ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತನ್ನ ಚೊಚ್ಚಲ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಈ 'ಪರಿವರ್ತನೆಯ ಜನಾದೇಶ'ಕ್ಕಾಗಿ ವಿಜಯ್ಜ ನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚೆನ್ನೈ (ಮೇ.5): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ತೋರಿದ ಭರ್ಜರಿ ಪ್ರದರ್ಶನಕ್ಕಾಗಿ ವಿಜಯ್ ಅವರು ಮಂಗಳವಾರ ತಮಿಳುನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ಜನರು ನೀಡಿರುವುದು "ಐತಿಹಾಸಿಕ ಮತ್ತು ಪರಿವರ್ತನೆಯ ಜನಾದೇಶ" ಎಂದು ಅವರು ಬಣ್ಣಿಸಿದ್ದಾರೆ. 2024 ರಲ್ಲಿ ಸ್ಥಾಪನೆಯಾದ ತಮಿಳಗ ವೆಟ್ರಿ ಕಳಗಂ (TVK), ತನ್ನ ಚೊಚ್ಚಲ ಚುನಾವಣಾ ಅಖಾಡದಲ್ಲೇ ಅದ್ಭುತ ಪ್ರದರ್ಶನ ನೀಡಿದೆ. ಒಟ್ಟು 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದೆ. ಸ್ವತಃ ವಿಜಯ್ ಅವರು ಸ್ಪರ್ಧಿಸಿದ್ದ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.
ಈ ಚುನಾವಣಾ ಫಲಿತಾಂಶವನ್ನು ಭಾರತೀಯ ರಾಜಕೀಯವನ್ನೇ ನಡುಗಿಸಿದ "ಪವಾಡ" ಎಂದು ಕರೆದಿರುವ ವಿಜಯ್, ಯುವ ಮತದಾರರು ಈ ಫಲಿತಾಂಶವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಪಕ್ಷ ಆರಂಭವಾದಾಗಿನಿಂದಲೂ ನಾವು ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸಿದ್ದೇವೆ. ಆದರೂ ಜನರನ್ನೇ ನಂಬಿ ಟಿವಿಕೆ ದೃಢವಾಗಿ ನಿಂತಿತ್ತು. ತಟಸ್ಥತೆ ಮತ್ತು ವಿಮರ್ಶೆಯ ನೆಪದಲ್ಲಿ ನಮ್ಮ ಮೇಲೆ ಅವಮಾನ ಮತ್ತು ನಿಂದನೆಗಳನ್ನು ಮಾಡಲಾಯಿತು. ಇಷ್ಟಾಗಿಯೂ ತಮಿಳುನಾಡಿನ ಜನರು ಅಚಲವಾದ ಪ್ರೀತಿಯಿಂದ ನಮ್ಮ ಬೆನ್ನಿಗೆ ನಿಂತರು' ಎಂದಿದ್ದಾರೆ.
ಈ ಜನಾದೇಶವು ಮತದಾರರೊಂದಿಗೆ ನಮ್ಮ ಪಕ್ಷಕ್ಕಿರುವ ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ಇದು ಹಣದ ಪ್ರಭಾವದ ರಾಜಕಾರಣದ ಅಂತ್ಯದ ಮುನ್ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ. "ರಾಜ್ಯದ ರಾಜಕೀಯ ಸಂಸ್ಕೃತಿಯ ಮೇಲೆ ದೀರ್ಘಕಾಲದಿಂದ ಪ್ರಭಾವ ಬೀರಿದ್ದ 'ಹಣಬಲ'ವನ್ನು ಜನರು ಈ ತೀರ್ಪಿನ ಮೂಲಕ ತಿರಸ್ಕರಿಸಿದ್ದಾರೆ" ಎಂದು ವಿಜಯ್ ವಿಶ್ಲೇಷಿಸಿದ್ದಾರೆ.
ಎಲ್ಲರಿಗೂ ಟಿವಿಕೆಯಿಂದ ಕೃತಜ್ಞತೆ
"ಅಸಾಧ್ಯ" ಎನ್ನುವುದನ್ನು "ಸಾಧ್ಯ"ವಾಗಿಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಆನ್‌ಲೈನ್ ಮೂಲಕ ಪ್ರಚಾರ ನಡೆಸಿದ ಅಭಿಮಾನಿಗಳಿಗೆ ಟಿವಿ ಕೆ ಮುಖ್ಯಸ್ಥರು ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಮತ ನೀಡದವರ ಬಗ್ಗೆಯೂ ಗೌರವ ವ್ಯಕ್ತಪಡಿಸಿರುವ ಅವರು, "ಮುಂದಿನ ದಿನಗಳಲ್ಲಿ ಅವರೂ ನಮಗೆ ಬೆಂಬಲ ನೀಡುತ್ತಾರೆ ಎಂಬ ಭರವಸೆ ನನಗಿದೆ" ಎಂದಿದ್ದಾರೆ.


