ಭಾರತದಲ್ಲಿ ಈಗ್ಲೂ ಅನೇಕ ಶೋಷಿತ ಪದ್ಧತಿಗಳು ಜಾರಿಯಲ್ಲಿವೆ. ಅದ್ರಲ್ಲಿ ಬಾಡಿಗೆ ಪತ್ನಿ ಪದ್ಧತಿ ಕೂಡ ಒಂದು. ಸಂಪ್ರದಾಯದ ಹೆಸರಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಹೇಳೋರಿಲ್ಲ ಕೇಳೋರಿಲ್ಲ. 

ಥೈಲ್ಯಾಂಡ್ (Thailand)ನಲ್ಲಿ ಪತ್ನಿ ಬಾಡಿಗೆಗೆ ಸಿಗ್ತಾಳೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಸದ್ದು ಮಾಡಿತ್ತು. ಬರೀ ಥೈಲ್ಯಾಂಡ್ ನಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ಪತ್ನಿ ಬಾಡಿಗೆಗೆ ಸಿಗ್ತಾಳೆ ಎಂಬುದು ನಿಮಗೆ ಗೊತ್ತಾ? ಪತ್ನಿ ಬಾಡಿಗೆ ಭಾರತದಲ್ಲಿ ಪದ್ಧತಿಯಾಗಿ ಅನೇಕಾನೇಕ ವರ್ಷಗಳಿಂದ ಜಾರಿಯಲ್ಲಿದೆ. ಇದನ್ನು ಸಂಪ್ರದಾಯದ ಹೆಸರಿನಲ್ಲಿ ಜನರು ಪಾಲಿಸಿಕೊಂಡು ಬರ್ತಿದ್ದಾರೆ. ಪತ್ನಿಯನ್ನೇ ಜನರು ಬಾಡಿಗೆಗೆ ಇಡ್ತಾರೆ. ಈ ಅಮಾನವೀಯ ಪದ್ಧತಿ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ಈಗ್ಲೂ ಚಾಲ್ತಿಯಲ್ಲಿದೆ.

ಮಧ್ಯಪ್ರದೇಶದ ಶಿವಪುರದಲ್ಲಿ ಈ ಧಾಡಿಚಾ (Dhadicha) ಎಂದು ಕರೆಯುತ್ತಾರೆ. ಪುರುಷರು ತಮ್ಮ ಪತ್ನಿಯನ್ನೇ ಬಾಡಿಗೆಗೆ ಬಿಡ್ತಾರೆ. ವರ್ಷಕ್ಕೊಮ್ಮೆ ಮಾರುಕಟ್ಟೆಯಲ್ಲಿ ಬಾಡಿಗೆ ಬಿಡುವ ಕಾರ್ಯಕ್ರಮ ನಡೆಯುತ್ತದೆ. ಮದುವೆಯಾಗದ ಶ್ರೀಮಂತರು, ತಮಗಿಷ್ಟವಾಗುವ ಹುಡುಗಿ ಅಥವಾ ಮಹಿಳೆಯನ್ನು ನಿರ್ದಿಷ್ಟ ಸಮಯಕ್ಕೆ ಬಾಡಿಗೆಗೆ ಪಡೆಯುತ್ತಾರೆ.

ಮಹಿಳೆಯ ವಯಸ್ಸು ಹಾಗೂ ಆಕೆಯ ಸ್ಟೇಟಸ್ ಆಧಾರದ ಮೇಲೆ ಬಿಡ್ಡಿಂಗ್ ನಡೆಯುತ್ತದೆ. ಲೀಗಲ್ ಸರ್ವೀಸಸ್ ಇಂಡಿಯಾ ವರದಿ ಪ್ರಕಾರ, ಈ ಹರಾಜಿನಲ್ಲಿ 8 ರಿಂದ 15 ವರ್ಷದ ಹುಡುಗಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಹುಡುಗಿಯರ ಬೆಲೆ 15,000 ರಿಂದ 25,000 ರೂಪಾಯಿವರೆಗೆ ಇರುತ್ತದೆ. ಕೆಲವೊಮ್ಮೆ ಈ ಬಿಡ್ 1.5 ರಿಂದ 2 ಲಕ್ಷದವರೆಗೆ ಹೋಗುತ್ತದೆ. ಈ ಹರಾಜಿನ ನಂತ್ರ ಒಪ್ಪಂದ ಪತ್ರಕ್ಕೆ ಸಹಿ ಹಾಕ್ಬೇಕು. ಪುರುಷ ಮತ್ತು ಮಹಿಳೆಯರು 10 ರಿಂದ 100 ರ ಸ್ಟಾಂಪ್ ಪೇಪರ್ ಮೇಲೆ ಒಪ್ಪಂದಕ್ಕೆ ಸಹಿ ಹಾಕ್ತಾರೆ. ಒಪ್ಪಂದ ಮುಗಿದ ಮೇಲೆ ಅದನ್ನು ಮುಂದುವರೆಸುವ ಹಕ್ಕು ಹುಡುಗಿಯರಿಗೂ ಇದೆ. ಪದ್ಧತಿ ಹೆಸರಿನಲ್ಲಿ ನಡೆಯುವ ಈ ಹಿಂಸೆಯನ್ನು ಅನೇಕ ಮಹಿಳೆಯರು ವಿರೋಧಿಸಿದ್ದಾರೆ.

ಲಿಂಗ ಅನುಪಾತ, ಬಡತನ ಮತ್ತು ವರದಕ್ಷಿಣೆ ವ್ಯವಸ್ಥೆಯಿಂದಾಗಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎನ್ನಲಾಗ್ತಿದೆ. ಆದ್ರೆ ಈ ಪದ್ಧತಿಯಿಂದ ಹುಡುಗಿಯರು ಲೈಂಗಿಕ ಶೋಷಣೆಗೆ ಒಳಗಾಗ್ತಿರೋದು ಸುಳ್ಳಲ್ಲ. 14 ನೇ ವಯಸ್ಸಿನಲ್ಲಿ 80,000 ರೂಪಾಯಿ ಬಾಡಿಗೆ ಪತ್ನಿಯಾಗಿ ಹರಾಜಾದ ಹುಡುಗಿಯೊಬ್ಬಳು ತನ್ನ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾಳೆ. ಸಂಗಾತಿ ಹಾಗೂ ಕುಟುಂಬಸ್ಥರಿಂದ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಹೇಳಿದ್ದಾಳೆ. ಮಧ್ಯಪ್ರದೇಶದ ಪೊಲೀಸರಿಗೆ ಈ ಪದ್ಧತಿ ಬಗ್ಗೆ ಮಾಹಿತಿ ಇದೆ. ಆದ್ರೆ ಯಾವುದೇ ದೂರು ದಾಖಲಾಗಿಲ್ಲ. ಆದ್ದರಿಂದ ಇದನ್ನು ಕಾನೂನುಬದ್ಧವಾಗಿ ತಡೆಯಲು ಸಾಧ್ಯವಾಗ್ತಿಲ್ಲ.

ಥೈಲ್ಯಾಂಡ್ ನಲ್ಲಿ ಬಾಡಿಗೆ ಪತ್ನಿ : ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಥೈಲ್ಯಾಂಡ್ ನಲ್ಲೂ ಬಾಡಿಗೆ ಪತ್ನಿಯರ ಪದ್ಧತಿ ಜಾರಿಯಲ್ಲಿದೆ. ಲಾ ವೆರಿಟೆ ಎಮ್ಯಾನುಯೆಲ್ ಬರೆದ ಥೈಲ್ಯಾಂಡ್ಸ್ ಟ್ಯಾಬೂ ಪುಸ್ತಕದಲ್ಲಿ ಇದ್ರ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಿಚಿತ್ರ ಪದ್ಧತಿಯ ಬೇರುಗಳು ಥೈಲ್ಯಾಂಡ್ನ ಪಟ್ಟಾಯದ ಸಂಪ್ರದಾಯಗಳಲ್ಲಿವೆ. ಇಲ್ಲಿ ಜನರು ಬಾಡಿಗೆಗೆ ಪತ್ನಿಯನ್ನು ತೆಗೆದುಕೊಳ್ಳಬಹುದು. ಇದನ್ನು ಬಾಡಿಗೆಗೆ ಪತ್ನಿ ಅಥವಾ ಕಪ್ಪು ಮುತ್ತು ((black pearl)) ಎಂದೂ ಕರೆಯುತ್ತಾರೆ. ಇದು ಒಂದು ರೀತಿಯ ತಾತ್ಕಾಲಿಕ ಮದುವೆ. ಯುವತಿಗೆ ಹಣ ನೀಡಿ ಕೆಲ ಸಮಯ ಪತ್ನಿಯಾಗಿ ಇಟ್ಕೊಳ್ಳಬಹುದು. ಆ ಯುವತಿಯು ನಿಗದಿತ ಸಮಯದವರೆಗೆ ಹೆಂಡತಿಯ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಬೇಕು. ಈ ಪದ್ಧತಿ ಈಗ ಬ್ಯುಸಿನೆಸ್ ರೂಪ ಪಡೆಯುತ್ತಿದೆ. ಥೈಲ್ಯಾಂಡ್ನಲ್ಲಿ ಬಾಡಿಗೆ ಹೆಂಡತಿಯ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಕೂಡ ಬಾಡಿಗೆ ಮೊತ್ತವನ್ನು ಮಹಿಳೆಯ ವಯಸ್ಸು, ಸೌಂದರ್ಯ, ಶಿಕ್ಷಣ ಮತ್ತು ಸಮಯಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಮೊತ್ತ 1600 ಡಾಲರ್ಗಳಿಂದ 116000 ಡಾಲರ್ಗಳವರೆಗೆ ಇರುತ್ತದೆ.