ಕಾರಿನಲ್ಲಿ ಪುತ್ರನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ದುರ್ಷರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಹಾಗೂ 24ರ ಹರೆಯದ ಪುತ್ರ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

ಕೋಲ್ಕತಾ (ಆ.16) ಕಾಂಗ್ರೆಸ್ ಮುಖಂಡ ಹಾಗೂ ಪುತ್ರ ಇಬ್ಬರು ಕಾರಿನಲ್ಲಿ ಮನೆಗೆ ಮರಳುತ್ತಿರುವಾಗ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದಾರೆ. ರಾಜಕೀಯ ದ್ವೇಷಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖಂಡ ಅನಿಸೂರ್ ರೆಹಮಾನ್ ಹಾಗೂ ಆತನ ಪುತ್ರ 24ರ ಹರೆಯದ ಅಬು ಸೂಫಿಯಾನ್ ಇಬ್ಬರು ಸ್ಥಳದಲ್ಲೇ ಮೃತಪ್ಟಟಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಆಟೋರಿಕ್ಷಾ ಹಾಗೂ ಬೈಕ್ ಮೂಲಕ ಆಗಮಿಸಿದ ದುಷ್ಕರ್ಮಿಗಳು

ನಕಾಶಿಪರ ವಲಯದಲ್ಲಿ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿರುವ 50ರ ಹರೆಯದ ಅನಿಸೂರ್ ರೆಹಮಾನ್ ಕೆಲಸದ ನಿಮಿತ್ತ ಮಗನ ಜೊತೆ ತೆರಳಿದ್ದರು. ಕೆಲಸ ಮುಗಿಸಿ ಮನೆಗೆ ತಮ್ಮ ಕಾರಿನಲ್ಲಿ ಮರಳುತ್ತಿರುವಾಗ ಈ ಘಟನೆ ನಡೆದಿದೆ. ಕೃಷ್ಣನಗರ-ನವದ್ವೀಪ ರಸ್ತೆ ಮೂಲಕ ಮನೆಗೆ ಮರಳುತ್ತಿದ್ದ ವೇಳೆ ಆಟೋ ರಿಕ್ಷಾ ಹಾಗೂ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಮುಖಂಡನ ಕಾರು ತಡೆದಿದ್ದಾರೆ. ಆಟೋ ಹಾಗೂ ಬೈಕ್ ಮೂಲಕ ಡಿಕ್ಕಿ ಹೊಡೆಸಿದ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಕಾರಿ ಡಿಕ್ಕಿ ಹೊಡೆಸಿ ಗುಂಡಿನ ದಾಳಿ

ತೀರಾ ಹತ್ತರಿದಿಂದಲೇ ಕಾರಿನ ಒಳಗಿದ್ದ ಅನಿಸೂರ್ ರೆಹಮಾನ್ ಹಾಗೂ ಪುತ್ರ ಅಬು ಸೂಫಿಯಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತಿನ ಗುಂಡಿನ ದಾಳಿಯಲ್ಲಿ ಅನಿಸೂರ್ ಹಾಗೂ ಅಬು ಇಬ್ಬರ ದೇಹಕ್ಕೆ ಗುಂಡುಗಳು ಹೊಕ್ಕಿವೆ. ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಹೆಚ್ಚುವರಿ ಪೊಲೀಸರ ನಿಯೋಜಿಸಲಾಗಿದೆ. ಅನಿಸೂರ್ ಬೆಂಬಲಿಗರು ಪ್ರತಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ಹೊರಹಾಕಿದ್ದರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜಕೀಯ ದ್ವೇಷದ ಅನುಮಾನ

ಕೊಲೆ ಹಿಂದಿನ ಕಾರಣ, ಕೊಲೆ ಮಾಡಿದ ಆರೋಪಿಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ ರಾಜಕೀಯ ದ್ವೇಷಕ್ಕೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತ ಕಾಂಗ್ರೆಸ್‌ನ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಅನಿಸೂರ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ದುರ್ಬಲಗೊಂಡಿರುವ ಕಾಂಗ್ರೆಸ್ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಲು ಪ್ರತಿ ದಿನ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್ ನಾಯಕರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.