ಆಪರೇಷನ್ ಸಿಂಧೂರ್‌ಗೆ ಪ್ರತಿಯಾಗಿ ಭಾರತದ ಮೇಲೆ ಪಾಕಿಸ್ತಾನವೂ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು, ಸರ್ಕಾರಿ ಮೂಲಗಳು ಸುಳ್ಳು ಸುದ್ದಿ ಹಬ್ಬಿಸಿವೆ.
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ 9 ಕಡೆಗಳಲ್ಲಿ ಇದ್ದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ ನಂತರ ಪಾಕಿಸ್ತಾನವೂ ಸುಳ್ಳು ಮಾಹಿತಿಗಳ ಹೊಳೆಯನ್ನೇ ಹರಿಸಿದೆ. ಭಾರತದ ದಾಳಿಗೆ ಪ್ರತಿದಾಳಿಯಾಗಿ ಪಾಕಿಸ್ತಾನ ಶ್ರೀನಗರದಲ್ಲಿರುವ ಭಾರತೀಯ ವಾಯುಸೇನೆಯ ಏರ್‌ಬೇಸ್ ಮೇಲೆ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಸೋಶಿಯಲ್ ಮೀಡಿಯಾಗಳು, ಸರ್ಕಾರಿ ಮೂಲಗಳು ಸುಳ್ಳು ಸುದ್ದಿಯನ್ನು ಹರಿಬಿಟ್ಟಿವೆ.
ಆಪರೇಷನ್ ಸಿಂಧೂರ್ ನಡೆದ ನಂತರದ ಗಂಟೆಗಳಲ್ಲಿ, ಹಲವಾರು ಪಾಕಿಸ್ತಾನಿ ಸೋಶಿಯಲ್ ಮೀಡಿಯಾಗಳು, ಸರ್ಕಾರ ಸಂಬಂಧಿತ ನ್ಯೂಸ್ ಚಾನೆಲ್‌ಗಳು ಸತ್ಯಾಸತ್ಯತೆಯನ್ನು ಪರಿಶೀಲಿಸದೇ ನಿರಂತರವಾಗಿ ಸುಳ್ಳು ಮಾಹಿತಿಗಳನ್ನು ಹರಿಬಿಟ್ಟಿದ್ದಾರೆ. ಆದರೆ ಇಂಡಿಪೆಂಡೆಂಟ್ ಅನಾಲಿಸ್ಟ್ಸ್ ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಫ್ಯಾಕ್ಟ್ ಚೆಕ್ಕರ್‌ಗಳು ಪಾಕಿಸ್ತಾನದ ಮಾಧ್ಯಮಗಳು ಹಾಗೂ ಸರ್ಕಾರಿ ಸಂಸ್ಥೆಗಳು ಹಬ್ಬಿಸುತ್ತಿರುವ ವಿಚಾರ ಸುಳ್ಳು ಎಂದು ಗುರುತಿಸಿದ್ದಾರೆ.
ಭಾರತದ ಆಪರೇಷನ್ ಸಿಂಧೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಒಳಗೆ 15 ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ ಎಂದು ಹಲವು ಪೋಸ್ಟ್‌ಗಳು ಸುಳ್ಳು ವಿಚಾರವನ್ನು ಪ್ರಚಾರ ಮಾಡಿವೆ. ಶ್ರೀನರ ಏರ್‌ಬೇಸ್ ಮೇಲೆಯೂ ಪಾಕಿಸ್ತಾನದ ಏರ್‌ಫೋರ್ಸ್ ದಾಳಿ ಮಾಡಿದೆ ಹಾಗೆಯೇ ಭಾರತೀಯ ಸೇನೆಯ ಬ್ರಿಗೇಡ್ ಹೆಡ್‌ಕ್ವಾರ್ಟರ್ ಮೇಲೆಯೂ ಪಾಕಿಸ್ತಾನ ದಾಳಿ ಮಾಡಿ ನಾಶ ಮಾಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇವೆಲ್ಲವೂ ಸುಳ್ಳು ಎಂಬುದು ಸಾಬೀತಾಗಿದೆ.
ಈ ಎಲ್ಲಾ ಹೇಳಿಕೆಗಳು ಸುಳ್ಳಾಗಿದ್ದರೂ ಕೂಡ ಈ ಹೇಳಿಕೆಯಿದ್ದ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಾಪಕವಾಗಿ ವೈರಲ್ ಆಯ್ತು. ವಿಶೇಷವಾಗಿ ಹಲವು ಫಾಲೋವರ್ಸ್‌ಗಳನ್ನು ಹೊಂದಿರುವ ಪಾಕಿಸ್ತಾನದ ಮಿಲಿಟರಿ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR)ನ ಟ್ವಿಟ್ಟರ್ ಖಾತೆಯಲ್ಲಿಯೇ ಈ ಸುಳ್ಳು ಪೋಸ್ಟ್‌ಗಳು ಹರಿದಾಡಿವೆ. ಆದರೆ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯಾವುದೇ ವಿಶ್ವಾಸಾರ್ಹ ದೃಶ್ಯ ಅಥವಾ ಉಪಗ್ರಹ ಚಿತ್ರ ಲಭ್ಯವಾಗಿಲ್ಲ.
ಈ ಹೇಳಿಕೆಗೆ ಸಂಬಂಧಿಸಿದಂತೆ ಪೋಸ್ಟ್‌ಗಳು ಹಂಚಿಕೊಂಡಿರುವ ವೀಡಿಯೋಗಳು ಹಳೆಯ ವೀಡಿಯೋಗಳಾಗಿದ್ದು, ಅಲ್ಲದೇ ಭಾರತಕ್ಕೆ ಸಂಬಂಧಿಸಿದ ವೀಡಿಯೋಗಳಲ್ಲ ಎಂಬುದು ಖಚಿತವಾಗಿದೆ.
ಈ ವೀಡಿಯೊ 2024 ರಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಜನಾಂಗೀಯ ಘರ್ಷಣೆಗಳದ್ದಾಗಿದೆ. ಹೀಗಾಗಿ ಆಪರೇಷನ್ ಸಿಂಧೂರ್ ಬಗ್ಗೆ ಅಧಿಕೃತ ಮಾಹಿತಿಗಾಗಿ ಭಾರತ ಸರ್ಕಾರದ ಅಧಿಕೃತ ಮೂಲಗಳನ್ನು ಮಾತ್ರ ನಂಬಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಫ್ಯಾಕ್ಟ್ ಚೆಕ್ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ಪಾಕಿಸ್ತಾನದ ಸೋಶಿಯಲ್ ಮೀಡಿಯಾದ ಈ ಪೋಸ್ಟ್‌ಗಳಲ್ಲಿ ಬಳಸಿದ ಬಹುತೇಕ ವೀಡಿಯೋ ಫೋಟಗಳನ್ನು ಇಂದಿನ ಘಟನೆಗೆ ಸಂಬಂಧವಿಲ್ಲದ, ಆರ್ಕೈವ್ ದೃಶ್ಯಗಳೆಂದು ಗುರುತಿಸಲಾಗಿದೆ. ಕೆಲವನ್ನು ಸಂಬಂಧವಿಲ್ಲದ ಹಿಂದಿನ ಘಟನೆಗಳ ದೃಶ್ಯ ಎಂದು ಪತ್ತೆಹಚ್ಚಲಾಗಿದೆ ಹಾಗೆಯೇ ಕೆಲವು ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸಲಾಗಿದೆ.ಆದರೆ ಹೇಳಿಕೆಗೆ ಪೂರಕವಾಗುವಂತೆ ಯಾವುದೇ ಮಾಹಿತಿ ಇಲ್ಲದಿದ್ದರೂ ಪಾಕಿಸ್ತಾನ ಮಾಧ್ಯಮಗಳು ಈ ಪೋಸ್ಟ್‌ಗಳನ್ನು ಸಮರ್ಥಿಸಿಕೊಂಡಿವೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ್ ಅಡಿಯಲ್ಲಿ ಗುರಿಯಾದ ಒಂಬತ್ತು ಭಯೋತ್ಪಾದಕ ತಾಣಗಳ ಪಟ್ಟಿ ಇಲಿದೆ.
1. ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್ - ಜೆಎಂ ಉಗ್ರರ ತಾಣ
2. ಮರ್ಕಝ್ ತೈಬಾ, ಮುರಿಡ್ಕೆ - ಎಲ್‌ಇಟಿ ಉಗ್ರರ ತಾಣ
3. ಸರ್ಜಾಲ್, ತೆಹ್ರಾ ಕಲಾನ್ - ಜೆಎಂ ಉಗ್ರರ ತಾಣ
4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್ - ಎಚ್‌ಎಂ ಉಗ್ರರ ತಾಣ
5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ - ಎಲ್‌ಇಟಿ ಉಗ್ರರ ತಾಣ
6. ಮರ್ಕಝ್ ಅಬ್ಬಾಸ್, ಕೋಟ್ಲಿ - ಜೆಎಂ ಉಗ್ರರ ತಾಣ
7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ - ಎಚ್.ಎಂ ಉಗ್ರರ ತಾಣ
8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ - ಎಲ್‌ಇ ಉಗ್ರರ ತಾಣ
9. ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ - ಜೆಎಂ ಉಗ್ರರ ತಾಣ


