅಭಿವೃದ್ಧಿಪಡಿಸಿ ಅದಕ್ಕೆ ಅನುಗುಣವಾಗಿ ಕ್ಷೇತ್ರ ವಿಂಗಡಣೆ ಮಾಡುವುದು ಪ್ರಸಕ್ತ ಸಂದರ್ಭದಲ್ಲಿ ಹೆಚ್ಚು ಸೂಕ್ತ. ಜನಸಂಖ್ಯೆಯನ್ನು ಮೂಲ ಆಧಾರವಾಗಿ ಇರಿಸಿಕೊಂಡು, ಅದರೊಟ್ಟಿಗೆ ಮೇಲೆ ಹೇಳಿದ ವಿಷಯಗಳಲ್ಲಿ ಸಾಧನೆ ಮಾಡಿರುವ ರಾಜ್ಯಗಳ ಧ್ವನಿಯು ಕ್ಷೀಣಗೊಳ್ಳದಂತೆ ರಕ್ಷಿಸುವ ಸಲುವಾಗಿ ನ್ಯಾಯಯುತವೂ, ಸೂಕ್ತವೂ ಆದ ಮಾನದಂಡಗಳಡಿ ಹೆಚ್ಚುವರಿಯಾಗಿ ವಿಶೇಷ ಸ್ಥಾನಗಳನ್ನು ಆ ರಾಜ್ಯಗಳಿಗೆ ನೀಡುವ ಕುರಿತು ಚಿಂತಿಸಲು ಇದು ಸಕಾಲ.

ಇದರೊಟ್ಟಿಗೆ, ದಕ್ಷಿಣದ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳನ್ನು ಶಾಸನಾತ್ಮಕ ಪ್ರಕ್ರಿಯೆಯಲ್ಲಿ, ನೀತಿ-ನಿರೂಪಣೆಗಳ ವಿಚಾರದಲ್ಲಿ ಹೆಚ್ಚೆಚ್ಚು ಒಳಗೊಳ್ಳುವ ಸಲುವಾಗಿ, ಅವುಗಳಿಗೆ ನ್ಯಾಯಯುತ ಪ್ರಾಶಸ್ತ್ಯವನ್ನು ನೀಡುವುದಕ್ಕಾಗಿ ಪ್ರಸ್ತುತ ಸಂಸದೀಯ ವ್ಯವಸ್ಥೆಯಲ್ಲಿ ಇರುವ ಮೇಲ್ಮನೆಯ ಸ್ವರೂಪದಲ್ಲೂ (ರಾಜ್ಯಸಭೆ) ಕ್ರಾಂತಿಕಾರಕ ಬದಲಾವಣೆಗಳಿಗೆ ಕೇಂದ್ರ ಸರ್ಕಾರವು ಮುಂದಾಗಬೇಕಿದೆ.

ರಾಜ್ಯಸಭೆಯನ್ನು ಮರುರೂಪಿಸುವ ಅವಶ್ಯಕತೆ

ಜಾಗತಿಕವಾಗಿ ವಿವಿಧ ಪ್ರಜಾಸತ್ತಾತ್ಮಕ ದೇಶಗಳು, ಒಕ್ಕೂಟಗಳು ತಮ್ಮಲ್ಲಿನ ಒಕ್ಕೂಟ ವ್ಯವಸ್ಥೆ ಬಲಪಡಿಸುವ ಸಲುವಾಗಿ ಅಳವಡಿಸಿಕೊಂಡಿರುವ ಮಾದರಿಗಳನ್ನು ಈ ವಿಚಾರವಾಗಿ ಗಮನಿಸಬಹುದು. ಅಮೆರಿಕದ ಸೆನೆಟ್‌-ರಾಜ್ಯಗಳ ಜನಸಂಖ್ಯೆ, ಗಾತ್ರ ಪರಿಗಣಿಸದೆ ಎಲ್ಲ ರಾಜ್ಯಗಳಿಗೆ ಸಮನಾದ ಸ್ಥಾನ ನೀಡುವುದು, ಜರ್ಮನಿಯ ಬುಂಡೆಸ್‌ರಾಟ್-ಪ್ರಾಂತೀಯ ಸರ್ಕಾರಗಳು ಮೇಲ್ಮನೆಗೆ ನೇರವಾಗಿ ತಮ್ಮ ಪ್ರತಿನಿಧಿಗಳನ್ನು ನಿಯೋಜಿಸುವುದು ‌ಹಾಗೂ ಐರೋಪ್ಯ ಒಕ್ಕೂಟ ಅಳವಡಿಸಿಕೊಂಡಿರುವ ‘ಡಿಗ್ರೆಸಿವ್‌ ಪ್ರೊಪೊಷನಾಲಿಟಿ’ (ಕಡಿಮೆ ಜನಸಂಖ್ಯೆ ಇರುವ ದೇಶಗಳು ಹೆಚ್ಚು ಜನಸಂಖ್ಯೆ ಇರುವ ದೇಶಗಳಿಗಿಂತ ತಲಾವಾರು ಹೆಚ್ಚು ಸ್ಥಾನಗಳನ್ನು ಪಡೆಯುವುದು) ಮುಂತಾದ ಮಾದರಿಗಳನ್ನು ನಾವು ಗಮನಿಸಬಹುದು. ಈ ಎಲ್ಲವೂ ಒಕ್ಕೂಟ ವ್ಯವಸ್ಥೆಗೆ ಅಗತ್ಯವಾದ ಅಧಿಕಾರ ಸಮತೋಲನದ ತತ್ವ ಒದಗಿಸುತ್ತವೆ.

ಮೇಲಿನ ಈ ಮಾದರಿಗಳಲ್ಲಿ ಸಮಾನವಾಗಿ ಗೋಚರಿಸುವ ಒಂದು ಅಂಶವೆಂದರೆ ಅದು ಸಶಕ್ತವಾದ ಮೇಲ್ಮನೆ. ಇದು ಮೇಲ್ಮನೆಗಳನ್ನು ಕೇವಲ ಔಪಚಾರಿಕವಾಗಿ, ಚರ್ಚಾಕಮ್ಮಟವಾಗಿ ಇರಿಸಿಕೊಳ್ಳುವ ಮಾದರಿಗಿಂತ ವಿಭಿನ್ನವಾದದ್ದು. ಭಾರತವೂ ಸಹ ತನ್ನ ಮೇಲ್ಮನೆಯ ಸ್ವರೂಪದಲ್ಲಿ ರಚನಾತ್ಮಕವಾದ ಬದಲಾವಣೆಗಳನ್ನು ತರುವ ಮೂಲಕ ಅದನ್ನು ಶಾಸನಾತ್ಮಕ ಪ್ರಕ್ರಿಯೆಗಳಲ್ಲಿ ಹೆಚ್ಚು ಸಕ್ರಿಯಗೊಳಿಸುವ, ಸಶಕ್ತಗೊಳಿಸುವ ಅಗತ್ಯವಿದೆ. ವಿಶೇಷವಾಗಿ ವಿವಿಧ ರಾಜ್ಯಗಳು ತಮ್ಮ ಸಾಂವಿಧಾನಿಕ ಹಿತಾಸಕ್ತಿ, ಆಶೋತ್ತರಗಳನ್ನು ಸಂರಕ್ಷಿಸಿಕೊಳ್ಳಲು ಅಗತ್ಯವಾದ ರೀತಿಯಲ್ಲಿ ರಾಜ್ಯಸಭೆಯನ್ನು ಮರುರೂಪಿಸುವ ಬಗ್ಗೆ ನಾವು ಚಿಂತಿಸಬೇಕಿದೆ.

ಒಕ್ಕೂಟ ವ್ಯವಸ್ಥೆ ಎನ್ನುವುದು ರಾಜ್ಯಗಳ ನಡುವೆ ಸಮತೆಯನ್ನು ಸಾರುವ, ಅವುಗಳ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಸಾಂವಿಧಾನಿಕ ಆಶಯವಾಗಿದೆ, ಕ್ಷೇತ್ರ ಮರುವಿಂಗಡಣೆ ಈ ಆಶಯಗಳಿಗೆ ಪೂರಕವಾಗಿ ವಿಕಸಿತವಾಗಬೇಕೇ ಹೊರತು ವಾಸ್ತವಿಕ ಸವಾಲುಗಳಿಗೆ ವಿಮುಖವಾಗಿ, ಅತಾರ್ಕಿಕ ಚೌಕಟ್ಟಿಗೆ ಒಳಪಟ್ಟು ರಾಜಕೀಯ ಹಿತಸಾಧನೆಗೆ ಬಳಕೆಯಾಗಬಾರದು.