Cordecyps Fungus: ನೈಸರ್ಗಿಕ ವಯಾಗ್ರಾ ಕಳ್ಳತನಕ್ಕಾಗಿ ಅರುಣಾಚಲ ಗಡಿಗೆ ನುಗ್ಗಿದ್ದ ಚೀನಾ ಸೈನಿಕರು..!
ಚೀನಿ ಯೋಧರು ಭಾರತದ ಗಡಿಗೆ ಬಂದಿದ್ದು ಹಿಮಾಲಯದ ಎತ್ತರದ ಪ್ರದೇಶದಲ್ಲಿ ಮಾತ್ರ ಬೆಳೆಯುವ ಕಾರ್ಡಿಸೆಫ್ಸ್ ಫಂಗಸ್‌ಗಾಗಿ ಎಂದು ಚಿಂತಕರ ಚಾವಡಿಯೊಂದು ಹೇಳಿದೆ. ಲೈಂಗಿಕ ಶಕ್ತಿವರ್ಧಕ ಎಂದು ನಂಬಲಾಗಿರುವ ಈ ಅಣಬೆ ಬೆಲೆ ಚಿನ್ನಕ್ಕಿಂತ ದುಬಾರಿ ಎಂದು ತಿಳಿದುಬಂದಿದೆ.
ನವದೆಹಲಿ: ಇತ್ತೀಚೆಗೆ ಅರುಣಾಚಲ ಪ್ರದೇಶದ (Arunachal Pradesh) ತವಾಂಗ್‌ನಲ್ಲಿ (Tawang) ಚೀನಾ ಸೇನೆ (China Army) ಭಾರತದ ಗಡಿಯೊಳಗೆ (Indian Border) ನುಗ್ಗಿದ್ದು ಗಡಿ ಅತಿಕ್ರಮಣಕ್ಕಲ್ಲ. ಬದಲಾಗಿ ನೈಸರ್ಗಿಕ ವಯಾಗ್ರಾ (ಕಾರ್ಡಿಸೆಫ್ಸ್ ಫಂಗಸ್) ಕ್ಕಾಗಿ (Cordyceps fungus) ಎಂದು ಜಾಗತಿಕ ಚಿಂತಕರ ಚಾವಡಿಯೊಂದು ಹೇಳಿದೆ. ಚೀನಾ ಅತಿಕ್ರಮಣ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ದೊಡ್ಡ ಮಟ್ಟದ ಸಮರಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ ಚಿಂತಕರ ಚಾವಡಿ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ದೆಹಲಿ ಮೂಲದ ‘ಇಂಡೋ ಪೆಸಿಫಿಕ್ ಸೆಂಟರ್ ಫಾರ್ ಸ್ಟ್ರಾಟರ್ಜಿಕ್ ಕಮ್ಯುನಿಕೇಷನ್’ (Indo-Pacific Centre for Strategic Communications (IPCSC) ಚಿಂತಕರ ಚಾವಡಿ ಅನ್ವಯ ಚೀನಾ ಯೋಧರು ಭಾರತದ ಗಡಿಯೊಳಗೆ ನುಗ್ಗಿದ್ದು, ಚಿನ್ನಕ್ಕಿಂತಲೂ ಹೆಚ್ಚು ಬೆಲೆಬಾಳುವ, ಮಾನವರ ಲೈಂಗಿಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ ಎಂದು ಹೇಳಲಾಗುವ ಕಾರ್ಡಿಸೆಫ್ಸ್ ಫಂಗಸ್ ಎಂಬ ವಸ್ತುವನ್ನು ಸಂಗ್ರಹಿಸಲು ಎಂದು ವರದಿ ನೀಡಿದೆ.
ಸಂಸ್ಥೆ ಹೇಳಿದ್ದೇನು..?:
ಕಾರ್ಡಿಸೆಫ್ಸ್ ಫಂಗಸ್ ಎಂಬ ಅಣಬೆ ಭಾರೀ ಪ್ರಮಾಣದ ವೈದ್ಯಕೀಯ ಗುಣಗಳನ್ನು ಹೊಂದಿದೆ ಎಂದು ಚೀನಿಯರು ಮತ್ತು ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ನಂಬಿಕೆ ಇದೆ. ನೈಸರ್ಗಿಕ ವಯಾಗ್ರಾ ಎಂಬ ಖ್ಯಾತಿ ಹೊಂದಿರುವ ಇದು ಭಾರತದ ಹಿಮಾಲಯದ ಅತಿ ಎತ್ತರದ ಪ್ರದೇಶಗಳು ಹಾಗೂ ಕ್ವಿನ್‌ಹೈ-ಟಿಬೇಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡುಬರುತ್ತವೆ.
ಇದನ್ನು ಓದಿ: ಚೀನಾ ಗಡಿ ಸಂಘರ್ಷ ಬೆನ್ನಲ್ಲೇ ತವಾಂಗ್‌ನಲ್ಲಿ 23 ಮೊಬೈಲ್ ಟವರ್
ಉತ್ತಮ ಗುಣಮಟ್ಟದ ಕಾರ್ಡಿಸೆಫ್ಸ್ ಫಂಗಸ್ ಭಾರೀ ಬೆಲೆ ಬೆಲೆ ಹೊಂದಿದೆ. ಜಾಗತಿಕವಾಗಿ ಪ್ರತಿ ವರ್ಷ ಸುಮಾರು 8000 ಕೋಟಿ ರು. ಮೌಲ್ಯದ ವಹಿವಾಟನ್ನು ಈ ಅಣಬೆ ಉದ್ಯಮ ಹೊಂದಿದೆ. ಚೀನಾ ಈ ವಯಾಗ್ರಾದ ಪ್ರಮುಖ ಉತ್ಪಾದಕ ಹಾಗೂ ರಫ್ತುದಾರ ದೇಶವಾಗಿದೆ. ಆದರೆ ಕಳೆದ 2 ವರ್ಷಗಳಿಂದ ಕ್ವಿನ್‌ಹೈನಲ್ಲಿ ಇದರ ಫಸಲು ಕಡಿಮೆಯಾಗಿದೆ. 2018ರಲ್ಲಿ ಚೀನಾದಲ್ಲಿ 43,500 ಕೆ.ಜಿ. ಕಾರ್ಡಿಸೆಫ್ಸ್ ಫಂಗಸ್ ಉತ್ಪಾದನೆಯಾಗಿದ್ದರೆ, 2022ರಲ್ಲಿ 41200 ಕೆ.ಜಿ.ಗೆ ಇಳಿದಿದೆ. ಹಾಗಾಗಿ ಭಾರತದ ಭೂಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ತವಾಂಗ್ ಪ್ರದೇಶದಿಂದ ಇವುಗಳನ್ನು ಸಂಗ್ರಹಿಸಲು ಚೀನಾ ಯೋಧರು ಅತಿಕ್ರಮಣ ಮಾಡಿದ್ದರು ಎಂದು ಹೇಳಿದೆ.
ಏನಿದು ಕಾರ್ಡಿಸೆಫ್ಸ್ ಫಂಗಸ್..?:
ಇದೊಂದು ಅಪರೂಪದ ಅಣಬೆಯಾಗಿದ್ದು, ಇದು ಕಿಡ್ನಿ, ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಎಂಬ ನಂಬಿಕೆ ಇದೆ. ಇದಕ್ಕಿಂತ ಹೆಚ್ಚಾಗಿ ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಇದನ್ನು ನೈಸರ್ಗಿಕ ವಯಾಗ್ರಾ ಎಂದೂ ಕರೆಯಲಾಗುತ್ತದೆ. ಇದನ್ನು ಸುಧಾರಿತ ಲ್ಯಾಬ್‌ಗಳಲ್ಲಿ ಬೆಳೆಸುವುದು ಸಹ ಕಠಿಣವಾಗಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!
ಚಿನ್ನಕ್ಕಿಂತ ದುಬಾರಿ
- ಚೀನಿ ಯೋಧರು ಬಂದಿದ್ದು ಕಾರ್ಡಿಸೆಫ್ಸ್ ಫಂಗಸ್ ಎಂಬ ಅಣಬೆ ಹುಡುಕಿಕೊಂಡು
- ಲೈಂಗಿಕ ಶಕ್ತಿವರ್ಧಕ ಎಂದು ನಂಬಲಾಗಿರುವ ಈ ಅಣಬೆ ಬೆಲೆ ಚಿನ್ನಕ್ಕಿಂತ ದುಬಾರಿ
- ಹಿಮಾಲಯದ ಎತ್ತರದ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತದೆ ಕಾರ್ಡಿಸೆಫ್ಸ್ ಫಂಗಸ್
- ತನ್ನ ದೇಶದಲ್ಲಿ ಇದರ ಫಸಲು ಕಡಿಮೆಯಾದ್ದರಿಂದ ಅರುಣಾಚಲಕ್ಕೆ ಚೀನಾ ಬಂದಿದೆ
- ಇಂಡೋ ಪೆಸಿಫಿಕ್ ಸೆಂಟರ್ ಫಾರ್ ಸ್ಟ್ರಾಟಜಿಕ್ ಕಮ್ಯುನಿಕೇಷನ್‌ನಿಂದ ಹೇಳಿಕೆ
ಇದನ್ನೂ ಓದಿ: ಚೀನಾದ ತವಾಂಗ್ ತಂಟೆಗೆ ಬ್ರೇಕ್; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್: ಸಂಸತ್ತಿಗೆ ಕೇಂದ್ರ ಮಾಹಿತಿ