ಸಭೆ ಬಳಿಕ ಉಪ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಸಾಧ್ಯತೆ ಎನ್‌ಡಿಎ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಯಾರು? ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ
ನವದೆಹಲಿ(ಜು.16): ಎನ್‌ಡಿಎ ಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಇಂದು(ಜು.16) ಬಿಜೆಪಿ ಸಂಸದೀಯ ಮಂಡಳಿ ಸಭೆ ಕರೆಯಲಾಗಿದೆ. ಸಂಜೆ 5.30ಕ್ಕೆ ಸಭೆ ಕರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈಗಾಗಲೇ ಹಲವು ಹೆಸರುಗಳು ಮುನ್ನಲೆಗೆ ಬಂದಿದ್ದು, ಮಹತ್ವದ ಚರ್ಚೆ ಬಳಿಕ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆ ಇದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನಾಮ ಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನಾಂಕವಾಗಿದೆ. ಹೀಗಾಗಿ ಇಂದೇ ಉಪ ರಾಷ್ಟ್ರಪತಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ. ಸದ್ಯ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡು ಅಧಿಕಾರವದಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ಆಗಸ್ಟ್ 11 ರಂದು ನೂತನ ಉಪ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತ ವಿಪಕ್ಷಗಳು ಕೂಡ ಶೀಘ್ರದಲ್ಲೇ ಉಪ ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಘೋಷಿಸಲಿದೆ.
ಚುನಾವಣಾ ಆಯೋಗ ಜೂನ್ 29ಕ್ಕೆ ಉಪರಾಷ್ಟ್ರಪತಿ ಚುನಾವಣಾ ದಿನಾಂಕ ಘೋಷಿಸಿದೆ. ಇದರ ಬೆನ್ನಲ್ಲೇ ಎನ್‌ಡಿಎ, ಯುಪಿಎ ಕೂಟದಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಸಮುದಾಯದ ನಾಯಕಿ ದ್ರೌಪದಿ ಮರ್ಮು ಹೆಸರನ್ನು ನಾಮಪತ್ರ ಸಲ್ಲಿಸಿದ್ದಾರೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ದ್ರೌಪದಿ ಮುರ್ಮು ವಿರುದ್ಧ ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದಾರೆ.
ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ Presidential Election ಮತಪೆಟ್ಟಿಗೆ
ಉಪ ರಾಷ್ಟ್ರಪತಿ ಚುನಾವಣೆ ಆಗಸ್ಟ್ 6 ರಂದು ನಡೆಯಲಿದೆ. ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. ರಾಜ್ಯ ಸಭಾ ಹಾಗೂ ಲೋಕಸಭಾ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಬಿಜೆಪಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚುವಿಕೆಯಲ್ಲಿ ಪ್ರತಿ ಬಾರಿ ಅಚ್ಚರಿ ನೀಡಿದೆ. ಇದು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲೂ ಸಾಬೀತಾಗಿದೆ. ಇದೀಗ ಉಪ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲೂ ಇದೇ ರೀತಿ ಅಚ್ಚರಿ ನೀಡುವ ಸಾಧ್ಯತೆ ಇದೆ. ಸದ್ಯ ಚಾಲ್ತಿಯಲ್ಲಿ ಹೆಸರು ಬಿಟ್ಟು, ಯಾರೂ ಊಹಿಸಿದ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆ ಹೆಚ್ಚು.
ಬಿಜೆಪಿ ಹಿರಿಯ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ, ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಹಲವರ ಹೆಸರು ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬರುತ್ತಿರುವ ಮುಂಚೂಣಿ ಹೆಸರುಗಳಾಗಿವೆ.
ರಾಷ್ಟ್ರಪತಿ ಅಭ್ಯರ್ಥಿ: ಯಾರು ಈ ದ್ರೌಪದಿ ಮುರ್ಮು..? ಇವರೇ ಮೋದಿ ಆಯ್ಕೆ ಯಾಕೆ.?
ಮುರ್ಮುಗೆ ಜೆಡಿಎಸ್ ಬೆಂಬಲ
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ದ್ರೌಪದಿ ಮುರ್ಮು ಅವರಿಗೆ ಪಕ್ಷ ರಾಜಕಾರಣವನ್ನು ಮೀರಿ ಬೆಂಬಲ ನೀಡಲು ಜೆಡಿಎಸ್ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಜೆಡಿಎಸ್‌ನ ಉಪನಾಯಕ ಬಂಡೆಪ್ಪ ಕಾಶೆಂಪೂರ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸು ಮಹಿಳಾ ಸಬಲೀಕರಣಕ್ಕೆ ಐತಿಹಾಸಿಕ ಒತ್ತು ನೀಡಿದ್ದರು. ಮೊತ್ತ ಮೊದಲ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುತ್ತಿರುವುದು ಹೆಮ್ಮೆಯ ಸಂಗತಿ. ಇದು ದೇವೇಗೌಡರ ಆಶಯಕ್ಕನುಗುಣವಾಗಿದೆ. ಮುರ್ಮು ಅವರ ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೆಂಬಲ ನೀಡಲಾಗುತ್ತಿದೆ. ಇದರಲ್ಲಿ ಆ ಪಕ್ಷ, ಈ ಪಕ್ಷ ಎನ್ನುವ ಮಾತಿಲ್ಲ. ಅಭ್ಯರ್ಥಿಯನ್ನು ಮಾನದಂಡವಾಗಿಟ್ಟುಕೊಂಡು ಬೆಂಬಲ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
