ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಿದೆ. ವೆನೆಜುವೆಲಾ ಮತ್ತು ಇರಾನ್‌ನಂತಹ ದೇಶಗಳಲ್ಲಿ ಸಬ್ಸಿಡಿಯಿಂದಾಗಿ ಪೆಟ್ರೋಲ್ ನೀರಿಗಿಂತ ಅಗ್ಗವಾಗಿದ್ದರೆ, ಹಾಂಗ್ ಕಾಂಗ್‌ನಲ್ಲಿ ವಿಶ್ವದಲ್ಲೇ ಅತಿ ದುಬಾರಿಯಾಗಿದೆ.

ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರತದಲ್ಲಿ ಚಿನ್ನದ ಬೆಲೆಯಷ್ಟೇ ಅಲ್ಲ, ಪೆಟ್ರೋಲ್ ಬೆಲೆಯೂ ದಿನೇದಿನೆ ಗಗನಕ್ಕೇರುತ್ತಿದೆ. ಪ್ರಸ್ತುತ ಭಾರತದಲ್ಲಿ ಪೆಟ್ರೋಲ್ ಸರಾಸರಿ ಬೆಲೆ ಲೀಟರ್‌ಗೆ 108.70 ಆಗಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಫೋರ್ಟ್ ಬ್ಲೇರ್‌ನಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದೆ ಅತ್ಯಂತ ಕಡಿಮೆ ಇದೆ. ಅಲ್ಲಿ ಪ್ರತಿ ಲೀಟರ್‌ಗೆ ₹88.66. ಆದರೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಇಲ್ಲಿ ಪ್ರತಿ ಲೀಟರ್‌ಗೆ ₹118.34 ಆಗಿದೆ. ದೇಶದೊಳಗೇ ನಗರ ಅಥವಾ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಾಸವಾಗಲು ಕಾರಣವೇನು? ಪ್ರಪಂಚದದ್ಯಂತ ಪೆಟ್ರೋಲ್ ಬೆಲೆ ಇದೇ ರೀತಿ ಇದೆಯೇ? ಅಥವಾ ಇದಕ್ಕೆ ಕಡಿಮೆಯಲ್ಲಿ ಸಿಗುತ್ತದೆ ಎಂದು ತಿಳಿಯೋಣ.

ವಿಶ್ವದಲ್ಲೇ ಪೆಟ್ರೋಲ್ ಬೆಲೆ ಇಲ್ಲಿ ಚೀಪ್!

ವೆನೆಜುವೆಲಾ, ಇರಾನ್, ಲಿಬಿಯಾದಂತಹ ದೇಶಗಳಲ್ಲಿ ಪೆಟ್ರೋಲ್ ಬೆಲೆ ನೀರಿಗಿಂತಲೂ ಕಡಿಮೆಯಿದೆ ಎಂದರೆ ನಂಬುತ್ತೀರಾ? ಹೌದು. ಅಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹2 ರಿಂದ ₹3 ರೂಪಾಯಿಗೆ ಸಿಗುತ್ತಿದೆ! ಇಲ್ಲಿ ಪೆಟ್ರೋಲ್ ಬೆಲೆ ಒಂದು ಬಾಟಲಿ ನೀರಿನ ಬೆಲೆಗಿಂತ ಕಡಿಮೆ. ಈ ದೇಶಗಳಲ್ಲಿ ಯಾಕಿಷ್ಟು ಕಡಿಮೆ? ಎಂಬ ಪ್ರಶ್ನೆ ಬರುತ್ತದಲ್ಲವ? ಇದಕ್ಕೆ ಕಾರಣ ಭಾರೀ ಸರ್ಕಾರಿ ಸಬ್ಸಿಡಿಗಳು. ಸರ್ಕಾರಗಳು ತಮ್ಮ ನಾಗರಿಕರಿಗೆ ಕೈಗೆಟುಕುವ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಾಗುವಂತೆ ನೋಡಿಕೊಳ್ಳುವುದರಿಂದಾಗಿ ಭಾರತಕ್ಕಿಂತಲೂ ಇಲ್ಲಿ ಪೆಟ್ರೋಲ್ ಬೆಲೆಗಳು 32 ರಿಂದ 48 ಪಟ್ಟು ಕಡಿಮೆ ಇರುತ್ತದೆ.

ಯಾವ ದೇಶದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ?

ಹಾಂಗ್ ಕಾಂಗ್, ಮೊನಾಕೊ ಮತ್ತು ಐಸ್ಲ್ಯಾಂಡ್, ಡೆನ್ಮಾರ್ಕ್ ಮತ್ತು ನಾರ್ವೆಯಂತಹ ಯುರೋಪಿಯನ್ ದೇಶಗಳಲ್ಲಿ ಪೆಟ್ರೋಲ್ ಬೆಲೆಗಳು ಅತ್ಯಂತ ದುಬಾರಿಯಾಗಿವೆ. ಸೆಪ್ಟೆಂಬರ್ 2026 ರ ಬೆಲೆಯಂತೆ ಹೇಳುವುದಾದರೆ, ಹಾಂಗ್ ಕಾಂಗ್‌ನಲ್ಲಿ ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್‌ಗೆ ₹420 ರಿಂದ ₹425 ರವರೆಗೆ ಇದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು. ಸರ್ಕಾರವು ಪೆಟ್ರೋಲ್ ಮೇಲೆ ಭಾರೀ ತೆರಿಗೆ ವಿಧಿಸುವುದರಿಂದ ಹಾಂಗ್ ಕಾಂಗ್‌ನಲ್ಲಿ ಇಂಧನ ಬೆಲೆಗಳು ಹೆಚ್ಚಾಗಲು ಕಾರಣವಾಗಿದೆ. ಆದರೂ ಈ ಬೆಲೆ ಏರಿಕೆಯ ಹಿಂದೆ ಒಂದು ಉದ್ದೇಶವಿದೆ. ಕೇವಲ ಸರ್ಕಾರದ ಖಜಾನೆಗೆ ತೆರಿಗೆ ತುಂಬುವುದಲ್ಲ, ಬದಲಾಗಿ ಮಾಲಿನ್ಯವನ್ನು ನಿಯಂತ್ರಿಸುವುದೂ ಸಹ. ಹೆಚ್ಚಿನ ಪೆಟ್ರೋಲ್ ಬೆಲೆಗಳು ಜನರು ತಮ್ಮ ಸ್ವಂತ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಲು ಪ್ರೋತ್ಸಾಹಿಸುತ್ತವೆ. ರಸ್ತೆಗಳಲ್ಲಿ ಸಂಚಾರವೂ ಕಡಿಮೆಯಾಗುತ್ತದೆ, ಇದು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.

ಹಾಗಾದರೆ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಎಷ್ಟು?

ಅಮೆರಿಕದಲ್ಲಿ ಪೆಟ್ರೋಲ್ ಅನ್ನು ಗ್ಯಾಸೋಲಿನ್ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಲೀಟರ್‌ಗಳಲ್ಲಿ ಅಲ್ಲ, ಗ್ಯಾಲನ್‌ಗಳಲ್ಲಿ ಅಳೆಯಲಾಗುತ್ತದೆ. ಒಂದು ಗ್ಯಾಲನ್ ಎಂದರೆ ಸರಿಸುಮಾರು 3.785 ಲೀಟರ್. ಪ್ರಸ್ತುತ ಅಮೆರಿಕದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ ಪ್ರತಿ ಗ್ಯಾಲನ್‌ಗೆ ಸುಮಾರು $4.48 ಆಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಪ್ರತಿ ಲೀಟರ್‌ಗೆ ಸರಿಸುಮಾರು ₹98 ರಿಂದ ₹103 ರಷ್ಟಿದೆ.

ಈ ದರ ನಮಗೆ ಸರಿ ಅನಿಸುತ್ತದೆಯಾದರೂ ಅಮೆರಿಕನ್ನರಿಗೆ ಇದು ದುಬಾರಿಯಾಗಿದೆ ಏಕೆಂದರೆ ಅಮೆರಿಕ ಸ್ವತಃ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ಆದ್ದರಿಂದ ಅಲ್ಲಿ ಇಂಧನ ಬೆಲೆಗಳು ಸಹ ಕಡಿಮೆ ಇರುತ್ತವೆ. ಇದು ಸಾಮಾನ್ಯವಾಗಿ ಪ್ರತಿ ಗ್ಯಾಲನ್‌ಗೆ $3 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ಆದರೆ ಪ್ರಸ್ತುತ ಜಾಗತಿಕ ಬಿಕ್ಕಟ್ಟು ಇಂಧನ ಕೊರತೆಯಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ಯುಎಸ್‌ನಲ್ಲಿ ಅತ್ಯಂತ ದುಬಾರಿ ಪೆಟ್ರೋಲ್ ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್‌ನಂತಹ ರಾಜ್ಯಗಳಲ್ಲಿ ಕಂಡುಬರುತ್ತದೆ, ಅಲ್ಲಿ ಬೆಲೆಗಳು ಗ್ಯಾಲನ್‌ಗೆ $5.50 (ಲೀಟರ್‌ಗೆ ಸುಮಾರು ₹120) ಮೀರುತ್ತದೆ.