Asianet Suvarna News Asianet Suvarna News

ನೀರು ಕುಡಿಯಲು ಬಂದ ಪುಟ್ಟ ಹುಲಿಮರಿಗಳಿಗೆ ಕಲ್ಲೆಸೆದು ಗಾಯಗೊಳಿಸಿದ ಜನ : ವಿಡಿಯೋ ವೈರಲ್

  • ಹುಲಿಮರಿಗಳಿಗೆ ಕಲ್ಲೆಸೆದು ಗಾಯಗೊಳಿಸಿದ ಗ್ರಾಮಸ್ಥರು
  • ಜೀವ ಉಳಿಸಿಕೊಳ್ಳಲು ಕುಂಟುತ್ತಾ ಓಡಿದ ಹುಲಿಮರಿಗಳು
  • ಜನರ ಕ್ರೌರ್ಯದ ದೃಶ್ಯ ಕ್ಯಾಮರಾದಲ್ಲಿ ಸೆರೆ
Villagers Pelt Stones at Little Tiger Cubs in Madhya Pradesh akb
Author
Bangalore, First Published May 20, 2022, 3:56 PM IST

ಭೋಪಾಲ್‌: ಮಧ್ಯಪ್ರದೇಶದ(Madhya Pradesh) ಸಿನೋಯ್ (Seoni) ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಜನರಿರುವ ಪ್ರದೇಶಕ್ಕೆ ಬಂದ ಅಂದಾಜು ಒಂದು ವರ್ಷ ಪ್ರಾಯದ ಎರಡು ಪುಟ್ಟ ಹುಲಿಮರಿಗಳನ್ನು ಗ್ರಾಮಸ್ಥರು ಕಲ್ಲೆಸೆದು ಗಾಯಗೊಳಿಸಿದ ಘಟನೆ ನಡೆದಿದೆ. ಕಲ್ಲೆಸೆತದಿಂದ ಗಾಯಗೊಂಡ ಹುಲಿಮರಿಗಳು ಕುಂಟುತ್ತಾ ಜೀವ ಉಳಿಸಿಕೊಳ್ಳಲು ಕಷ್ಟಪಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಬೆಲಗೊನ್‌ ಗ್ರಾಮದಲ್ಲಿರುವ (Baelgaon village) ಪಿಪಲಟೈ ಕೆರೆಯ (Pipaltai) ಬಳಿ ಎರಡು ಹುಲಿ ಮರಿಗಳು ತಮ್ಮ ಬಾಯಾರಿಕೆ ತೀರಿಸಿಕೊಳ್ಳಲು ಬಂದಿದ್ದವು. ಇವುಗಳನ್ನು ನೋಡಿದ ಗ್ರಾಮಸ್ಥರು ಅವುಗಳ ಮೇಲೆ ಕಲ್ಲೆಸೆದು ದೌರ್ಜನ್ಯವೆಸಗಲು ಶುರು ಮಾಡಿದ್ದಾರೆ. ಕಲ್ಲೆಸೆತದಿಂದ ಒಂದು ಹುಲಿ ಮರಿ ಗಾಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲು ಕುಂಟುತ್ತಾ ಸಾಗುತ್ತಿರುವುದು ಕಂಡು ಬರುತ್ತಿದೆ. ಆದರೂ ಗ್ರಾಮಸ್ಥರ ಕ್ರೌರ್ಯ ಮಾತ್ರ ತಣ್ಣಗಾಗಿಲ್ಲ ಅವರು ಕಲ್ಲೆಸೆಯುತ್ತಲೇ ಇದ್ದರು. ಅಲ್ಲದೇ ಕೆಲವರು ಅವುಗಳನ್ನು ಹಿಡಿಯಿರಿ ಹಿಡಿಯಿರಿ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಅಲ್ಲದೇ ಕೆಲ ಜನರು ಕಲ್ಲೆಸೆಯದಂತೆ ಹೇಳುವುದು ಕೂಡ ವಿಡಿಯೋದಲ್ಲಿ ಕೇಳಿಸುತ್ತಿದೆ. 

ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್‌ (Eco Foundation) ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ನಾವು ವನ್ಯಜೀವಿ ದಿನವನ್ನು ಆಚರಿಸುತ್ತೇವೆ. ಪರಿಸರ ದಿನವನ್ನು ಆಚರಿಸುತ್ತೇವೆ. ರಾಜಕಾರಣಿಗಳು ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಆದರೆ ನಾವು ಎಲ್ಲಕ್ಕಿಂತ ಮೊದಲು ಮಾನವರಾಗಿರಲು ಕಲಿಯಬೇಕು. ಸಣ್ಣ ಮರಿಗಳ ಮೇಲೆ ಕಲ್ಲೆಸೆಯುವುದು ಅವುಗಳನ್ನು ಗಾಯಗೊಳಿಸುವುದು ಕೇವಲ ಅಮಾನವೀಯ ವರ್ತನೆ ಮಾತ್ರವಲ್ಲ. ಅದು ಕ್ರೌರ್ಯವೂ ಹೌದು ಎಂದು  ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕ್ರೌರ್ಯವನ್ನು ಅಮಾನವೀಯ ಕೃತ್ಯವನ್ನು ಅನೇಕರು ಖಂಡಿಸಿದ್ದಾರೆ. ಅಲ್ಲದೇ ಕಲ್ಲೆಸೆದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು ನಟಿ ರವೀನಾ ಟಂಡನ್ (Actor Raveena Tandon) ಕೂಡ ಶೇರ್ ಮಾಡಿದ್ದು, ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. 

ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್‌

ಪಿಟಿಐ ವರದಿ ಪ್ರಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಈ ಎರಡು ಹುಲಿ ಮರಿಗಳನ್ನು ರಕ್ಷಿಸಿದ್ದಾರೆ. ಇವುಗಳು  14 ರಿಂದ 15 ತಿಂಗಳು ಪ್ರಾಯದ ಹುಲಿಮರಿಗಳಾಗಿದ್ದು, ಬಹುಶಃ ನೀರು ಕುಡಿಯುವ ಸಲುವಾಗಿ ಗ್ರಾಮದ ಪ್ರದೇಶಕ್ಕೆ ಬಂದಿರಬೇಕು. ಆದರೆ ಗ್ರಾಮಸ್ಥರು ಅವುಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಸುತ್ತುವರೆದಿದ್ದರು. ಈ ವೇಳೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ತಲುಪಿದ್ದರು. ನಂತರ ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶದ (Pench Tiger Reserve) ರಕ್ಷಣಾ ತಂಡವೊಂದು ಅಲ್ಲಿಗೆ ಆಗಮಿಸಿದೆ.

ತಾಯಿಯೊಂದಿಗೆ ಹುಲಿಮರಿಗಳ ಮುದ್ದಾದ ಆಟ : ವಿಡಿಯೋ ವೈರಲ್

ನಂತರ ಒಂದು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಈ ಹುಲಿಮರಿಗಳನ್ನು ಸೆರೆ ಹಿಡಿದು ಕನ್ಹಾದ ರಕ್ಷಣಾ ಕೇಂದ್ರಕ್ಕೆ ಸಾಗಿಸಲಾಯಿತು ಎಂದು ಸಿನೋಯ್ ಪ್ರದೇಶದ ಮುಖ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್ ಉದ್ದೆ (SS Udde) ಅವರು ಹೇಳಿದರು ಎಂದು ಪಿಟಿಐ ವರದಿ ಮಾಡಿದೆ. ಆದರೆ ಈ ಹುಲಿಮರಿಗಳು ಗಾಯಗೊಂಡಿವೆ ಎಂಬುದನ್ನು ಅವರು ನಿರಾಕರಿಸಿದರು. ಅಲ್ಲದೇ ಆ ಮರಿಗಳು ಕನ್ಹಾದ ರಕ್ಷಣಾ ಕೇಂದ್ರದಲ್ಲಿ (Kanha rescue centre) ವೈದ್ಯರ ಆರೈಕೆಯಲ್ಲಿವೆ ಎಂದು ತಿಳಿಸಿದರು ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios