Asianet Suvarna News Asianet Suvarna News

ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ Presidential Election ಮತಪೆಟ್ಟಿಗೆ

  • ರಾಷ್ಟ್ರಪತಿ ಎಲೆಕ್ಷನ್‌ ಮತಪೆಟ್ಟಿಗೆ ವಿಮಾನದಲ್ಲಿ ಬೆಂಗಳೂರಿಗೆ
  • ವಿಧಾನಸೌಧ ಸ್ಟ್ರಾಂಗ್‌ ರೂಮಲ್ಲಿ ಬ್ಯಾಲೆಟ್‌ ಬಾಕ್ಸ್‌ ಭದ್ರ

 

presidential election 2022 ballot paper reach Karnataka gow
Author
Bengaluru, First Published Jul 13, 2022, 10:25 AM IST

 ಬೆಂಗಳೂರು (ಜು.13): ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಅವಶ್ಯಕ ಸಾಮಗ್ರಿಗಳು ಮತ್ತು ಬ್ಯಾಲೆಟ್‌ ಬಾಕ್ಸ್‌ಗಳನ್ನು ದೆಹಲಿಯಿಂದ ನಗರಕ್ಕೆ ಆಗಮಿಸಿದ್ದು, ವಿಧಾನಸೌಧದಲ್ಲಿನ ಸ್ಟ್ರಾಂಗ್‌ ರೂಂನಲ್ಲಿ ಭದ್ರವಾಗಿ ಇಡಲಾಗಿದೆ. ದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ವಿಮಾನದ ಮೂಲಕ ಮಂಗಳವಾರ ರಾತ್ರಿ ಬೆಂಗಳೂರಿಗೆ ತರಲಾಗಿದೆ. ಜು.18ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಸಂಬಂಧ ಮತದಾನಕ್ಕೆ ಅಗತ್ಯ ಇರುವ ಸಾಮಗ್ರಿಗಳು ಮತ್ತು ಬ್ಯಾಲೆಟ್‌ ಬಾಕ್ಸ್‌ಗಳನ್ನು ದೆಹಲಿಯ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ಆಯಾ ರಾಜ್ಯಗಳಿಗೆ ರವಾನಿಸಿದೆ. ಅಂತೆಯೇ ಬೆಂಗಳೂರಿಗೆ ಬಂದು ತಲುಪಿದೆ. ರಾಜ್ಯದ ಬ್ಯಾಲೆಟ್‌ ಪ್ರಯಾಣದ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ವಹಿಸಿದ್ದರು. ಮತದಾನದ ಸಾಮಗ್ರಿಗಳನ್ನು ವಿಧಾನಸೌಧದ ಕೊಠಡಿ ಸಂಖ್ಯೆ 108ರಲ್ಲಿ ಶೇಖರಿಸಿಡಲಾಗಿದೆ. ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮತ್ತು ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಂ ಲಾಕ್‌ ಮಾಡಲಾಯಿತು. ದೆಹಲಿಯಿಂದ ಆಗಮಿಸಿದ ವಿಶೇಷ ಬ್ಯಾಲೆಟ್‌ ಜರ್ನಿಯಲ್ಲಿ ರಾಜ್ಯಕ್ಕೆ ಒಂದು ಸ್ಟೀಲ್‌ ಫ್ರೇಮ್‌ ಬ್ಯಾಲೆಟ್‌ ಬಾಕ್ಸ್‌, ಮಾರ್ಕ್ ಕಾಪಿ, ಮತದಾರರ ಪಟ್ಟಿಮತ್ತು ವಿಶೇಷ ಪೆನ್ನು ಸೇರಿದಂತೆ ಹಲವು ಸಾಮಗ್ರಿಗಳನ್ನು ಒಳಗೊಂಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ, ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಶಾಸಕರು ಮತ್ತು ಒಬ್ಬರು ಸಂಸದ ಸದಸ್ಯರು ಮತ ಚಲಾಯಿಸಲಿದ್ದಾರೆ. ಬಹುತೇಕ ಸಂಸದರು ಸಂಸತ್‌ನಲ್ಲಿ ಮತ ಚಲಾಯಿಸಲಿದ್ದಾರೆ. ಒಬ್ಬರು ಅನಾರೋಗ್ಯದ ಕಾರಣಕ್ಕಾಗಿ ಇಲ್ಲಿಯೇ ಮತ ಚಲಾಯಿಸಲು ಮನವಿ ಮಾಡಿಕೊಂಡಿರುವ ಕಾರಣಕ್ಕಾಗಿ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದರು.

ಮತಪೆಟ್ಟಿಗೆ ತರಲು ಇರುವ ನಿಯಮಾವಳಿಗಳು: ಜನರು ವಿಮಾನಗಳಲ್ಲಿ ಸೀಟು ಬುಕ್‌ ಮಾಡಿ ಪ್ರಯಾಣಿಸುವುದು ಗೊತ್ತು. ಕೆಲವೊಮ್ಮೆ ಪ್ರಾಣಿಗಳನ್ನೂ ಹೀಗೆ ಕರೆದೊಯ್ಯಲಾಗುತ್ತದೆ. ಆದರೆ ಚುನಾವಣೆಗೆ ಬಳಸುವ ಮತಪೆಟ್ಟಿಗೆಯನ್ನೂ ಹೀಗೆ ಟಿಕೆಟ್‌ ಖರೀದಿಸಿ ಸೀಟ್‌ನಲ್ಲಿ ಇರಿಸಿ ಕೊಂಡೊಯ್ಯಲಾಗುತ್ತದೆ ಎಂಬುದು ಗೊತ್ತೇ?

ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ನಡೆಯುವ ಮತದಾನಕ್ಕಾಗಿ, ದೆಹಲಿಯಿಂದಲೇ ಮತಪೆಟ್ಟಿಗೆ ಕಳುಹಿಸಲಾಗುತ್ತದೆ. ಇಂಥ ಮತಪೆಟ್ಟಿಗಳಿಗೆ ‘ಮಿಸ್ಟರ್‌ ಬ್ಯಾಲೆಟ್‌ ಬಾಕ್ಸ್‌’ ಹೆಸರಲ್ಲಿ ಟಿಕೆಟ್‌ ಖರೀದಿಸಿ ಅವುಗಳನ್ನೂ ಪ್ರಯಾಣಿಕರಂತೆ ಸಾಮಾನ್ಯ ಸೀಟ್‌ನಲ್ಲೇ ಇರಿಸಲಾಗುತ್ತದೆ. ರಾಜ್ಯಗಳಿಂದ ಆಗಮಿಸಿರುವ ಅಧಿಕಾರಿಗಳ ಪಕ್ಕದಲ್ಲೇ ಬ್ಯಾಲೆಟ್‌ ಬಾಕ್ಸ್‌ಗಳಿಗೂ ಸೀಟು ಖರೀದಿಸಿ, ಅವುಗಳನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತದೆ. ಬ್ಯಾಲೆಟ್‌ ಬಾಕ್ಸ್‌ ಜೊತೆ ಬ್ಯಾಲೆಟ್‌ ಪೇಪರ್‌, ಮತದಾನಕ್ಕೆ ಬಳಸುವ ವಿಶೇಷ ಪೆನ್‌ ಮೊದಲಾದವುಗಳನ್ನು ಸಾಗಿಸುವ ಅಧಿಕಾರಿಗಳ ಪಕ್ಕದಲ್ಲೇ ಸೀಟುಗಳನ್ನು ಮತಪೆಟ್ಟಿಗೆಗೂ ಕಾಯ್ದಿರಿಸಲಾಗುತ್ತದೆ.

ರಾಷ್ಟ್ರಪತಿ ಅಭ್ಯರ್ಥಿ: ಯಾರು ಈ ದ್ರೌಪದಿ ಮುರ್ಮು..? ಇವರೇ ಮೋದಿ ಆಯ್ಕೆ ಯಾಕೆ.?

ಮಂಗಳವಾರ ಈ ರೀತಿ 14 ಮತಪೆಟ್ಟಿಗೆಗಳನ್ನು ವಿವಿಧ ರಾಜ್ಯಗಳಿಗೆ ರವಾನಿಸಲಾಗಿದ್ದು, ಬುಧವಾರ 16 ಮತಪೆಟ್ಟಿಗೆಗಳನ್ನು ರವಾನಿಸಲಾಗುವುದು. ದೆಹಲಿಯ ಶಾಸನಸಭೆ ಹಾಗೂ ಸಂಸತ್‌ ಭವನಕ್ಕೆ ಬುಧವಾರ ಮತಪೆಟ್ಟಿಗೆ ರವಾನಿಸಲಾಗುವುದು ಎನ್ನಲಾಗಿದೆ. ಕಳುಹಿಸಿದ ದಿನವೇ ಈ ಎಲ್ಲಾ ಸರಕು ಆಯಾ ರಾಜ್ಯಗಳಿಗೆ ತಲುಪಬೇಕು ಎಂಬ ನಿಯಮವಿದೆ. ಮತಪೆಟ್ಟಿಗೆಗಳು ರಾಜ್ಯದ ರಾಜಧಾನಿಯನ್ನು ತಲುಪಿದ ಬಳಿಕ ಅದನ್ನು ಸ್ಯಾನಿಟೈಸ್‌ ಮಾಡಿ ಸೀಲ್‌ ಮಾಡಿ ಭದ್ರವಾಗಿಡಲಾಗುವುದು. ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗುವುದು. ಮತದಾನದ ಬಳಿಕ ಸೀಲ್‌ ಮಾಡಲಾದ ಮತಪೆಟ್ಟಿಗೆಗಳನ್ನು ಮತ್ತೆ ವಿಮಾನದಲ್ಲೇ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಯ ಬಳಿ ಕಳುಹಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

ಯಾರೀಕೆ ದ್ರೌಪದಿ ಮುರ್ಮು.. ಬಿಜೆಪಿಯ ರಾಷ್ಟಪತಿ ಅಭ್ಯರ್ಥಿ?

ಬಿಜೆಪಿ ಕಣಕ್ಕಿಳಿಸಿದ ದ್ರೌಪದಿ ಮುರ್ಮುಗೆ ಸೇನೆ ಬೆಂಬಲ:
ಮುಂಬೈ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಮಂಗಳವಾರ ಶಿವಸೇನೆ ಘೋಷಿಸಿದೆ. ಪಕ್ಷದ ಬಹುತೇಕ ಸಂಸದರು ಮುರ್ಮು ಬೆಂಬಲಿಸಲು ಆಗ್ರಹಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರತಿಕ್ರಯಿಸಿರುವ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನಾವು ಮುರ್ಮು ಬೆಂಬಲಿಸಬಾರದು. ಆದರೆ ಬುಡಕಟ್ಟು ಪಂಗಡಕ್ಕೆ ಸೇರಿದ ನಮ್ಮ ಸಂಸದರು, ಮೊದಲ ಬಾರಿಗೆ ಬುಡಕಟ್ಟು ಸಮುದಾಯಕ್ಕೆ ಗೌರವ ನೀಡಲಾಗುತ್ತಿದೆ. ಹೀಗಾಗಿ ಅವರನ್ನು ಬೆಂಬಲಿಸುವುದು ಸೂಕ್ತ ಎಂದರು. ಹೀಗಾಗಿ ಇದು ಯಾವುದೇ ಒತ್ತಡಕ್ಕೆ ಒಳಗಾಗಿ ಕೈಗೊಂಡ ನಿರ್ಧಾರವಲ್ಲ. ಈ ನಿರ್ಧಾರ, ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದೂ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios