ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದಕ ಸ್ವೀಕರಿಸಿದ ಬಾಲಕನೊಬ್ಬ ಅದನ್ನು ತಕ್ಷಣವೇ ತೆಗೆದುಹಾಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.  ನಕಾರಾತ್ಮಕ ಚರ್ಚೆಗೆ ಕಾರಣವಾದ ಈ ಘಟನೆಯ ಸತ್ಯಾಸತ್ಯತೆ ನಂತರ ಬಹಿರಂಗವಾಗಿದ್ದು, ಆ ಬಾಲಕ ಮಾನಸಿಕವಾಗಿ ಅಸ್ವಸ್ಥನಾಗಿದ್ದ ವಿಶೇಷ ಮಗು ಎನ್ನಲಾಗಿದೆ.

ನವದೆಹಲಿ(ಡಿ.10): ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳಿಂದ ಪದಕ ಅಥವಾ ಪ್ರಶಸ್ತಿ ಸ್ವೀಕರಿಸುವುದು ಪ್ರತಿ ಪ್ರಜೆಯ ಕನಸಾಗಿರುತ್ತದೆ. ಆದರೆ, ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದಕ ಸ್ವೀಕರಿಸಿದ ಒಬ್ಬ ಬಾಲಕನ ವರ್ತನೆ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಪದಕ ಸ್ವೀಕರಿಸಿದ ತಕ್ಷಣ ಅದನ್ನು ಕುತ್ತಿಗೆಯಿಂದ ತೆಗೆದುಹಾಕಿದ ಮತ್ತು ಪ್ರಮಾಣಪತ್ರವನ್ನೂ ಮುಟ್ಟದ ಆ ಬಾಲಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವೈರಲ್ ಆಗಿದ್ದು, ದೊಡ್ಡ ಚರ್ಚೆ ಹುಟ್ಟುಹಾಕಿದೆ.

ರಾಷ್ಟ್ರಪತಿಗಳ ಮುಂದೆಯೇ ನಡೆದ ಅಚ್ಚರಿಯ ಘಟನೆ!

ವಿಶೇಷ ಸಮಾರಂಭವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಗೆ ಬಂದ ವಿದ್ಯಾರ್ಥಿಯೊಬ್ಬರಿಗೆ ರಾಷ್ಟ್ರಪತಿಗಳು ಪ್ರೀತಿಯಿಂದ ಪದಕವನ್ನು ತೊಡಿಸಿದರು. ಆದರೆ, ರಾಷ್ಟ್ರಪತಿಗಳು ಹಿಂದಿರುಗುವ ಮುನ್ನವೇ, ಆ ವಿದ್ಯಾರ್ಥಿ ತಕ್ಷಣ ಅದನ್ನು ತನ್ನ ಕುತ್ತಿಗೆಯಿಂದ ತೆಗೆದುಹಾಕುತ್ತಾನೆ.

ಅಷ್ಟೇ ಅಲ್ಲದೆ, ರಾಷ್ಟ್ರಪತಿಗಳು ನೀಡಿದ ಪ್ರಮಾಣಪತ್ರವನ್ನು ಸಹ ಆ ವಿದ್ಯಾರ್ಥಿ ತನ್ನ ಕೈಯಿಂದ ಸ್ವೀಕರಿಸುವುದಿಲ್ಲ. ಬದಲಿಗೆ, ಅವನ ಜೊತೆಗಿದ್ದ ಕುಟುಂಬದ ಸದಸ್ಯರು ಅದನ್ನು ತೆಗೆದುಕೊಳ್ಳುತ್ತಾರೆ. ರಾಷ್ಟ್ರಪತಿಗಳಂತಹ ಗಣ್ಯರ ಸಮ್ಮುಖದಲ್ಲಿ ಈ ರೀತಿ ವರ್ತಿಸಿದ ಬಾಲಕನ ವರ್ತನೆ ವಿಡಿಯೋ ನೋಡಿದವರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸತ್ಯಾಸತ್ಯತೆ ಬಹಿರಂಗ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಹೇಳಿಕೆಗಳು ಮತ್ತು ಅಸಲಿ ಘಟನೆ ಪ್ರಕಾರ, ಆ ವಿದ್ಯಾರ್ಥಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ವಿಶೇಷ ಮಗುವಾಗಿ ಈ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಎಂಬುದು ತಿಳಿದುಬಂದಿದೆ.

ಸಾಮಾನ್ಯವಾಗಿ, ವಿಶೇಷ ಮಕ್ಕಳು ಹೊಸ ವಸ್ತುಗಳನ್ನು ಅಥವಾ ಹೊಸ ಸ್ಪರ್ಶವನ್ನು ಸ್ವೀಕರಿಸಲು ಕಷ್ಟಪಡುತ್ತಾರೆ, ಅದರಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಬಾಲಕನಿಗೆ ತಾನು ಎಲ್ಲಿಗೆ ಬಂದಿದ್ದೇನೆ ಮತ್ತು ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ. ಹೀಗಾಗಿಯೇ ಆತ ಪದಕವನ್ನು ತಕ್ಷಣ ತೆಗೆದಿದ್ದಾನೆ ಎಂದು ಹೇಳಲಾಗಿದೆ.

Scroll to load tweet…

ಪೋಸ್ಟ್‌ಗೆ ಬಳಕೆದಾರರಿಂದ ಆಕ್ರೋಶ

ವಿಡಿಯೋವನ್ನು ಹಂಚಿಕೊಂಡ ಮೂಲ ಬಳಕೆದಾರರು, 'ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಪದಕವನ್ನು ನೀಡಿದರು, ನಂತರ ಈ ಹುಡುಗ ಅದನ್ನು ಹೊರಗೆ ಎಸೆದರು. ಅವನು ಹೀಗೇಕೆ ಮಾಡಿದನೆಂದು ನೀವು ನನಗೆ ಹೇಳಬಹುದೇ? ಎಂದು ಪ್ರಶ್ನಿಸಿದ್ದರು.

ಬಾಲಕನ ಸ್ಥಿತಿ ಅರಿತ ಇತರ ಬಳಕೆದಾರರು, ಆತನ ಮೇಲೆ ನಕಾರಾತ್ಮಕ ಟೀಕೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 'ಆ ಮಗು ಮಾನಸಿಕ ಸ್ಥಿತಿ ಚೆನ್ನಾಗಿಲ್ಲದಿದ್ದರೂ, ರಾಷ್ಟ್ರಪತಿಗಳಿಂದ ಪದಕವನ್ನು ಪಡೆಯುವಷ್ಟು ದೊಡ್ಡ ಸಾಧನೆ ಮಾಡಿದ್ದಾನೆ. ನಿಮ್ಮ ಸೀಮಿತ ಬುದ್ಧಿಯಿಂದ ನೆಗೆಟಿವ್ ಕಾಮೆಂಟ್ ಮಾಡಬೇಡಿ ಮತ್ತು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸಿ,' ಎಂದು ಅನೇಕರು ಟೀಕಾಕಾರರಿಗೆ ತಪರಾಕಿ ನೀಡಿದ್ದಾರೆ.