ಕೇರಳದಲ್ಲಿ 10 ವರ್ಷ ಬಳಿಕ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೊಸ ಅಧ್ಯಾಯ ಆರಂಭಿಸಿದೆ. ವಿಡಿ ಸತೀಶನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಭಾರಿ ನೂಕು ನುಗ್ಗಲು ಸಂಭವಿಸಿದೆ.
ತಿರುವಂತಪುರಂ (ಮೇ.18) ಕೇರಳದಲ್ಲಿ ಕಾಂಗ್ರೆಸ್ ಆಡಳಿತ ಆರಂಭಗೊಂಡಿದೆ. ಕಮ್ಯೂನಿಸ್ಟ್ ಆಡಳಿತ ಅಂತ್ಯಗೊಳಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಇದೀಗ ಹೊಸ ಸರ್ಕಾರ ರಚಿಸಿದೆ. ವಿ.ಡಿ. ಸತೀಶನ್ ಕೇರಳದ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರು ಸತೀಶನ್‌ಗೆ ಪ್ರಮಾಣ ವಚನ ಬೋಧಿಸಿದರು. ಸತೀಶನ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇವರ ಜೊತೆಗೆ 21 ಸದಸ್ಯರಿರುವ ಸಂಪುಟದ ಇತರ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದಲ್ಲದೆ, ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ, ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಕೂಡ ಹಾಜರಿದ್ದರು.
ಪಕ್ಷದ ಶಾಸಕರಿಗೆ ಸಿಗಲಿಲ್ಲ ಸೀಟು, ನೂಕುನುಗ್ಗಲು
ಸೆಂಟ್ರಲ್ ಸ್ಟೇಡಿಯಂನಲ್ಲಿ ಯುಡಿಎಫ್ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಭಾರೀ ಜನಜಂಗುಳಿ ಉಂಟಾಗಿದೆ. ಒಂದು ದಶಕದ ನಂತರ ಯುಡಿಎಫ್ ಮತ್ತೆ ಅಧಿಕಾರಕ್ಕೆ ಬಂದಿರೋ ಸಂಭ್ರಮದಲ್ಲಿ ಹತ್ತಾರು ಸಾವಿರ ಕಾರ್ಯಕರ್ತರು ರಾಜಧಾನಿಗೆ ಹರಿದು ಬಂದಿದ್ದಾರೆ. ಇದರಿಂದಾಗಿ ಇಡೀ ಕಾರ್ಯಕ್ರಮದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಹೊಸದಾಗಿ ಆಯ್ಕೆಯಾದ ಶಾಸಕರು (ಎಂಎಲ್‌ಎ) ಮತ್ತು ಪಕ್ಷದ ಪ್ರಮುಖ ನಾಯಕರಿಗೇ ಕೂರಲು ಸೀಟು ಸಿಗದಂತಹ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವಿವಿಐಪಿಗಳಿಗಾಗಿ ಮೀಸಲಿಟ್ಟಿದ್ದ ಮುಂಭಾಗದ ಸಾಲುಗಳಿಗೆ ಕಾರ್ಯಕರ್ತರು ನುಗ್ಗಿ ಸೀಟುಗಳನ್ನು ಆಕ್ರಮಿಸಿಕೊಂಡಿದ್ದಾರೆ.
ಮುಂಭಾಗದ ಸಾಲಿನಲ್ಲಿ ಉಂಟಾಗಿರುವ ನೂಕುನುಗ್ಗಲು ತಪ್ಪಿಸಿ, ನಾಯಕರಿಗೆ ದಾರಿ ಮಾಡಿಕೊಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ, ಜನಸಾಗರವನ್ನು ನಿಯಂತ್ರಿಸಲು ಅವರಿಂದಲೂ ಸಾಧ್ಯವಾಗುತ್ತಿಲ್ಲ. ವಿ. ಡಿ. ಸತೀಶನ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುಮಾರು ಒಂದು ಲಕ್ಷ ಜನರು ಸ್ಟೇಡಿಯಂ ಮತ್ತು ಅದರ ಸುತ್ತಮುತ್ತ ಸೇರಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಕ್ರಮಗಳನ್ನು ಬಿಗಿಗೊಳಿಸುತ್ತಿದ್ದಾರೆ.


