ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ದೀಪ ಹಚ್ಚುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು (ನ.27): ಸಿನಿಮಾ ಸ್ಟೈಲ್‌ನಲ್ಲಿ ಅಧಿಕಾರ ಮಾಡಲು ಹೋಗಿ ಮುಖ್ಯಮಂತ್ರಿ ಆದ ಬಳಿಕ ಸಿ. ಜೋಸೆಫ್ ವಿಜಯ್ (C Joseph Vijay) ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಚಾಟಿ ಏಟು ಬಿದ್ದಿದೆ. ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ದೀಪ ಹಚ್ಚುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಸರ್ವೋಚ್ಚ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, 'ಮೊಸಳೆ ಕಣ್ಣೀರು ಹಾಕ್ಬೇಡಿ' ಎಂದು ಸರ್ಕಾರಕ್ಕೆ ಕಟುವಾಗಿ ಎಚ್ಚರಿಸಿದೆ.

ಶುಕ್ರವಾರ ನಡೆದ ಪ್ರಕರಣದ ವಿಚಾರಣೆಯ ವೇಳೆ ಸರ್ಕಾರಿ ಅಧಿಕಾರಿಗಳ ನಡವಳಿಕೆಯು ನ್ಯಾಯಾಲಯದ ಆದೇಶಕ್ಕೆ ಎಸಗಿದ ಘೋರ ಅಗೌರವ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೇವಲ ತರಾಟೆಗೆ ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಇಡೀ ತಿರುಪ್ಪರಂಕುಂಡ್ರಂ ಬೆಟ್ಟದ ಭದ್ರತೆಯನ್ನು ತಕ್ಷಣವೇ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ಹಸ್ತಾಂತರಿಸುವಂತೆ ಆದೇಶಿಸಿದೆ.

ಇದರೊಂದಿಗೆ, ನಾಳೆ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಕಂಬ ಅಥವಾ 'ದೀಪತೂನ್‌' (Deepathun) ಮೇಲೆ ದೀಪ ಬೆಳಗಲು ಅಗತ್ಯ ವ್ಯವಸ್ಥೆಗಳನ್ನು ಖಚಿತಪಡಿಸುವಂತೆ ಆಡಳಿತಕ್ಕೆ ನಿರ್ದೇಶನ ನೀಡಲಾಗಿದ್ದು, ಅರುಳ್ಮಿಗು ದೇವಸ್ಥಾನದ (Arulmigu temple) ಧರ್ಮದರ್ಶಿ ಮಂಡಳಿಯನ್ನೂ (Board of trustees) ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಕಾರ್ತಿಕ ದೀಪಂ ವೇಳೆ ನಡೆದಿದ್ದೇನು? ವಿವಾದ ಹುಟ್ಟಿಕೊಂಡ ಬಗೆ:

ನವೆಂಬರ್ 24ರಂದು ನಡೆದ ಕಾರ್ತಿಕ ದೀಪಂ (Karthigai Deepam) ಹಬ್ಬದ ಸಂದರ್ಭದಲ್ಲಿ ಈ ಘಟನೆ ಆರಂಭವಾಯಿತು. ಇದಕ್ಕೂ ಮುನ್ನ ನವೆಂಬರ್ 20ರಂದು, ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ 'ದೀಪತೂನ್‌' ಬಳಿ ಕಾರ್ತಿಕ ದೀಪ ಬೆಳಗಬೇಕು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ, ನವೆಂಬರ್ 24ರಂದು ಸಂಜೆ 6 ಗಂಟೆಯ ವೇಳೆಗೆ ಬೆಟ್ಟದ ತಪ್ಪಲಿನಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪದ 'ದೀಪ ಮಂಟಪಂ'ನಲ್ಲಿ (Deep Mandapam) ಸಾಂಪ್ರದಾಯಿಕವಾಗಿ ದೀಪ ಬೆಳಗಲಾಗಿದ್ದರೂ, ಬೆಟ್ಟದ ತುದಿಯಲ್ಲಿ ದೀಪ ಬೆಳಗಲು ಅನುಮತಿ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಟಿವಿಕೆ (TVK) ಸರ್ಕಾರದ ಈ ಕ್ರಮದಿಂದ ಬೆಟ್ಟದ ತಪ್ಪಲಿನಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಅಂತಿಮವಾಗಿ ತಮಿಳುನಾಡು ಸರ್ಕಾರದ ಅಧಿಕಾರಿಗಳು ಮತ್ತು ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ (Arulmigu Subramanian Swamy temple) ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ (Contempt of court) ಪ್ರಕರಣ ದಾಖಲಿಸಲಾಯಿತು.

ಸಂವಿಧಾನಾತ್ಮಕ ಅರಾಜಕತೆ ಉಂಟಾಗುತ್ತದೆ: ಸುಪ್ರೀಂ ಕೋರ್ಟ್ ಎಚ್ಚರಿಕೆ

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಆಡಳಿತ ಯಂತ್ರದ ಪಾತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದ್ವಿಸದಸ್ಯ ಪೀಠವು, ಇಂತಹ ಪರಿಸ್ಥಿತಿಯನ್ನು ಕಠಿಣ ಕೈಗಳಿಂದ ಹತ್ತಿಕ್ಕುವ ಸಮಯ ಬಂದಿದೆ. ಇಲ್ಲದಿದ್ದರೆ ದೇಶದಲ್ಲಿ ಸಂವಿಧಾನಾತ್ಮಕ ಅರಾಜಕತೆ (Constitutional anarchy) ತಲೆದೋರುತ್ತದೆ ಎಂದು ಕಟು ಮಾತುಗಳಲ್ಲಿ ಹೇಳಿತು. ಸಂವಿಧಾನದ 144ನೇ ವಿಧಿಯನ್ನು (Article 144) ನೆನಪಿಸಿದ ನ್ಯಾಯಾಲಯವು, ದೇಶದ ಎಲ್ಲಾ ನಾಗರಿಕ ಮತ್ತು ನ್ಯಾಯಾಂಗ ಪ್ರಾಧಿಕಾರಗಳು ಸುಪ್ರೀಂ ಕೋರ್ಟ್ ಆದೇಶಗಳನ್ನು ಜಾರಿಗೊಳಿಸಲು ಬದ್ಧವಾಗಿವೆ ಹಾಗೂ ಈ ಸಾಂವಿಧಾನಿಕ ಬಾಧ್ಯತೆಯನ್ನು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು ಎಂದು ತಿಳಿಸಿತು.

ಆಡಳಿತದ ಅಧಿಕಾರಿಗಳು ರಾಜಕೀಯ ನಾಯಕರ ಇಂಗಿತದಂತೆ (Behest of political leaders) ಕೆಲಸ ಮಾಡಿದ್ದಾರೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಪ್ರಕರಣದಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿ (Chief Secretary) ಅವರು ಅಫಿಡವಿಟ್ ಸಲ್ಲಿಸುವಂತೆ ಹಾಗೂ ಡಿ.15 ರಂದು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಮೊಸಳೆ ಕಣ್ಣೀರು ಎಂದ ನ್ಯಾಯಪೀಠ: ಸಿಎಂ ವಿಜಯ್ ಪಾತ್ರ ತನಿಖೆಗೆ ಅರ್ಜಿದಾರರ ಆಗ್ರಹ

ವಿಚಾರಣೆಯ ವೇಳೆ ಮದುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ (Nishant Krishna) ಅವರ ಪಾತ್ರದ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಹಿಂದೆ ಜಿಲ್ಲಾಧಿಕಾರಿಯವರು ಕ್ಷಮೆ ಯಾಚಿಸಿ, ನ್ಯಾಯಾಲಯದ ಆದೇಶ ಜಾರಿಗೊಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರೂ ದೇವಸ್ಥಾನದ ಅಧಿಕಾರಿಗಳು ಬೆಟ್ಟದ ತುದಿಯಲ್ಲಿ ದೀಪ ಬೆಳಗಲು ಯಾರಿಗೂ ಅವಕಾಶ ನೀಡಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಅವರ ಆರಂಭಿಕ ವರದಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಜಿಲ್ಲಾಧಿಕಾರಿಯವರು ಕೇವಲ ಮೊಸಳೆ ಕಣ್ಣೀರು (Crocodile tears) ಸುರಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡರು.

ಮತ್ತೊಂದೆಡೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ಅವರೂ ಸಹ ನ್ಯಾಯಾಲಯದ ಆದೇಶ ಪಾಲಿಸದಿರುವುದನ್ನು ಆಡಳಿತಾತ್ಮಕ ದರ್ಪ ಮತ್ತು ಸಂಪೂರ್ಣ ಉಲ್ಲಂಘನೆ ಎಂದು ಬಣ್ಣಿಸಿದರು. ಇದರ ನಡುವೆ, ಪ್ರಮುಖ ಅರ್ಜಿದಾರರಾದ ರಾಮ ರವಿಕುಮಾರ್ (Rama Ravikumar) ಅವರು ಸಲ್ಲಿಸಿದ ಅರ್ಜಿಯಲ್ಲಿ, ಈ ಸಂಪೂರ್ಣ ವಿಷಯವನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಥವಾ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆಯೇ ಹಾಗೂ ಅವರಿಂದ ಯಾವುದೇ ಸೂಚನೆ ನೀಡಲಾಗಿತ್ತೇ ಎಂಬುದನ್ನು ಸಾರ್ವಜನಿಕಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲು ಕೋರಲಾಗಿದೆ.