ತಲೆಗೆ 14 ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದ ಮಹಿಳಾ ನಕ್ಸಲೈಟ್ ಸುನೀತಾ, ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ. ಕೇಂದ್ರ ಸರ್ಕಾರದ ಕಠಿಣ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಸಿಕ್ಕ ಫಲ ಇದಾಗಿದೆ.
ತಲೆಗೆ 14 ಲಕ್ಷ ರೂಪಾಯಿ ಘೋಷಿಸಲ್ಪಟ್ಟಿದ್ದ ಮಹಿಳಾ ನಕ್ಸಲ್ ಪೊಲೀಸರಿಗೆ ಶರಣು
ಬಾಲಘಾಟ್: ತಲೆಗೆ 14 ಲಕ್ಷ ರೂಪಾಯಿ ಘೋಷಿಸಲ್ಪಟ್ಟಿದ್ದ ಮಹಿಳಾ ನಕ್ಸಲೈಟ್ ಪೊಲೀಸರಿಗೆ ಶರಣಾಗಿದ್ದಾಳೆ. ಮಧ್ಯ ಪ್ರದೇಶದ ಬಾಲಘಾಟ್‌ನಲ್ಲಿ ಆಕೆ ಪೊಲೀಸರಿಗೆ ಶರಣಾಗಿದ್ದು, ನಕ್ಸಲ್ ವಿರುದ್ಧದ ಕೇಂದ್ರ ಸರ್ಕಾರದ ಕಾರ್ಯಾಚರಣೆಯ ಪರಿಣಾಮ ಇದಾಗಿದೆ. ನಕ್ಸಲರನ್ನು 2026ರ ವೇಳೆಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಗೃಹ ಸಚಿವ ಅಮಿತ್ ಷಾ ಪಣ ತೊಟ್ಟಿದ್ದು, ಹೀಗಾಗಿ ಈಗ ಶರಣಾಗತಿ ಅಥವಾ ಸಾವು ಇದೆರಡೇ ಆಯ್ಕೆ ನಕ್ಸಲರ ಮುಂದಿದೆ. ಹೀಗಾಗಿ ಅನೇಕರ ನಕ್ಸಲರು ಈಗಾಗಲೇ ಸರ್ಕಾರದ ಮುಂದೆ ಶರಣಾಗಿದ್ದಾರೆ. ಶರಣಾಗದ ಅನೇಕ ನಕ್ಸಲರು ಭದ್ರತಾ ಪಡೆಯೊಂದಿಗಿನ ಚಕಮಕಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾದ ನಕ್ಸಲ್ ಸುನೀತಾ
ಹಾಗೆಯೇ ಈಗ ಮಹಿಳಾ ಮಾವೋವಾದಿ ನಕ್ಸಲ್ ಸುನೀತಾ ಅವರು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾಳೆ. ನವಂಬರ್ ಒಂದರಂದು ಶಸ್ತ್ರಾಸ್ತ್ರ ಕೆಳಗಿಟ್ಟ ಸುನೀತಾ ಅವರು ಹಾಕ್ ಫೋರ್ಸ್‌ನ ಸಹಾಯಕ ಕಮಾಂಡರ್ ರೂಪೇಂದ್ರ ಧುರ್ವೆ ಅವರ ಮುಂದೆ ನವೆಂಬರ್ 1 ರಂದು ಶರಣಾಗಿದ್ದಾರೆ.
ಎನ್‌ಎಂಸಿ ವಲಯ ಉಸ್ತುವಾರಿ ರಾಮ್‌ದರ್ ಎಂಬಾತನ ಸಶಸ್ತ್ರ ಕಾವಲುಗಾರಳಾಗಿದ್ದ ಸುನೀತಾ
ಶರಣಾದ ಸುನೀತಾ, ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯೆಯಾಗಿದ್ದಳು ಮತ್ತು ಎನ್‌ಎಂಸಿ ವಲಯ ಉಸ್ತುವಾರಿ ರಾಮ್‌ದರ್ ಎಂಬಾತನ ಸಶಸ್ತ್ರ ಕಾವಲುಗಾರರಾಗಿದ್ದಳು. ಈಕೆಯ ಪತ್ತೆಗೆ ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಪೊಲೀಸರು ಜಂಟಿಯಾಗಿ14 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಅವರು ಛತ್ತೀಸ್‌ಗಢ ರಾಜ್ಯದ ಬಿಜಾಪುರ ತಹಸಿಲ್‌ನ ಭೈರಾಮ್‌ಗಢದಲ್ಲಿರುವ ಗೋಮ್‌ವೇಟಾ ನಿವಾಸಿ ಎಂದು ಅಧಿಕಾರಿ ರೂಪೇಂದ್ರ ಧುರ್ವೆ ತಿಳಿಸಿದ್ದಾರೆ.
ಐಎನ್‌ಎಸ್‌ಎಎಸ್ ರೈಫಲ್ (INSAS rifle)ಹೊಂದಿದ್ದ ಸುನೀತಾ
ಐಎನ್‌ಎಸ್‌ಎಎಸ್ ರೈಫಲ್ (INSAS rifle)ಹೊಂದಿದ್ದ ಸುನೀತಾ, ಮಧ್ಯಪ್ರದೇಶ, ಮಹಾರಾಷ್ಟ್ರದ ಗೊಂಡಿಯಾ ಮತ್ತು ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಸಕ್ರಿಯಳಾಗಿದ್ದಳು. 2022 ರಿಂದಲೂ ಈಕೆ ಕಾನೂನುಬಾಹಿರ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದಳು. ನೆರೆಯ ಛತ್ತೀಸ್‌ಗಢದ ಮಾಧ್ ಪ್ರದೇಶದಲ್ಲಿ ಈಕೆ ನಕ್ಸಲ್ ತರಬೇತಿ ಪಡೆದಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಸುನೀತಾ ಶರಣಾಗತಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾವೋವಾದಿ ನಕ್ಸಲರ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಕ್ಕೆ ಸಿಕ್ಕ ಸಕಾರಾತ್ಮಕ ಫಲಿತಾಂಶ ಎಂದು ಬಣ್ಣಿಸಿದ್ದಾರೆ.
ಇದು ಮಧ್ಯಪ್ರದೇಶದಲ್ಲಿ ನಕ್ಸಲ್ ನಾಯಕಿಯೊಬ್ಬಳ ಮೊದಲ ಶರಣಾಗತಿ
ಸುನೀತಾ ಶರಣಾಗತಿಯೂ ಮಧ್ಯಪ್ರದೇಶದಲ್ಲಿ ನಕ್ಸಲ್ ನಾಯಕಿಯೊಬ್ಬಳ ಮೊದಲ ಶರಣಾಗತಿ ಎನಿಸಿದೆ. ಮಧ್ಯಪ್ರದೇಶದ ಪುನರ್ವಸತಿ ಮತ್ತು ಪರಿಹಾರ ನೀತಿ 2023 ರ ಅಡಿಯಲ್ಲಿ ಸುನೀತಾ ಶರಣಾಗಿದ್ದಾಳೆ. ಹಾಗೆಯೇ 1992 ರ ನಂತರ ಬೇರೆ ರಾಜ್ಯಕ್ಕೆ ಸೇರಿದ ಮಾವೋವಾದಿಯೊಬ್ಬರು ಮಧ್ಯಪ್ರದೇಶ ಸರ್ಕಾರದ ಮುಂದೆ ಶರಣಾಗುತ್ತಿರುವುದು ಇದೇ ಮೊದಲು ಎಂದು ಯಾದವ್ ಹೇಳಿದ್ದಾರೆ. ಕಳೆದ 10 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ತಲೆಗೆ 1.46 ಕೋಟಿ ರೂ.ಗಳ ಬಹುಮಾನ ಘೋಷಿಸಲಾಗಿದ್ದ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ನಿದ್ದೆಯಲ್ಲಿದ್ದ ಪತ್ನಿ ಮಗಳು ಅತ್ತಿಗೆಯನ್ನು ಕೊಂದು ಸಾವಿಗೆ ಶರಣಾದ ವ್ಯಕ್ತಿ
ಇದನ್ನೂ ಓದಿ: ದಿನದ ಯಾವುದೇ ಸಮಯದಲ್ಲೂ ಮದ್ಯ ಪೂರೈಸುತ್ತಿದ್ದ ಸೆಲೆಬ್ರೇಷನ್ ಸಾಬು ಅರೆಸ್ಟ್
