ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗೆಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರನ್ನು ಆಯ್ಕೆ ಮಾಡಿದ್ದು, ಯಾರು ಎಂಬುದು ಅನೇಕರ ಕುತೂಹಲ ಅದಕ್ಕೆ ಇಲ್ಲಿದೆ ಉತ್ತರ.
ನವದೆಹಲಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗೆಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರನ್ನು ಆಯ್ಕೆ ಮಾಡಿದ್ದು, ಯಾರು ಎಂಬುದು ಅನೇಕರ ಕುತೂಹಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿಸಂಸ್ಥೆ ಪಿಟಿಐ ಈ ಬಗ್ಗೆ ವರದಿ ಮಾಡಿದೆ.
ಸಿಂಧೂರ್ ಎಂಬ ಹೆಸರೇ ಹಲವು ಅರ್ಥಗಳಿಂದ ತುಂಬಿದೆ. ಹಿಂದೂ ಮಹಿಳೆಯರು ಮದುವೆಯ ಸಂಕೇತವಾಗಿ ತಮ್ಮ ತಲೆಯ ಬೈತಲೆ ಮೇಲೆ ಕುಂಕುಮ ಅಥವಾ ಸಿಂಧೂರನ್ನು ಹಾಕಿಕೊಳ್ಳುತ್ತಾರೆ. ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೆಣ್ಣು ಮಕ್ಕಳ ಸಿಂಧೂರವನ್ನು ಗಮನಿಸಿ ಅವರ ಧರ್ಮವನ್ನು ಕೇಳಿ ಅವರ ಗಂಡನನ್ನು ಕೊಲ್ಲಲಾಯಿತು. ಹೆಂಡತಿ ಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಯಿತು. ಇದರಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ಸೌಭಾಗ್ಯದ ಹಾಗೂ ಮುತೈದೆಯರ ಸಂಕೇತವಾದ ಸಿಂಧೂರವನ್ನು ಹಾಕುವ ಹಕ್ಕನ್ನು ಕಳೆದುಕೊಂಡರು. ಹೀಗಾಗಿ ಅವರ ಸೇಡು ತೀರಿಸಿಕೊಳ್ಳುವ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡುವುದೇ ಸೂಕ್ತವಾಗಿತ್ತು. ಹೀಗಾಗಿಯೇ ಈ ಭಯೋತ್ಪಾದಕ ವಿರುದ್ಧದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.
ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಬಿಡುಗಡೆ ಮಾಡಿದ ಚಿತ್ರದಲ್ಲಿ ಆಪರೇಷನ್ ಸಿಂಧೂರ್ ಅನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಸಿಂಧೂರ್‌ನಲ್ಲಿರುವ ಒಂದು ಸೊನ್ನೆಯನ್ನು ಸಿಂಧೂರ್‌ದ ಬಟ್ಟಲಿನಂತೆ ಕೆಂಪು ಬಣ್ಣದಲ್ಲಿ ಚಿತ್ರಿಸಲಾಗಿದೆ. ಇದು 25 ಮಹಿಳೆಯರು ತಮ್ಮ ಜೀವನ ಸಂಗಾತಿಗಳನ್ನು ಕಸಿದುಕೊಂಡ ಕ್ರೂರತೆಯನ್ನು ಸಂಕೇತಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದೆಡೆ ದಾಳಿಯ ಕುರಿತಾಗಿ ಸೇನೆಯ ಸುದ್ದಿಗೋಷ್ಠಿಯನ್ನು ಕೂಡ ಸೇನೆಯ ಮಹಿಳಾ ಮಣಿಯರೇ ಮುನ್ನಡೆಸಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ದೇಶಕ್ಕೆ ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ಮೂಲಕ ಮಹಿಳೆಯರ ಸೌಭಾಗ್ಯ ಕಸಿದ ಉಗ್ರರಿಗೆ ಮಹಿಳೆಯರಿಂದಲೇ ತಕ್ಕ ತಿರುಗೇಟು ನೀಡಲಾಗಿದೆ ಎಂಬುದನ್ನು ಸಾಂಕೇತಿಕವಾಗಿ ತಿಳಿಸಲಾಗುತ್ತಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ಕಾರ ನಡೆಸಿದ ಈ ಸುದ್ದಿಗೋಷ್ಠಿಯಲ್ಲಿ ಇದುವರೆಗೆ ಭಾರತದ ಮೇಲಾದ ಭಯೋತ್ಪಾದಕ ದಾಳಿಯ ವಿವರಗಳಿರುವ ವೀಡಿಯೋ ಬಿಡುಗಡೆ ಮಾಡಲಾಗಿದೆ.



