Asianet Suvarna News Asianet Suvarna News

ಚೀನಾದ ತವಾಂಗ್‌ ತಂಟೆಗೆ ಬ್ರೇಕ್‌; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್‌: ಸಂಸತ್ತಿಗೆ ಕೇಂದ್ರ ಮಾಹಿತಿ

ಡಿಸೆಂಬರ್‌ 9ರಂದು ಯಾಂಗ್‌ಟ್ಸೆಯಲ್ಲಿ ಏಕಪಕ್ಷೀಯವಾಗಿ ಚೀನಾ ಸೈನಿಕರು ವಸ್ತುಸ್ಥಿತಿ ಬದಲಿಸಲು ಯತ್ನಿಸಿದರು. ಈ ವೇಳೆ ಎರಡೂ ಸೈನಿಕರ ನಡುವೆ ದೈಹಿಕ ಸಂಘರ್ಷ ನಡೆಯಿತು ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ. 

rajnath singh on indo china border tussle at tawang arunachal pradesh ash
Author
First Published Dec 14, 2022, 9:06 AM IST

ನವದೆಹಲಿ: ‘ಚೀನಾ ಯೋಧರು (China Soldiers) ಅರುಣಾಚಲ ಪ್ರದೇಶದ (Arnachal Pradesh) ಗಡಿ ಪ್ರದೇಶವಾದ ತವಾಂಗ್‌ನ (Tawang) ಯಾಂಗ್‌ಟ್ಸೆ (Yangtze) ಪ್ರದೇಶದಲ್ಲಿ ಯಥಾಸ್ಥಿತಿ ಬದಲಿಸಿ ಮುನ್ನುಗ್ಗಲು ಯತ್ನಿಸಿದರು. ಇದೇ ಭಾರತ (India) ಹಾಗೂ ಚೀನಾ ಯೋಧರ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಸಕಾಲಕ್ಕೆ ಭಾರತದ ವೀರ ಪಡೆಗಳು, ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಿವೆ’ ಎಂದು ರಕ್ಷಣಾ ಸಚಿವ (Defence mInister) ರಾಜನಾಥ್‌ ಸಿಂಗ್‌ (Rajnath Singh) ಹೇಳಿದ್ದಾರೆ.

ಭಾರತ-ಚೀನಾ ಯೋಧರ ನಡುವೆ ಕಳೆದ ಶುಕ್ರವಾರ ನಡೆದ ಸಂಘರ್ಷದ ಬಗ್ಗೆ ಮಂಗಳವಾರ ಲೋಕಸಭೆ ಹಾಗೂ ರಾಜ್ಯಸಭೆಗೆ ಸ್ವಯಂಪ್ರೇರಿತರಾಗಿ ಉತ್ತರ ನೀಡಿದ ಸಿಂಗ್‌, ‘ಡಿಸೆಂಬರ್‌ 9ರಂದು ಯಾಂಗ್‌ಟ್ಸೆಯಲ್ಲಿ ಏಕಪಕ್ಷೀಯವಾಗಿ ಚೀನಾ ಸೈನಿಕರು ವಸ್ತುಸ್ಥಿತಿ ಬದಲಿಸಲು ಯತ್ನಿಸಿದರು. ಈ ವೇಳೆ ಎರಡೂ ಸೈನಿಕರ ನಡುವೆ ದೈಹಿಕ ಸಂಘರ್ಷ ನಡೆಯಿತು. ಚೀನಾ ಯೋಧರ ಯತ್ನಕ್ಕೆ ನಮ್ಮ ಯೋಧರು ದಿಟ್ಟಉತ್ತರ ನೀಡಿದರು. ಈ ಮೂಲಕ ನಮ್ಮ ಪ್ರದೇಶಕ್ಕೆ ಪ್ರವೇಶಿಸಿ ಅತಿಕ್ರಮಣ ಮಾಡುವುದನ್ನು ತಡೆದರು. ಹೀಗಾಗಿ ವಿಧಿಯಿಲ್ಲದೇ ಚೀನಾ ಸೈನಿಕರು ತಮ್ಮ ಸ್ವಸ್ಥಾನಕ್ಕೆ ಮರಳಿದರು’ ಎಂದು ಹೇಳಿದರು.

ಇದನ್ನು ಓದಿ: ರಾಜೀವ್‌ ಗಾಂಧಿ ಟ್ರಸ್ಟ್‌ಗೆ ಚೀನಾ ಹಣ; ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಎಂದ ಅಮಿತ್ ಶಾ

‘ಈ ದೈಹಿಕ ಘರ್ಷಣೆ ವೇಳೆ ನಮ್ಮ ಕೆಲವು ಯೋಧರಿಗೆ ಗಾಯಗಳಾಗಿವೆ. ಸುದೈವವಶಾತ್‌ ಯಾವುದೇ ಸಾವು ಅಥವಾ ಗಭೀರ ಗಾಯ ಉಂಟಾಗಿಲ್ಲ. ಭಾರತದ ಕಮಾಂಡರ್‌ಗಳು ಸಕಾಲಕ್ಕೆ ಮಧ್ಯಪ್ರವೇಶ ಮಾಡಿದ್ದರಿಂದ, ಚೀನಾ ಯೋಧರು ತಮ್ಮ ಸ್ಥಾನಕ್ಕೆ ವಾಪಸಾದರು’ ಎಂದು ವಿವರಿಸಿದರು.

‘ಇದರ ಬೆನ್ನಲ್ಲೇ ಡಿಸೆಂಬರ್‌ 11ರಂದು ಭಾರತೀಯ ಸೇನಾ ಸ್ಥಳೀಯ ಕಮಾಂಡರ್‌ ಅವರು ಚೀನಾದ ಕಮಾಂಡರ್‌ ಜತೆ ಧ್ವಜಸಭೆ (ಶಾಂತಿಸಭೆ) ನಡೆಸಿದರು. ಇನ್ನು ಮುಂದೆ ಇಂಥ ದುಸ್ಸಾಹಸ ಮಾಡಕೂಡದು. ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಚೀನಾ ಪಡೆಗಳಿಗೆ ತಾಕೀತು ಮಾಡಲಾಯಿತು. ಚೀನಾದ ರಾಜತಾಂತ್ರಿಕರ ಗಮನಕ್ಕೂ ಈ ವಿಷಯವನ್ನು ತರಲಾಗಿದೆ’ ಎಂದು ರಾಜನಾಥ್‌ ಮಾಹಿತಿ ನೀಡಿದರು.

ಇದನ್ನೂ ಓದಿ: ಲಡಾಖ್ ಬಳಿಕ ತವಾಂಗ್‌‌ನಲ್ಲಿ ಚೀನಾ ಕಿರಿಕ್, ಸೇನಾ ಚಕಮಕಿಯಲ್ಲಿ ಯೋಧರಿಗೆ ಗಾಯ!

‘ಭಾರತದ ಗಡಿಯ ಸುಭದ್ರತೆ ಕಾಯ್ದುಕೊಳ್ಳಲು ಭಾರತೀಯ ಪಡೆಗಳು ಬದ್ಧವಾಗಿವೆ. ಅಲ್ಲದೆ, ಸುಭದ್ರತೆಗೆ ಧಕ್ಕೆ ತರುವ ಯಾವುದೇ ಯತ್ನಗಳನ್ನು ವಿಫಲಗೊಳಿಸುತ್ತವೆ’ ಎಂದು ರಕ್ಷಣಾ ಸಚಿವರು ದೃಢ ಸ್ವರಗಳಲ್ಲಿ ಹೇಳಿದರು. ಅಲ್ಲದೆ, ‘ಸಂಸತ್ತಿನ ಸದನಗಳು ಈ ವಿಷಯದಲ್ಲಿ ಒಗ್ಗಟ್ಟಾಗಿ ಶೌರ್ಯ ಪ್ರದರ್ಶನ ಮಾಡಿದ ನಮ್ಮ ಯೋರ ಪರ ನಿಲ್ಲುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದೂ ನುಡಿದರು.

ಉಭಯ ಸದನಗಳಲ್ಲಿ ಗಲಾಟೆ:
ಈ ನಡುವೆ ರಾಜನಾಥ ಸಿಂಗ್‌ ಹೇಳಿಕೆಗೂ ಮುನ್ನ ಹಾಗೂ ಹೇಳಿಕೆಯ ನಂತರ ಉಭಯ ಸದನಗಳಲ್ಲಿ ವಿಪಕ್ಷಗಳು ಕೋಲಾಹಲ ಎಬ್ಬಿಸಿದವು. ಬೆಳಗ್ಗೆ 11ಕ್ಕೆ ಸದನ ಆರಂಭವಾಗುತ್ತಿದ್ದಂತೆಯೇ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಕಲಾಪದ ಎಲ್ಲ ಇತರ ವಿಷಯಗಳ ಚರ್ಚೆಗೆ ಅಂಕುಶ ಹಾಕಿ, ಗಡಿ ಚರ್ಚೆ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಆದರೆ ಇದಕ್ಕೆ ಸಭಾಪತಿಗಳು ಅವಕಾಶ ನೀಡದೇ, ‘ರಕ್ಷಣಾ ಸಚಿವರು ಹೇಳಿಕೆ ನೀಡಿದ ನಂತರ ಚರ್ಚೆ ನಡೆಯಲಿ’ ಎಂದು ತಿರುಗೇಟು ನೀಡಿದರು. ಆಗ ಕೋಲಾಹಲ ಉಂಟಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಇದನ್ನು ಓದಿ: ಭಾರತ-ಚೀನಾ ಗಡಿ ಸಂಘರ್ಷಕ್ಕೆ ನೆಹರು ಕಾರಣ: ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಇನ್ನು ರಾಜನಾಥ್‌ ಹೇಳಿಕೆ ನೀಡಿದ ನಂತರ ರಾಜ್ಯಸಭೆಯಲ್ಲಿ ಕೆಲವು ಸದಸ್ಯರು, ಸಚಿವರ ಹೇಳಿಕೆ ಬಗ್ಗೆ ಸ್ಪಷ್ಟನೆ ಬಯಸಿದರು. ‘ಆದರೆ ಇದು ಸೂಕ್ಷ್ಮ ವಿಷಯ. ಸ್ಪಷ್ಟನೆಗೆ ಅವಕಾಶವಿಲ್ಲ’ ಎಂದು ಉಪಸಭಾಪತಿ ಹರಿವಂಶ ತಿರಸ್ಕರಿಸಿದರು. ಆಗ ವಿಪಕ್ಷಗಳು ಸಭಾತ್ಯಾಗ ಮಾಡಿದವು.

ಚೀನಾ ಕಾಲುಕೆದರಿ ಜಗಳ ಮಾಡುತ್ತಿರುವುದೇಕೆ..? ಆಯಕಟ್ಟಿನ ಸ್ಥಳ ಕೈವಶ, ಮುಖಭಂಗ ತಪ್ಪಿಸಿಕೊಳ್ಳುವ ಯತ್ನ?
ಯಾಂಗ್‌ಟ್ಸೆ ಅತ್ಯಂತ ಆಯಕಟ್ಟಿನ ಪ್ರದೇಶ. ಇಲ್ಲಿನ ಶಿಖರಗಳ ಮೇಲೆ ನಿಂತರೆ ಅತ್ಯಂತ ಸುಲಭವಾಗಿ 25-30 ಕಿ.ಮೀ ದೂರದ ಪ್ರದೇಶಗಳ ಮೇಲೆ ಕಣ್ಗಾವಲು ಇಡಬಹುದು. ಹೀಗಾಗಿ ಈ ಪ್ರದೇಶಗಳನ್ನು ಕೈವಶ ಮಾಡಿಕೊಳ್ಳಲು ಚೀನಾ ಯತ್ನಿಸಿರಬಹುದು.

ಇತ್ತೀಚೆಗೆ ಲಡಾಖ್‌ನಲ್ಲಿ ಅಮೆರಿಕದ ಜೊತೆಗೆ ಭಾರತದ ಸೇನೆ ಜಂಟಿ ಸೇನಾ ಕಸರತ್ತು ನಡೆಸಿತ್ತು. ಆಗಲೇ ಚೀನಾಕ್ಕೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಅಮೆರಿಕದದಿಂದ ದೂರ ಇರಿ ಎಂದು ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡುವ ಉದ್ದೇಶ ಇರಬಹುದು.

ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌ ಜೊತೆಗೂಡಿ ಭಾರತ ಸ್ಥಾಪಿಸಿರುವ ಚೀನಾ ವಿರೋಧಿ ಕ್ವಾಡ್‌ ಒಕ್ಕೂಟಕ್ಕೆ ಕಮ್ಯನಿಸ್ಟ್‌ ದೇಶ ಭಾರೀ ವಿರೋಧ ಹೊಂದಿದೆ. ಹೀಗಾಗಿ ಭಾರತಕ್ಕೆ ಈ ವಿಷಯದಲ್ಲೂ ಟಾಂಗ್‌ ನೀಡುವ ಉದ್ದೇಶ ಇರಬಹುದು.

ಇತ್ತೀಚೆಗೆ ಕೋವಿಡ್‌ ನಿರ್ಬಂಧ ಕ್ರಮಗಳಿಂದಾಗಿ ಚೀನಾದಲ್ಲಿ ಕೋಟ್ಯಂತರ ಜನರು ಕಮ್ಯುನಿಸ್ಟ್‌ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಹೊಸದಾಗಿ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್‌ ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶ ಇರಬಹುದು.

ಕೆಲ ತಿಂಗಳ ಹಿಂದೆ ತೈವಾನ್‌ ಮೇಲೆ ಇನ್ನೇನು ಯುದ್ಧ ಆರಂಭವಾಗಿಯೇ ಬಿಟ್ಟಿತು ಎನ್ನುವ ಮಟ್ಟಿಗೆ ಚೀನಾ ಆಕ್ರಮಣಕಾರಿ ನೀತಿ ಪ್ರದರ್ಶಿಸಿತ್ತು. ಈ ವೇಳೆ ಅಮೆರಿಕದ ಹಿರಿಯ ರಾಜಕಾರಣಿಗಳು ತೈವಾನ್‌ಗೆ ಭೇಟಿ ನೀಡಿ ನೈತಿಕ ಬೆಂಬಲ ವ್ಯಕ್ತಪಡಿಸಿದ್ದರು. ಈ ವೇಳೆ ಆದ ಮುಖಭಂಗದಿಂದ ಇದೀಗ ಭಾರತದ ಜೊತೆ ಜಗಳ ತೆಗೆದಿರಬಹುದು.

Follow Us:
Download App:
  • android
  • ios