ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರೀ ಬೆಲೆ ಏರಿಕೆ, ತುಷ್ಟೀಕರಣ, ಶಾಸಕ-ಸಚಿವರ ತಲೆ ಎಣಿಕೆಯಲ್ಲೇ ಮುಳುಗಿದೆ. ಸಿಎಂ ತಮ್ಮ ಮನೆಯ ರಿಪೇರಿ ಮಾಡಿಕೊಳ್ಳುವುದನ್ನು ಬಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿ ಕಾರಿದ್ದಾರೆ.

ನವದೆಹಲಿ (ಮೇ.13): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರೀ ಬೆಲೆ ಏರಿಕೆ, ತುಷ್ಟೀಕರಣ, ಶಾಸಕ-ಸಚಿವರ ತಲೆ ಎಣಿಕೆಯಲ್ಲೇ ಮುಳುಗಿದೆ. ಸಿಎಂ ತಮ್ಮ ಮನೆಯ ರಿಪೇರಿ ಮಾಡಿಕೊಳ್ಳುವುದನ್ನು ಬಿಟ್ಟು ‘ಪರ ನಿಂದನೆ’ಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿ ಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಸುಳ್ಳು ಮತ್ತು ದ್ವೇಷದಿಂದ ಕೂಡಿದೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಮೋದಿ ಅವರನ್ನು ಟೀಕಿಸುವ ಮುನ್ನ ಸಿದ್ದರಾಮಯ್ಯ ತಮ್ಮ ಸರ್ಕಾರದ ಅಡಳಿತ ವೈಫಲ್ಯ, ಅಧಿಕಾರಕ್ಕಾಗಿ ಕಿತ್ತಾಟದ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

Add Asianetnews Kannada as a Preferred SourcegooglePreferred

ಜಾಹೀರಾತುಗಳಲ್ಲೇ ಮುನ್ನಲೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಈಗ ಬಯಲಾಗಿದೆ ಎಂದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಒಂದೊಂದಾಗಿ ಪಟ್ಟಿ ಮಾಡಿ, ತೀಕ್ಷ್ಣವಾಗಿ ತಿರುಗೇಟು ನೀಡಿದರು. ಗ್ಯಾರಂಟಿಗಳ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಶೂಲಕ್ಕೆ ತಳ್ಳಿದೆ. ಅಭಿವೃದ್ಧಿಯನ್ನು ಸಂಪೂರ್ಣ ಶೂನ್ಯವಾಗಿಸಿದೆ. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಗುತ್ತಿಗೆದಾರರಿಗೆ ಇನ್ನೂ ಬಾಕಿ ಹಣ ಪಾವತಿಸಿಲ್ಲ. ಆದರೆ, ಜನಸಾಮಾನ್ಯರಿಗೆ ಮಾತ್ರ ನಿತ್ಯವೂ ಬೆಲೆ ಏರಿಕೆ ಬರೆ ಎಳೆಯುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದರು.

ಮಾತೆತ್ತಿದರೆ ತಾವೊಬ್ಬ ಆರ್ಥಿಕ ತಜ್ಞ ಎನ್ನುವ ಸಿಎಂ, ಕರ್ನಾಟಕದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳಿದ್ದಾರೆ. ಅಲ್ಲದೆ, ಕುರ್ಚಿ ಕಿತ್ತಾಟದಲ್ಲಿ ಆಡಳಿತವೂ ಹಳಿ ತಪ್ಪಿದೆ. ಸಾಲದ್ದಕ್ಕೆ ಹಾಲು, ಇಂಧನ ಹೀಗೆ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರಿಗೆ ದ್ರೋಹ ಮಾಡಿದೆ ಎಂದು ಹರಿ ಹಾಯ್ದರು. ಮೋದಿ ಅವರು ದೇಶದ ಹಿತದೃಷ್ಟಿಯಿಂದ ಜನರಿಗೆ ಒಳ್ಳೆಯ ಸಂದೇಶ ಕೊಟ್ಟರೆ ಸಿಎಂ ಲೇವಡಿ ಮಾಡುತ್ತಿದ್ದಾರೆ. ಇದು ಅವರ ಬೇಜವಾಬ್ದಾರಿ ನಾಯಕತ್ವವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕರ್ನಾಟಕದ ಸಾಲ ವಿಪರೀತ

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿತ ಕಂಡಿತ್ತು. ಆದರೆ, ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಸಿದ್ದರಾಮಯ್ಯ ಅವರು ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ತಮ್ಮ ಸರ್ಕಾರದೊಳಗಿನ ಅಧಿಕಾರ ದಾಹ ಮತ್ತು ಆಡಳಿತದ ಪಾರ್ಶ್ವವಾಯುವಿಗೆ ಉತ್ತರ ನೀಡಬೇಕು ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕರ್ನಾಟಕದ ಸಾಲ ವಿಪರೀತವಾಗಿದ್ದು, ಆದಾಯ ಕೊರತೆ ಐತಿಹಾಸಿಕ ಎನ್ನುವಂತೆ ಗರಿಷ್ಠ ಮಟ್ಟ ತಲುಪಿದೆ. ಹಿಂದಿನ ದಾಖಲೆಗಳನ್ನೆಲ್ಲಾ ಮುರಿದಿದೆ ಎಂದು ಜೋಶಿ ಟೀಕಿಸಿದರು.

ಕೇಂದ್ರದ ವಿರುದ್ಧ ‘ದ್ರೋಹ’ ಎನ್ನುವ ಪದ ಬಳಕೆ ಮಾಡುವ ಸಿಎಂ, ಮೊದಲು ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ಮಾಡುತ್ತಿರುವ ದ್ರೋಹದ ಬಗ್ಗೆ ಮಾತನಾಡಲಿ. ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳಿಗೆ ದ್ರೋಹ ಬಗೆಯುತ್ತಲೇ ಇದೆ. ಪ್ರಾದೇಶಿಕ ಜನಾದೇಶಗಳನ್ನು ವಿಭಜಿಸಿದೆ. ಅನೇಕ ಸರ್ಕಾರಗಳನ್ನು ಉರುಳಿಸಿದೆ ಎಂದು ಚಾಟಿ ಬೀಸಿದರು.