Wayanad Landslide: 'ಇಲ್ಲಿಂದ ಓಡಿಹೋಗ್ಬೇಕು ಅನಸ್ತಿದೆ..' ಪೋಸ್ಟ್‌ಮಾರ್ಟಂ ಮಾಡಿ ವೈದ್ಯರೇ ಸುಸ್ತು!
ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಅವಶೇಷಗಳ ಅಡಿಯಿಂದ ಬದುಕಿ ಬರುತ್ತಿರುವವರಿಗೆ ಚಿಕಿತ್ಸೆ ನೀಡಿ ಹಾಗೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿ ಮಾಡಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಸುಸ್ತಾಗಿ ಹೋಗಿದ್ದಾರೆ. ಇಲ್ಲಿಂದ ಓಡಿಹೋಗಬೇಕು ಎನ್ನಿಸಿತು ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ವಯನಾಡ್ (ಆ.2): ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಅವಶೇಷಗಳ ಅಡಿಯಿಂದ ಬದುಕಿ ಬರುತ್ತಿರುವವರಿಗೆ ಚಿಕಿತ್ಸೆ ನೀಡಿ ಹಾಗೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿ ಮಾಡಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಸುಸ್ತಾಗಿ ಹೋಗಿದ್ದಾರೆ. ಇಲ್ಲಿಂದ ಓಡಿಹೋಗಬೇಕು ಎನ್ನಿಸಿತು ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ತಮಗಾದ ಅನುಭವವನ್ನು ಹಂಚಿಕೊಂಡಿರುವ ಮರಣೋತ್ತರ ಪರೀಕ್ಷಾ ವಿಭಾಗದ ಸರ್ಕಾರಿ ವೈದ್ಯರೊಬ್ಬರು ‘ನನ್ನ ಇದುವರೆಗಿನ ವೃತ್ತಿ ಜೀವನದಲ್ಲಿ ಎಂದೂ ನೋಡಿರದ ರೀತಿಯಲ್ಲಿ ದೇಹಗಳು ಜಜ್ಜಿಹೋಗಿದ್ದವು. ನಾನು ಇದಕ್ಕೆ ತಯಾರಿರಲಿಲ್ಲ. ಬದುಕುಳಿದವರಿಗೆ ಚಿಕಿತ್ಸೆ ಕೊಡುವ ಆಸ್ಪತ್ರೆಗೆ ಓಡಿಹೋಗಬೇಕೆನಿಸಿತು, ಆದರೆ ಅದಕ್ಕೆ ಅವಕಾಶವಿರದೆ, 18 ಮರಣೋತ್ತರ ಪರೀಕ್ಷೆಗಳನ್ನು ಮಾಡಿದೆ’ ಎಂದು ಕಣ್ಣೀರಿಟ್ಟಿದ್ದಾರೆ.
ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ‘ಮುಂಜಾನೆ 7ರ ತನಕ 256 ಶವಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ ಕೆಲವು ಇಡೀ ದೇಹಗಳು ಹಾಗೂ ದೇಹದ ಕೆಲ ಭಾಗಗಳು ಸೇರಿವೆ. ಅವುಗಳಲ್ಲಿ 154 ದೇಹಗಳನ್ನು ಜಿಲ್ಲಾಡಳಿತಕ್ಕೆ ಕೊಡಲಾಗಿದೆ. ಬುಧವಾರದ ರಾತ್ರಿಯೊಂದರಲ್ಲೇ 100ಕ್ಕೂ ಅಧಿಕ ಶವಗಳನ್ನು ಪರೀಕ್ಷಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮನೆಗೆ ಹೋಗದೆ ದುಡಿಯುತ್ತಿದ್ದಾರೆ’ ಎಂದು ಹೃದಯವಿದ್ರಾವಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!
ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ವೈದ್ಯರು, ನರ್ಸ್‌ಗಳು ಮತ್ತು ಇತರ ಕೆಲಸಗಾರರ ತಂಡಗಳನ್ನು ಕಳುಹಿಸುವ ಮೂಲಕ ಖಾಸಗಿ ಆಸ್ಪತ್ರೆಗಳೂ ಆರೊಗ್ಯ ಇಲಾಖೆಯೊಂದಿಗೆ ಕೈಜೋಡಿಸಿವೆ ಎಂದು ಸಚಿವೆ ಹೇಳಿದ್ದಾರೆ.
ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿರುವ ಕಾರಣ ಇಂತಹ ಪ್ರಕರಣಗಳು ಇನ್ನೂ ಅಧಿಕವಾಗುವ ಸಾಧ್ಯತೆಯಿದ್ದು, ಘಟನೆ ನಡೆದ ಸ್ಥಳದಿಂದ ದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರೆದಿದೆ.