ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ ಅದೇ ಕೇಕ್ ಸಂಭ್ರಮದ ಮನೆಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಹುಟ್ಟುಹಬ್ಬದ ಕೇಕ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ 11 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಮಹಾರಾಷ್ಟ್ರ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ ಅದೇ ಕೇಕ್ ಸಂಭ್ರಮದ ಮನೆಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಹುಟ್ಟುಹಬ್ಬದ ಕೇಕ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ 11 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಏನಿದು ಘಟನೆ?
ವರದಿಗಳ ಪ್ರಕಾರ.. ನಲಸೋಪಾರಾದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕೇಕ್ ಸೇವಿಸಿದ ತಕ್ಷಣ ಅತಿಥಿಗಳು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಏಳು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ಕೇಕ್ ತಿಂದ ಕೆಲವೇ ಕ್ಷಣಗಳಲ್ಲಿ ಇವರೆಲ್ಲರಿಗೂ ತೀವ್ರವಾದ ಹೊಟ್ಟೆ ನೋವು ಮತ್ತು ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲರ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೇಕ್ ಒಳಗೆ ಸತ್ತ ಹಲ್ಲಿ ಇದ್ದಿದ್ದೇ ಈ ವಿಷಾಹಾರ ಸೇವನೆಗೆ (Food Poisoning) ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆಹಾರ ಸುರಕ್ಷತೆಯ ಬಗ್ಗೆ ಕಳವಳ
ಈ ಘಟನೆಯು ಬೇಕರಿ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಾರ್ವಜನಿಕರಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸಾಲು ಸಾಲು ದೂರುಗಳು ಕೇಳಿಬರುತ್ತಿವೆ. ಥಾಣೆಯ ಕಲ್ಯಾಣ್ ಪ್ರದೇಶದಲ್ಲಿರುವ 'ಬ್ಲಿಂಕಿಟ್' (Blinkit) ಮಳಿಗೆಯ ಐಸ್‌ಕ್ರೀಮ್ ಫ್ರೀಜರ್‌ನಲ್ಲಿ ಇಲಿ ಓಡಾಡುತ್ತಿರುವುದು ಕಂಡುಬಂದಿತ್ತು.
ಮುಂಬೈನ ಮಲಾಡ್ ವೆಸ್ಟ್‌ನಲ್ಲಿರುವ ಬ್ಲಿಂಕಿಟ್ ಘಟಕದಲ್ಲಿ ಹಲವು ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಲ್ಲಿನ ಪರವಾನಗಿಯನ್ನು ಅಮಾನತುಗೊಳಿಸಿದೆ.ಒಟ್ಟಾರೆಯಾಗಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸ್ಥಳೀಯ ಬೇಕರಿಗಳಲ್ಲಿ ಆಹಾರದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.


