ಮದುರೈ ಸಮೀಪದ ತಿರುಪ್ಪರನ್ಕುಂದ್ರಂ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವನ್ನು ತಮಿಳುನಾಡಿನ ವಿಜಯ್ ಸರ್ಕಾರ ಧಿಕ್ಕರಿಸಿದೆ. ಸ್ತಂಭದ ಬದಲಿಗೆ ಮಂಟಪದಲ್ಲಿ ದೀಪ ಬೆಳಗಲು ಅವಕಾಶ ನೀಡಿದ್ದು, ಇದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮದುರೈ/ತಿರುವಣ್ಣಾಮಲೈ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಮದುರೈ ಜಿಲ್ಲೆಯಲ್ಲಿರುವ ತಿರುಪ್ಪರನ್ಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗುವ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಧಿಕ್ಕರಿಸಿದೆ.
ಸುಪ್ರೀಂಕೋರ್ಟ್ ಆದೇಶ ಮತ್ತು ಆ ಆದೇಶ ಪಾಲಿಸುವಂತೆ ಮಂಗಳವಾರ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನೂ ಬದಿಗೆ ತಳ್ಳಿರುವ ಸರ್ಕಾರ, ಮೂಲ ದೀಪಸ್ತಂಭದ ಬದಲಿಗೆ, ಬೆಟ್ಟದ ಮೇಲಿರುವ ಮಂಟಪದಲ್ಲಿ ಮಾತ್ರ ದೀಪ ಬೆಳಗಲು ಅನುವು ಮಾಡಿಕೊಟ್ಟಿದೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ, ಬೆಟ್ಟ ಮತ್ತು ದೇಗುಲದ ಬಳಿ ಪ್ರತಿಭಟನೆ ನಡೆಸಿವೆ.
ಭಾರೀ ಭದ್ರತೆ:
ಕಾರ್ತಿಕ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಸ್ತಂಭದ ಮೇಲೆ ದೀಪ ಹಚ್ಚುವ ಸಂಬಂಧ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಭಾರೀ ಪ್ರಮಾಣದಲ್ಲಿ ದೇಗುಲ ಪ್ರವೇಶಿಸಿ ದೀಪಸ್ತಂಭದಲ್ಲಿ ದೀಪ ಹಚ್ಚಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದ ಸರ್ಕಾರ, 5000ಕ್ಕೂ ಹೆಚ್ಚು ಪೊಲೀಸರನ್ನು ದೇಗುಲದ ಬಳಿ ಭದ್ರತೆಗೆ ನಿಯೋಜಿಸಿತ್ತು.
ಹೈ, ಸುಪ್ರೀಂ ಆದೇಶ ನಿರ್ಲಕ್ಷ್ಯ:
ಈ ನಡುವೆ ದೀಪ ಹಚ್ಚುವ ಸಂಬಂಧ ಸುಪ್ರೀಂ ಆದೇಶ ಜಾರಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಮಧ್ಯಾಹ್ನ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠವು, ‘ತಮಿಳುನಾಡು ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿಯ ವಿಚಾರಣೆ ಬಾಕಿ ಇದೆ, ಆದೇಶವನ್ನು ಪಾಲಿಸದೇ ಇರಲು ಇದನ್ನು ನೆಪ ಮಾಡಕೂಡದು. ಹೀಗಾಗಿ ದೀಪ ಹಚ್ಚುವ ಸಂಬಂಧ ಸುಪ್ರೀಂ ಕೋರ್ಟ್ನ ಆದೇಶ ಪಾಲಿಸಬೇಕು’ ಎಂದು ಮದುರೈ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಇತರೆ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶಿಸಿತ್ತು. ಅಲ್ಲದೆ, ನಿಷೇಧಾಜ್ಞೆ ಅಡಿ ಪೊಲೀಸರು ವಶಕ್ಕೆ ಪಡೆದಿದ್ದ ಎಲ್ಲರನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇದರ ಹೊರತಾಗಿಯೂ, ದರ್ಗಾದ ಬಳಿ ಇರುವ ಕಲ್ಲಿನ ಸ್ತಂಭದಲ್ಲಿ ದೀಪ ಹಚ್ಚಲು ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ಅದರ ಬದಲು ಮೇಲಿನ ಉಚ್ಚಿಪಿಲ್ಲಯಾರ್ ಮಂಟಪದಲ್ಲಿನ ದೊಡ್ಡ ಕುಂಡದಲ್ಲಿ 3500 ಕೆಜಿ ತುಪ್ಪ ಹಾಕಿ ದೀಪ ಬೆಳಗಲಾಗಿದೆ.
ಏನಿದು ವಿವಾದ?:
ತಿರುಪ್ಪರನ್ಕುಂದ್ರಂ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚಲು ಅನುಮತಿ ಕೋರಿ ರಾಮ ರವಿಕುಮಾರ್ ಎಂಬ ಭಕ್ತರು 2025ರಲ್ಲಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಸ್ತಂಭದ ಬಳಿಯೇ ದರ್ಗಾ ಇರುವ ಕಾರಣ, ಅಲ್ಲಿ ದೀಪೋತ್ಸವ ನಡೆಸುವುದು ಧಾರ್ಮಿಕ ಸಾಮರಸ್ಯ ಕದಡುವ ಸಾಧ್ಯತೆ ಇದೆ ಎಂಬ ವಾದವನ್ನು ತಮಿಳುನಾಡಿನ ಅಂದಿನ ಡಿಎಂಕೆ ಸರ್ಕಾರ ಮುಂದಿಟ್ಟಿತ್ತು. ಆದರೆ ಈ ವಾದ ಒಪ್ಪದ ನ್ಯಾ. ಜಿ.ಆರ್. ಸ್ವಾಮಿನಾಥನ್ ಅವರ ಪೀಠ ಸಾಂಪ್ರದಾಯಿಕ ಸ್ಥಳದ ಜತೆಗೆ ಸ್ತಂಭದಲ್ಲೂ ದೀಪ ಹಚ್ಚುವಂತೆ ಕಳೆದ ಡಿ.1ರಂದು ಆದೇಶಿಸಿತ್ತು. ಆದರೂ ದೇವಸ್ಥಾನದ ಆಡಳಿತ ಮಂಡಳಿ ಹೈಕೋರ್ಟ್ ಆದೇಶ ಪಾಲಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಯಿತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನ.24ರಂದು ಮಾತ್ರ ದೀಪ ಹಚ್ಚಲು ಅನುಮತಿ ನೀಡಿತ್ತು. ಇದನ್ನು ಮತ್ತೆ ವಿಜಯ್ ಅವರ ಸರ್ಕಾರ ಪ್ರಶ್ನಿಸಿತ್ತು. ಆದರೆ ಈ ಅರ್ಜಿ ವಿಚಾರಣೆ ನಡೆಸಬೇಕಿದ್ದ ಪೀಠ, ಸೋಮವಾರ ಯಾವುದೇ ಕಲಾಪ ನಡೆಸಿರಲಿಲ್ಲ. ಜೊತೆಗೆ ಮಂಗಳವಾರ ಕೋರ್ಟ್ಗೆ ರಜೆ ಇತ್ತು. ಹೀಗಾಗಿ ಮೇಲ್ಮನವಿ ಬಾಕಿ ಉಳಿದಿತ್ತು. ಇದನ್ನೇ ಬಳಸಿಕೊಂಡು ದೀಪಸ್ತಂಬದ ಮೇಲೆ ದೀಪ ಹಚ್ಚಲು ವಿಜಯ್ ಸರ್ಕಾರ ಅನುಮತಿ ನಿರಾಕರಿಸಿದೆ.
ತಮಿಳುನಾಡು ಸರ್ಕಾರದ ಅಧೀನದಲ್ಲಿರುವ ಮದುರೈ ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ ಕಲ್ಲಿನ ಸ್ತಂಭದಲ್ಲಿ ದೀಪ ಬೆಳಗಿಸುವ ಬದಲು ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ದೀಪ ಬೆಳಗಿಸಿದ್ದಾರೆ. ವಿಜಯ್ ಅವರ ಟಿವಿಕೆ ಸರ್ಕಾರವು ಇದರಿಂದಾಗಿ ನಾಗರಿಕತೆ ಹಾಗೂ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವರು ತಾವು ನಿಭಾಯಿಸಬಲ್ಲದ್ದಕ್ಕಿಂತ ದೊಡ್ಡ ವಿವಾದಕ್ಕೆ ಕೈ ಹಾಕಿದ್ದಾರೆ.
- ಬಿ.ಎಲ್. ಸಂತೋಷ್, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ
















