ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್, ಪೆನ್‌ಡ್ರೈವ್, ಡೈರಿ ಪತ್ತೆಯಾಗಿದೆ. ಮಂಗಳವಾರ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಈ ಅಕ್ರಮ ಬಯಲಾಗಿದೆ.
ಸಿಸಿಬಿಯಿಂದ ಇಂಚಿಂಚೂ ತಪಾಸಣೆ
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು, ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸತತವಾಗಿ ನಡೆದ ಶೋಧ ಕಾರ್ಯದಲ್ಲಿ ಪ್ರತಿಯೊಂದು ಬ್ಯಾರಕ್ ಅನ್ನು ಇಂಚಿಂಚಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಬಟ್ಟೆಗಳ ನಡುವೆ ಅಡಗಿಸಿ ಇಟ್ಟುಕೊಂಡಿದ್ದ ಆಂಡ್ರಾಯ್ಡ್ ಫೋನ್, ಪೆನ್‌ಡ್ರೈವ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿದಂತೆ ಪ್ರಮುಖ ರೌಡಿಗಳು ಹಾಗೂ ವಿಐಪಿ ಕೈದಿಗಳ ಬ್ಯಾರಕ್‌ಗಳಲ್ಲೂ ಶೋಧ ಕಾರ್ಯ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಸೈಲೆಂಟ್ ಇದ್ದ ಪ್ರಜ್ವಲ್: ತನಿಖೆಗೆ ಮುಂದಾದ ಪೊಲೀಸರು
ಪ್ರಜ್ವಲ್ ರೇವಣ್ಣ ಅವರೊಂದಿಗೆ ಮತ್ತೊಬ್ಬ ಸಜಾಬಂಧಿ ಕೈದಿ ಪ್ರತಾಪ್ ರೈ ಎಂಬಾತ ಕೂಡ ಅದೇ ಬ್ಯಾರಕ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊಬೈಲ್ ಪತ್ತೆಯಾದಾಗ ಪ್ರಜ್ವಲ್ ರೇವಣ್ಣ ತಮಗೇನೂ ತಿಳಿಯದಂತೆ ತಟಸ್ಥರಾಗಿ ಕುಳಿತಿದ್ದರೆನ್ನಲಾಗಿದೆ. ಆದರೆ, ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ವಿಐಪಿ ಬ್ಯಾರಕ್‌ಗೆ ಆಂಡ್ರಾಯ್ಡ್ ಫೋನ್ ತಂದುಕೊಟ್ಟವರು ಯಾರು? ಎಷ್ಟು ದಿನಗಳಿಂದ ಇದನ್ನು ಬಳಕೆ ಮಾಡಲಾಗುತ್ತಿತ್ತು? ಎಂಬ ಪ್ರಶ್ನೆಗಳು ಮೂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಜ್ವಲ್ ಇದ್ದ ಜೈಲಿನಲ್ಲಿ ವಸ್ತುಗಳು ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಪ್ರಜ್ವಲ್ ಜೊತೆಗೆ ಬ್ಯಾರಕ್ ನಲ್ಲಿ ಪ್ರತಾಪ್ ರೈ ಎಂಬ ಕೈದಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು ಪ್ರಜ್ವಲ್ ಎ1 ಮಾಡಲಾಗಿದೆ.
ಮಂಗಳವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸಂಕೀರ್ಣದ ಮೇಲೆ ದಿಢೀರ್ ದಾಳಿ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ರೆಡ್ ಮಿ ಮೊಬೈಲ್ ಪತ್ತೆಯಾಗಿದೆ. ಅತ್ಯಂತ ಬಿಗಿ ಭದ್ರತೆ ಹೊಂದಿರುವ ಕೇಂದ್ರ ಕಾರಾಗೃಹದಲ್ಲಿ ಹೈಪ್ರೊಫೈಲ್ ಕೈದಿಯೊಬ್ಬರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆಯೇ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆ ಕೂಡ ಇದೇ ಜೈಲಿನಲ್ಲಿ ಪ್ರಭಾವಿ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ನಟ ದರ್ಶನ್ ಪ್ರಕರಣದಲ್ಲಿ ಕೂಡ ಇದೇ ರೀತಿ ಸೌಲಭ್ಯ ಪಡೆದ ಆರೋಪ ಕೇಳಿಬಂದಿತ್ತು.
ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ಸಲ್ಲಿಕೆ
ಜೈಲು ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮವಾಗಿ ಮೊಬೈಲ್ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿಸಿಬಿ ಕ್ರಮ ಕೈಗೊಂಡಿದೆ. ಜೈಲು ಮುಖ್ಯಸ್ಥರಾಗಿ ಡಿಜಿಪಿ ಅಲೋಕ್ ಕುಮಾರ್ ನಿಯೋಜನೆಗೊಂಡ ನಂತರ ಜೈಲಿನಲ್ಲಿ ಬಿಗಿ ಭದ್ರತೆ ವಹಿಸಲಾಗಿದ್ದು, ಈವರೆಗೆ 120ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆದಾಗ್ಯೂ, ಪ್ರಜ್ವಲ್ ಬ್ಯಾರಕ್‌ನಲ್ಲಿ ಫೋನ್ ಪತ್ತೆಯಾಗಿರುವುದು ಜೈಲು ಸಿಬ್ಬಂದಿಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸಿದೆ.


