Celebration Ends: ಕೇರಳದ ಕೊಟ್ಟಾಯಂನಲ್ಲಿ, ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು ಅಕ್ರಮ ಮದ್ಯ ಮಾರಾಟದ ಕಿಂಗ್‌ಪಿನ್ 'ಸೆಲೆಬ್ರೇಷನ್ ಸಾಬು' ಅಲಿಯಾಸ್ ಚಾರ್ಲಿ ಥಾಮಸ್‌ನನ್ನು ಬಂಧಿಸಿದ್ದಾರೆ.
ದಿನದ ಯಾವುದೇ ಸಮಯದಲ್ಲೂ ಮದ್ಯ ಪೂರೈಸುತ್ತಿದ್ದ ಕೇರಳದ ಸೆಲೆಬ್ರೇಷನ್ ಸಾಬು ಅರೆಸ್ಟ್
ಕೊಟ್ಟಾಯಂ: ಮದ್ಯ ಕೊಳ್ಳುವವರ ಸೋಗಿನಲ್ಲಿ ಹೋಗಿ ಕೇರಳದ ಕೊಟ್ಟಾಯಂ ಪೊಲೀಸರು ಅಲ್ಲಿನ ಸ್ಥಳೀಯ ಅತೀದೊಡ್ಡ ಅಕ್ರಮ ಮದ್ಯ ಮಾರಾಟಗಾರನನ್ನು ಬಲೆಗೆ ಕೆಡವಿದ್ದಾರೆ. ಈತನ ಅಕ್ರಮವಾಗಿ ಮದ್ಯ ಮಾರಾಟ ಮಾಡಿಯೇ ದಿನಕ್ಕೆ 20 ಸಾವಿರಕ್ಕೂ ಅಧಿಕ ಹಣ ಗಳಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸೆಲೆಬ್ರೇಷನ್ ಸಾಬು ಎಂದೇ ಖ್ಯಾತಿ ಗಳಿಸಿದ್ದ 27 ವರ್ಷದ ಚಾರ್ಲಿ ಥಾಮಸ್ ಬಂಧಿತ ವ್ಯಕ್ತಿ. ಈತ ಕೊಟ್ಟಾಯಂನ ತ್ರಿಕೋಡಿಥಾನಂನ ಕಂಡತಿಲ್ಪರಂಬದ ನಿವಾಸಿ. ಚಂಗಸ್ಸೇರಿ ಅಬಕಾರಿ ಟೀಮ್‌ನ ಇನ್ಸ್‌ಪೆಕ್ಟರ್ ಅಭಿಲಾಷ್ ನೇತೃತ್ವದ ತಂಡ ವಲಯಂಕುಳಿ ಪ್ರದೇಶದಲ್ಲಿ ಆತನನ್ನು ಬಂಧಿಸಿದ್ದಾರೆ.
ಅಕ್ರಮ ಮದ್ಯ ಮಾರಿ ದಿನಕ್ಕೆ 20 ಸಾವಿರ ಸಂಪಾದನೆ
ಮಾಸ್ಕೋ ಪ್ರದೇಶದ ವಲಯಂಕುಳಿಯಲ್ಲಿ ನಕಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಈ ಹಿಂದೆಯೂ ಇಲ್ಲಿ ಹಲವು ಬಾರಿ ಅಧಿಕಾರಿಗಳು ತಪಾಸಣೆ ಮಾಡಿದರೂ ಇಲ್ಲಿ ಮದ್ಯ ಪತ್ತೆಯಾಗಿರಲಿಲ್ಲ. ಇಲ್ಲಿನ ರಬ್ಬರ್ ಕಂಪನಿಗಳು ಮತ್ತು ವಿದೇಶಿ ಕಾರ್ಮಿಕರ ಶಿಬಿರಗಳಲ್ಲಿ ನಕಲಿ ಮದ್ಯ ಮಾರಾಟ ಆಗುತ್ತಿವೆ ಎಂಬ ಮಾಹಿತಿಯ ಮೇರೆಗೆ, ಈ ಹಿಂದೆ ಹಲವಾರು ತಪಾಸಣೆಗಳನ್ನು ನಡೆಸಲಾಗಿತ್ತು, ಆದರೆ ಮದ್ಯದ ದಾಸ್ತಾನು ಪತ್ತೆಯಾಗಿರಲಿಲ್ಲ.
ಕಂಪನಿಯ ಮಾರಾಟ ಕಾರ್ಯನಿರ್ವಾಹಕರಂತೆ ನಟಿಸಿ ಬಲೆಗೆ ಕಡೆವಿದ ಅಧಿಕಾರಿಗಳು
ಹೀಗಾಗಿ ಕಂಪನಿಯ ಮಾರಾಟ ಕಾರ್ಯನಿರ್ವಾಹಕರಂತೆ ನಟಿಸಿ, ಅಬಕಾರಿ ಸದಸ್ಯರಾದ ಕೆ. ಶಿಜು ಮತ್ತು ಪ್ರವೀಣ್ ಕುಮಾರ್ ವಾರಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿ ಚಾರ್ಲಿಯ ನಕಲಿ ಮದ್ಯದ ಗೋದಾಮನ್ನು ಪತ್ತೆ ಮಾಡಿದ್ದಾರೆ. ನಂತರ ಆತನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 204 ಬಾಟಲಿ ಮದ್ಯ( 102 ಲೀಟರ್) ಮದ್ಯ ವಶಪಡಿಸಿಕೊಳ್ಳಲಾಗಿದೆ.
ಗ್ರಾಹಕರು ವಿನಂತಿಸಿದ ಯಾವುದೇ ಬ್ರಾಂಡ್ ತಲುಪಿಸುತ್ತಿದ್ದ ಸೆಲೆಬ್ರೇಷನ್ ಬಾಬು
ಈ ತಂಡ ಹನಿ ಬೀ, ಸಿಕ್ಸರ್, ಸೆಲೆಬ್ರೇಷನ್, ಓಲ್ಡ್ ಚೆಫ್, ಕೊರಿಯರ್ ನೆಪೋಲಿಯನ್ ಸೇರಿದಂತೆ ಗ್ರಾಹಕರು ವಿನಂತಿಸಿದ ಯಾವುದೇ ಬ್ರಾಂಡ್ ಅನ್ನು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲೂ ಗ್ರಾಹಕರಿಗೆ ತ್ವರಿತವಾಗಿ ತಲುಪಿಸುತ್ತಿತ್ತು. 400 ರೂ. ಮೌಲ್ಯದ ಮದ್ಯವನ್ನು 550 ರೂಗೆ ಮಾರುತ್ತಿದ್ದರು. ದಿನಕ್ಕೆ ಸುಮಾರು 150 ಬಾಟಲಿ ಮದ್ಯವನ್ನು ಇವರು ಮಾರುತ್ತಿದ್ದರು ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.
ಅಬಕಾರಿ ಇನ್ಸ್‌ಪೆಕ್ಟರ್ ಅಭಿಲಾಷ್ ಅವರೊಂದಿಗೆ ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ (ಗ್ರೇಡ್) ಆಂಟನಿ ಮ್ಯಾಥ್ಯೂ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಆರ್. ರಾಜೇಶ್, ಕೆ. ಶಿಜು, ಸಿವಿಲ್ ಅಬಕಾರಿ ಅಧಿಕಾರಿ ರತೀಶ್ ಕೆ, ಪ್ರವೀಣ್ ಕುಮಾರ್, ಕಣ್ಣನ್ ಜಿ. ನಾಯರ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಬಿ. ಶೀಬಾ ಮತ್ತು ಅಬಕಾರಿ ಚಾಲಕ ಎಸ್. ಸಿಯಾದ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕೇರಳ ಮದ್ಯ ಮಾರಾಟ ನಿಷೇಧಿತವಾದ ರಾಜ್ಯವಲ್ಲ, ಆದರೆ ಮದ್ಯವು ಸರ್ಕಾರಿ ಸ್ವಾಮ್ಯದ ಮಳಿಗೆಗಳು ಮತ್ತು ಉನ್ನತ ದರ್ಜೆಯ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಿದೆ. , ಪರವಾನಗಿ ಪಡೆದ ಆವರಣದಲ್ಲಿ ಮಾತ್ರ ಖರೀದಿ ಮತ್ತು ಬಳಕೆಗೆ ಲಭ್ಯವಿದೆ. ಆದರೆ ನಮ್ಮ ಹಾಗೂ ಇತರ ರಾಜ್ಯಗಳಲ್ಲಿರುವಂತೆ ಇಲ್ಲಿ ಖಾಸಗಿ ಬಾರ್‌ಗಳಲ್ಲಿ ಮದ್ಯ ಸಿಗುವುದಿಲ್ಲ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ. ಹೀಗಾಗಿ ಮದ್ಯವನ್ನು ಹೀಗೆ ಅಕ್ರಮವಾಗಿ ತಲುಪಿಸುವವರಿಗೆ ಅಲ್ಲಿ ಬಾರಿ ಬೇಡಿಕೆ ಇದೆ.
ಇದನ್ನೂ ಓದಿ: ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಹಾಕಿಕೊಂಡ ಹಿಂಬದಿ ಸವಾರ
ಇದನ್ನೂ ಓದಿ: ರಾಜಸ್ಥಾನದ ಪುಷ್ಕರ್ ಮೇಳದಲ್ಲಿ 21 ಕೋಟಿ ಮೌಲ್ಯದ ಕೋಣ ಹಠಾತ್ ಸಾವು
