ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ರದ್ದುಗೊಳಿಸಿದೆ. ಈ ಮೂಲಕ ಪಾಕಿಸ್ತಾನಿ ಪ್ರಜೆಗಳ ಭಾರತ ಪ್ರವೇಶಕ್ಕೆ ಕಡಿವಾಣ ಹಾಕಿದೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳಲ್ಲಿ ದೇಶ ತೊರೆಯಲು ಸೂಚಿಸಲಾಗಿದೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಬೆಂಬಲಿತ ಭಯೋತ್ಪಾದಕ ಗುಂಪು ಹೊತ್ತುಕೊಂಡಿದೆ.
ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ದುರ್ಮರಣಕ್ಕೀಡಾದ ಘಟನೆ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಪ್ರಕಟಿಸಿದೆ. ದೆಹಲಿಯಲ್ಲಿ ನಡೆದ ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿ (CCS) ಸಭೆಯ ಬಳಿಕ ಈ ನಿರ್ಧಾರ ಘೋಷಿಸಲಾಯ್ತು.
ಈ ಯೋಜನೆಯಡಿ ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ದೇಶವನ್ನು ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಅತಿಥಿಗಳಾಗಿ ಭಾರತದಲ್ಲಿದ್ದ ಇವರು ಅನುಮೋದಿತ ವಿಳಾಸ ತ್ಯಜಿಸಿ, ನಿಗದಿತ ಸಮಯದೊಳಗೆ ಪಾಕಿಸ್ತಾನಕ್ಕೆ ಹಿಂತಿರುಗಬೇಕಾಗುತ್ತದೆ.
ಪಹಲ್ಗಾಮ್ ದಾಳಿಗೆ ಲಷ್ಕರ್-ಎ-ತೊಯ್ಬಾ ಬೆಂಬಲವಿರುವ ಭಯೋತ್ಪಾದಕ ಗುಂಪಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಹೊಣೆ ಹೊತ್ತುಕೊಂಡಿದ್ದು, ಇದು ಪಾಕಿಸ್ತಾನ ಮೂಲದ ಸಂಘಟನೆಯಾಗಿದೆ. ಘಟನೆ ಬೆನ್ನಲ್ಲೇ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, “ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ” ಎಂಬ ಧೋರಣೆಯನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಪಾಲಿಸುತ್ತಿವೆ ಎಂದು ಹೇಳಿದರು.
ಏನಿದು ಸಿಂಧೂ ನದಿ ಒಪ್ಪಂದ: ಪಾಕ್ ಮೇಲೆ ಬೀರಲಿರುವ ಪರಿಣಾಮವೇನು?
ಸಾರ್ಕ್ ವೀಸಾ ವಿನಾಯಿತಿ ಯೋಜನೆ ಎಂದರೇನು?
1992ರಲ್ಲಿ ಪ್ರಾರಂಭವಾದ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ದ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನಗಳ ನಡುವೆ ಪ್ರಾದೇಶಿಕ ಸಹಕಾರ, ಜನ ಸಂಪರ್ಕ ಮತ್ತು ಸೌಹಾರ್ದವನ್ನು ಉತ್ತೇಜಿಸಲು ರೂಪುಗೊಂಡಿರುವ ಯೋಜನೆಯಾಗಿದೆ.
ಇಸ್ಲಾಮಾಬಾದ್‌ನಲ್ಲಿ 1988ರಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಈ ಬಗ್ಗೆ ಮುನ್ನುಡಿ ಹಾಕಲಾಯ್ತು, ರಾಜತಾಂತ್ರಿಕರು, ಸಂಸದರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಕ್ರೀಡಾಪಟುಗಳು ಮತ್ತು ವ್ಯಾಪಾರ ಮುಖಂಡರು ಸೇರಿದಂತೆ ನಿರ್ದಿಷ್ಟ ವರ್ಗದವರಿಗೆ, ವಿಶೇಷ ವೀಸಾ ಸ್ಟಿಕ್ಕರ್‌ಗಳ ಮೂಲಕ ಒಂದು ವರ್ಷದವರೆಗೆ ವೀಸಾ ವಿನಾಯಿತಿಯೊಂದಿಗೆ ಸಾರ್ಕ್ ರಾಷ್ಟ್ರಗಳಿಗೆ ಪ್ರವೇಶದ ಅವಕಾಶ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್‌ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್ ಮಾಡಿದ್ಯಾಕೆ?
ಈ ನಿರ್ಧಾರದಿಂದ ಪಾಕಿಸ್ತಾನಿ ಪ್ರಜೆಗಳ ಮೇಲೆ ಬೀರಬಹುದಾದ ಪರಿಣಾಮ:
ಪಾಕಿಸ್ತಾನಿ ಪ್ರಜೆಗಳಿಗೆ SVES ಒಂದು ರಾಜತಾಂತ್ರಿಕ ಸೇತುವೆಯಂತಿತ್ತು. ಈ ಯೋಜನೆಯಡಿ ವಿವಿಧ ಕ್ಷೇತ್ರಗಳ ಪಾಕಿಸ್ತಾನಿ ಪ್ರತಿನಿಧಿಗಳಿಗೆ ಭಾರತ ಪ್ರವೇಶ ಸಾಧ್ಯವಿತ್ತು. ದ್ವಿಪಕ್ಷೀಯ ಸಂಬಂಧಗಳು ಉದ್ವಿಗ್ನವಾಗಿರುವ ಸಂದರ್ಭದಲ್ಲಿ ಸಹ ಈ ಯೋಜನೆಯು ಸಂವಾದ ಹಾಗೂ ಸಂಸ್ಕೃತಿಯ ವಿನಿಮಯದ ಉತ್ತಮ ವಾತಾವರಣವನ್ನು ಬೆಳೆಸಲು ಸಹಾಯವಾಗುತ್ತಿತ್ತು.
ಆದರೆ ಈ ಬಾರಿ ಭಾರತ ಈ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ, ಸುಲಭವಾದ ಪ್ರವೇಶವನ್ನೇ ಮುಚ್ಚಿಬಿಟ್ಟಿದೆ. ಮಿಶ್ರಿಯವರ ಹೇಳಿಕೆಯ ನಂತರ ಈ ನಿರ್ಧಾರ ತಕ್ಷಣದಿಂದ ಜಾರಿಗೆ ಬರುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, ಭಾರತವು ಪಾಕಿಸ್ತಾನದೊಂದಿಗೆ 1960ರ ಸಿಂಧೂ ನದಿ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಲಾಗಿದ್ದು, ಮೇ 1ರೊಳಗೆ ಮಾನ್ಯ ದಾಖಲೆಗಳಿರುವ ಪಾಕಿಸ್ತಾನಿ ಪ್ರಜೆಗಳು ತಮ್ಮ ನಾಡಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ.
ಅಲ್ಲದೆ, ಭಾರತವು ಪಾಕಿಸ್ತಾನಿ ರಕ್ಷಣಾ ಸಲಹೆಗಾರರನ್ನು 'ಪರ್ಸೋನಾ ನಾನ್ ಗ್ರಾಟಾ' ಎಂದು ಘೋಷಿಸಿರುವುದರ ಜೊತೆಗೆ, ಉಭಯ ದೇಶಗಳ ಹೈಕಮಿಷನ್‌ಗಳಲ್ಲಿ ಸಿಬ್ಬಂದಿಯ ಸಂಖ್ಯೆಯನ್ನು 55ರಿಂದ 30ಕ್ಕೆ ಕಡಿತಗೊಳಿಸಲಾಗುತ್ತಿದೆ.
