ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ನುಸುಳುವಿಕೆ ತಡೆಯಲು ಬಿಎಸ್‌ಎಫ್ ಜೇನುನೊಣಗಳನ್ನು ಬಳಸುತ್ತಿದೆ. ಈ ಕ್ರಮವು ಗಡಿ ಭದ್ರತೆಯನ್ನು ಹೆಚ್ಚಿಸುವುದಲ್ಲದೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. 

ನವದೆಹಲಿ/ಕೋಲ್ಕತ್ತಾ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಅಕ್ರಮ ನುಸುಳುವಿಕೆ ಸೇರಿದಂತೆ ಇತರೆ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷವಾದ ಕ್ರಮವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಜೇಣುನೊಣಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಗಡಿ ಪ್ರದೇಶದಲ್ಲಿ ಜನರಿಗೆ ಹೊಸ ಉದ್ಯೋಗವೂ ಸೃಷ್ಟಿಯಾಗುತ್ತಿದೆ. ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಗಡಿ ಪ್ರದೇಶದಲ್ಲಿರುವ ನಾಡಿಯಾ ಜಿಲ್ಲೆಯ ಜೇನು ಸಾಕಾಣಿಕೆ ಜನರನ್ನು ಭೇಟಿಯಾಗಿದೆ. ಈ ರೀತಿಯಾಗಿ ಭದ್ರತೆ ಕ್ರಮವನ್ನು ಎಸ್‌ಎಫ್‌ನ 32 ನೇ ಬೆಟಾಲಿಯನ್ ಮೊದಲು ಆರಂಭಿಸಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ನೆರೆಯ ಬಾಂಗ್ಲಾದೇಶದೊಂದಿಗೆ ಭಾರತ 4,096 ಕಿಲೋ ಮೀಟರ್‌ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ 2,217 ಕಿ.ಮೀ. ಗಡಿ ಪಶ್ಚಿಮ ಬಂಗಾಳದಲ್ಲಿದೆ. ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಿಎಸ್‌ಎಫ್‌ ಜೊತೆಯಲ್ಲಿ ಆಯುಷ್ ಸಚಿವಾಲಯ ಕೆಲಸ ಮಾಡಿದೆ. ಗಡಿಯುದ್ದಕ್ಕೂ ಮಿಶ್ರಲೋಹದ ಸ್ಮಾರ್ಟ್ ಬೇಲಿ ಅಳವಡಿಸಲು ತಂತ್ರಜ್ಞರ ಸಲಹೆ ಪಡೆದುಕೊಳ್ಳಲಾಗಿದೆ.

32ನೇ ಬಟಾಲಿಯನ್ ಕಮಾಂಡೆಂಟ್ ಹೇಳಿದ್ದೇನು?

ಈ ಕುರಿತು ಪಿಟಿಐ ಜೊತೆ 32ನೇ ಬಟಾಲಿಯನ್ ಕಮಾಂಡೆಂಟ್ ಸುಜೀತ್ ಕುಮಾರ್ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ 'ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್' (ವಿಪಿಪಿ) ಅಡಿಯಲ್ಲಿ ತೆಗೆದುಕೊಳ್ಳಲಾದ ಉಪಕ್ರಮವಾಗಿದೆ. ಬಿಎಸ್‌ಎಫ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜೇನುನೊಣಗಳು ಹೇರಳವಾಗಿ ಪರಾಗಸ್ಪರ್ಶ ಮಾಡಲು ಈ ಗೂಡುಗಳ ಸುತ್ತಲೂ ಹೂವು ಬಿಡುವ ಮತ್ತು ನೆಡಬಹುದಾದ ಔಷಧೀಯ ಸಸ್ಯಗಳನ್ನು ಒದಗಿಸುವಂತೆ ಬಿಎಸ್‌ಎಫ್ ಆಯುಷ್ ಸಚಿವಾಲಯವನ್ನು ವಿನಂತಿಸಿದೆ ಎಂದು ಹೇಳಿದ್ದಾರೆ. ಸ್ಮಾರ್ಟ್‌ ಬೇಲಿಗಳಿಗೆ ಅಳವಾಡಿಸಲಾಗಿರುವ ಗೂಡುಗಳಲ್ಲಿ ಜೇನುಗಳು ನೆಲೆಯೂರಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ದುಷ್ಕರ್ಮಿಗಳಿಂದ ಬೇಲಿಗೆ ಕತ್ತರಿ

ಮುಂದುವರಿದು ಮಾತನಾಡಿರುವ ಸುಜೀತ್ ಕುಮಾರ್, ಜೇನು ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಈ ಕ್ರಮದಿಂದ ಲಾಭವಾಗಲಿದೆ. ಸ್ಥಳೀಯ ಜೇನು ಸಾಕಾಣಿಕೆದಾರರು ಬಿಎಸ್‌ಎಫ್‌ ನಡೆಯನ್ನು ಸ್ವಾಗತಿಸಿದ್ದಾರೆ. ದಕ್ಷಿಣ ಬಂಗಾಳ ಗಡಿಭಾಗದಲ್ಲಿ ಬರುವ ಪ್ರದೇಶಗಳಲ್ಲಿ ಪ್ರಾಣಿಗಳು, ಚಿನ್ನ, ಬೆಳ್ಳಿ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಅಪರಾಧ ಪ್ರಕರಣಗಳು ವರದಿಯಾಗುತ್ತಿರುತ್ತವೆ. ದುಷ್ಕರ್ಮಿಗಳು ಮತ್ತು ಕಳ್ಳಸಾಗಣೆದಾರರು ಅಕ್ರಮ ಚಟುವಟಿಕೆಗಳಿಗಾಗಿ ಬೇಲಿಯನ್ನು ಕತ್ತರಿಸಲು ಪ್ರಯತ್ನಿಸಿದ ನಿದರ್ಶನಗಳಿವೆ ಎಂದು ಹೇಳಿದ್ದಾರೆ.

ಬೇಲಿಗೆ ಅಳವಡಿಸಲಾಗಿರುವ ಜೇನುಗೂಡುಗಳು ಬೇಲಿ ಕತ್ತರಿಸಲು ಮುಂದಾಗುವ ದುಷ್ಕರ್ಮಿಗಳಿಗೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ಜೇನುನೊಣಗಳ ಹಿಂಡು ದುಷ್ಕರ್ಮಿಗಳ ಮೇಲೆ ದಾಳಿ ಮಾಡುತ್ತವೆ. ಕಳ್ಳಸಾಗಣೆ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶಗಳ ನಿಯಮಿತ ಅಂತರದಲ್ಲಿ ಜೇನುಗೂಡುಗಳನ್ನು ಅಳವಡಿಸಲಾಗುತ್ತದೆ. ಮರದ ರಚನೆ ಬಳಸಿ ಗೂಡುಗಳ ನಿರ್ಮಾಣ ಮಾಡಲಾಗಿದೆ. ಆದ್ರೆ ಎಷ್ಟು ಜೇನುಗೂಡುಗಳನ್ನು ಅಳವಡಿಸಲಾಗಿದೆ ಎಂಬ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಸುಜೀತ್ ಕುಮಾರ್ ಹೇಳುತ್ತಾರೆ.

ಜೇನು ಸಾಕಾಣಿಕೆ ತರಬೇತಿ

ಆಯುಷ್ ಸಚಿವಾಲಯವು ತುಳಸಿ, ಏಕಂಗಿ, ಸತ್ಮುಲಿ, ಅಶ್ವಗಂಧ, ಅಲೋವೆರಾ ಮುಂತಾದ ಔಷಧೀಯ ಸಸ್ಯಗಳನ್ನು ಬಿಎಸ್‌ಎಫ್‌ಗೆ ಒದಗಿಸಿದೆ. ಸ್ಥಳೀಯ ಜನರೊಂದಿಗೆ ಪಡೆಯ ಜವಾನರು ಗಡಿ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ನೆಡುತ್ತಿದ್ದಾರೆ. ಇದರಿಂದ ಜೇನು ನೊಣಗಳು ಬೇಲಿಯ ಸುತ್ತವೇ ಇರಲಿವೆ. ಇತ್ತೀಚೆಗೆ ನಾಡಿಯಾದ ಕದಿಪುರ ಗ್ರಾಮದಲ್ಲಿ ಸಾರ್ವಜನಿಕ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಜೇನು ಸಾಕಾಣಿಕೆಯ ಕುರಿತು ವಿಶೇಷ ತರಬೇತಿಯನ್ನು ನೀಡಲಾಗಿದೆ. 'ಬಿಎಸ್‌ಎಫ್ ಪತ್ನಿಯರ ಕಲ್ಯಾಣ ಸಂಘ'ದ ಅಂಗಡಿಗಳ ಮೂಲಕ ಜೇನುತುಪ್ಪ ಮಾರಾಟ ಮಾಡುವ ಕುರಿತು ಮಾಹಿತಿಯನ್ನು ಸಹ ನೀಡಲಾಗಿದೆ. ನಾಡಿಯಾ ಭಾಗದಲ್ಲಿ ಸಾಸಿವೆಯನ್ನು ಸಹ ಅಧಿಕವಾಗಿ ಬೆಳೆಯಲಾಗುತ್ತದೆ.

ಈ ಪ್ರದೇಶದಲ್ಲಿ ಮಾವಿನ ಮರಗಳಿಂದ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುತ್ತಿಲ್ಲ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ. ಗಡಿ ಪ್ರದೇಶದಲ್ಲಿ ಜೇನು ಸಾಕಣೆಯಿಂದಾಗಿ, ಈ ಮರಗಳಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಬೆಳೆಯಲು ಪ್ರಾರಂಭಿಸಬಹುದು. ಇದು ಗ್ರಾಮಸ್ಥರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಆಯುಷ್ ಸಚಿವಾಲಯದ ಅಧಿಕಾರಿಗಳು ಬಿಎಸ್‌ಎಫ್‌ಗೆ ತಿಳಿಸಿದ್ದಾರೆ.