ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ 42 ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವು ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇವಾಲಯದ ದೇಣಿಗೆಯಿಂದ ನಡೆಯುವ ಸಂಸ್ಥೆಯಲ್ಲಿ ಹಿಂದೂಗಳಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಾದಿಸಿದೆ.

ಶ್ರೀನಗರ (ನ.26): ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವನ್ನು ವಿರೋಧಿಸುತ್ತಿರುವ ಗುಂಪುಗಳಿಗೆ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ ತಿರುಗೇಟು ನೀಡಿದ್ದು, ಜಮ್ಮು ಕಾಶ್ಮೀರ ಸರ್ಕಾರವು ವೈಷ್ಣೋ ದೇವಿ ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿಗಳನ್ನು ಅನುದಾನವಾಗಿ ನೀಡುತ್ತದೆ ಎಂದು ಹೇಳಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆಪ್ತರೂ ಆಗಿರುವ ಜೆ & ಕೆ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯ ವಕ್ತಾರ ಮತ್ತು ಶಾಸಕ ತನ್ವೀರ್ ಸಾದಿಕ್ ಅವರ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವೈದ್ಯಕೀಯ ಕಾಲೇಜು ಸಂಯೋಜಿತವಾಗಿರುವ ವೈಷ್ಣೋ ದೇವಿ ವಿಶ್ವವಿದ್ಯಾಲಯಕ್ಕೆ ಭಾರೀ ಪ್ರಮಾಣದ ಅನುದಾನ ನೀಡುತ್ತದೆ ಎಂದಿದ್ದಾರೆ.

"ಕಳೆದ ವರ್ಷ ವೈಷ್ಣೋ ದೇವಿಗೆ 24 ಕೋಟಿ ರೂ. ಸಹಾಯಧನ ನೀಡಲಾಗಿದೆ ಮತ್ತು ಈ ವರ್ಷ 28 ಕೋಟಿ ರೂ. ಸಹಾಯಧನ ನೀಡಲಾಗಿದೆ" ಎಂದು ಎನ್‌ಸಿ ವಕ್ತಾರರು ತಿಳಿಸಿದ್ದಾರೆ.ತನ್ವೀರ್ ಅವರ ಪ್ರಕಾರ, ಸಂಸ್ಥೆಯು ಕೇವಲ ದೇಣಿಗೆಗಳ ಮೇಲೆ ಮಾತ್ರ ನಡೆಯುತ್ತಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ. "ಸಾರ್ವಜನಿಕ ಹಣವು ಒಳಗೊಂಡಿರುವಾಗ, ಈ ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬ ನಾಗರಿಕನು ಧರ್ಮ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಅಲ್ಲಿಗೆ ಪ್ರವೇಶ ಪಡೆಯಲು ಸಮಾನ ಹಕ್ಕನ್ನು ಹೊಂದಿರುತ್ತಾನೆ' ಎಂದಿದ್ದಾರೆ.

50 ವಿದ್ಯಾರ್ಥಿಗಳ ಪೈಕಿ 42 ಮಂದಿ ಮುಸ್ಲಿಮರು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕಾಕ್ರಿಯಲ್‌ನಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ (SMVDIME) ಗೆ 2025–26 ಶೈಕ್ಷಣಿಕ ಅವಧಿಗೆ 50 MBBS ಸೀಟುಗಳನ್ನು ಮಂಜೂರು ಮಾಡಲಾಯಿತು. ಮೊದಲ ವರ್ಷದಲ್ಲಿ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದ 50 ವಿದ್ಯಾರ್ಥಿಗಳಲ್ಲಿ 42 ಮಂದಿ ಮುಸ್ಲಿಮರಾಗಿದ್ದಾರೆ.42 ಮುಸ್ಲಿಂ ವಿದ್ಯಾರ್ಥಿಗಳ ಆಯ್ಕೆಯು ಬಲಪಂಥೀಯ ಹಿಂದೂ ಗುಂಪುಗಳು ಮತ್ತು ಬಿಜೆಪಿಯಿಂದ ಪ್ರತಿಭಟನೆಗೆ ಕಾರಣವಾಗಿದೆ.

"ವೈಷ್ಣೋದೇವಿಯಲ್ಲಿ ನಂಬಿಕೆ ಇರುವವರು ಮಾತ್ರ ಅಲ್ಲಿ ಪ್ರವೇಶ ಪಡೆಯಬೇಕು. ಸನಾತನ ಸಂಸ್ಕೃತಿ ಮತ್ತು ಧರ್ಮವನ್ನು ಉತ್ತೇಜಿಸಲು ದೇವಾಲಯಕ್ಕೆ ಕೊಡುಗೆ ನೀಡುವ ಭಕ್ತರು ಮಾತ್ರ ಪ್ರವೇಶ ಪಡೆಯಬೇಕು" ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವನ್ನು ವಿರೋಧಿಸುತ್ತಾ ಹೇಳಿದ್ದಾರೆ.

ದೇವಸ್ಥಾನದ ದೇಣಿಗೆ, ಕಾಣಿಕೆಯಿಂದ ನಡೆಯುವ ವೈದ್ಯಕೀಯ ಕಾಲೇಜು

ಎಲ್‌ಒಪಿ ಶರ್ಮಾ ನೇತೃತ್ವದ ಬಿಜೆಪಿ ನಿಯೋಗವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ಪ್ರವೇಶ ಮಾನದಂಡಗಳ ಪರಿಶೀಲನೆ, ಹೆಚ್ಚಿನ ಪಾರದರ್ಶಕತೆ ಮತ್ತು ಭಕ್ತರ ಭಾವನೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿತು.

ಬಜರಂಗದಳ, ವಿಶ್ವ ಹಿಂದೂ ಪರಿಷತ್, ಯುವ ರಜಪೂತ ಸಭಾ ಮತ್ತು ಮೂವ್ಮೆಂಟ್ ಕಲ್ಕಿ ಸೇರಿದಂತೆ ಹಿಂದೂ ಗುಂಪುಗಳು 42 ಮುಸ್ಲಿಂ ಅಭ್ಯರ್ಥಿಗಳ ಆಯ್ಕೆಗೆ ಪ್ರತಿಭಟಿಸಿವೆ. ಸಂಸ್ಥೆಯು ಹಿಂದೂಗಳಿಂದ ದೇಣಿಗೆ ಮತ್ತು ಕಾಣಿಕೆಗಳ ಮೂಲಕ ಹಣವನ್ನು ಪಡೆಯುತ್ತಿದೆ ಮತ್ತು ಹಿಂದೂ ವಿದ್ಯಾರ್ಥಿಗಳ ಪ್ರವೇಶಕ್ಕೆ ಆದ್ಯತೆ ನೀಡಬೇಕು ಎಂದು ವಾದಿಸಿವೆ.ಜೆ & ಕೆ ಸರ್ಕಾರವು ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ ಅನುದಾನವನ್ನು ನೀಡುತ್ತದೆ ಎಂದು ಎನ್‌ಸಿ ವಕ್ತಾರ ಇಮ್ರಾನ್ ನಬಿ ದಾರ್ ಹೇಳಿದ್ದಾರೆ.

"ಕಳೆದ ವರ್ಷ 24 ಕೋಟಿ ರೂ. ಮತ್ತು ಈ ವರ್ಷ 28 ಕೋಟಿ ರೂ.ಗಳನ್ನು SMVDU ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಲಾಗಿತ್ತು, ಮತ್ತು ಈ ವೈದ್ಯಕೀಯ ಕಾಲೇಜು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ, ಅನುದಾನ ರಶೀದಿಯ ಚಿತ್ರವನ್ನು "ಪುರಾವೆ" ಎಂದು ಲಗತ್ತಿಸಿದ್ದಾರೆ.

SMVDU ವೈದ್ಯಕೀಯ ಕಾಲೇಜಿಗೆ NEET ಮತ್ತು BOPEE ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ಇಮ್ರಾನ್ ಹೇಳಿದರು. "ಭಾರತದಲ್ಲಿ ಇನ್ನೂ ಕೆಲವು ಸಂಸ್ಥೆಗಳು ವಿದ್ಯಾರ್ಥಿಯ ಧರ್ಮದ ಆಧಾರದ ಮೇಲೆ ಅಲ್ಲ, ಅರ್ಹತೆಯ ಆಧಾರದ ಮೇಲೆ ನಡೆಯುತ್ತವೆ' ಎಂದಿದ್ದಾರೆ.

ಪ್ರವೇಶ ಪಟ್ಟಿ ರದ್ದು ಮಾಡದೇ ಇದ್ದರೆ ಬೀದಿಗಿಳಿದು ಪ್ರತಿಭಟನೆ

60 ಗುಂಪುಗಳಿಂದ ರಚಿಸಲ್ಪಟ್ಟ ವೈಷ್ಣೋದೇವಿ ಸಂಗಢ ಸಮಿತಿಯ ಸಂಚಾಲಕರಾದ ಕರ್ನಲ್ (ನಿವೃತ್ತ) ಸುಖಬೀರ್ ಸಿಂಗ್ ಮಂಕೋಟಿಯಾ, ಪ್ರವೇಶ ಪಟ್ಟಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು. ವಿಗ್ರಹಾರಾಧನೆಯಲ್ಲಿ ನಂಬಿಕೆ ಇಡುವ ಹಿಂದೂ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳನ್ನು ಬಳಸಿಕೊಂಡು ಸಂಸ್ಥೆಯನ್ನು ನಿರ್ಮಿಸಲಾಗಿದೆ ಮತ್ತು ಮುಸ್ಲಿಂ ಅಭ್ಯರ್ಥಿಗಳ ಆಯ್ಕೆಯು "ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ" ಎಂದು ಅವರು ವಾದಿಸಿದರು.

ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮುಸ್ಲಿಮರ ಪ್ರವೇಶವನ್ನು ವಿರೋಧಿಸಿದ ಮಂಕೋಟಿಯಾ, "ಮುಸ್ಲಿಮರು ಮೂರ್ತಿ ಪೂಜೆಯಲ್ಲಿ ನಂಬಿಕೆ ಇಡುವುದಿಲ್ಲ, ಆದ್ದರಿಂದ ಮೂರ್ತಿ ಪೂಜೆ ಮಾಡುವವರ ಹಣದಿಂದ ಸ್ಥಾಪಿಸಲಾದ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದು ಅವರಿಗೆ ಸಾಧ್ಯವಾಗುವುದಿಲ್ಲ" ಎಂದು ಹೇಳಿದರು. "ಪಟ್ಟಿಯನ್ನು ರದ್ದುಗೊಳಿಸದಿದ್ದರೆ, ನಾವು ರಸ್ತೆಗಿಳಿದು ಬಲವಂತದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ" ಎಂದು ಮಂಕೋಟಿಯಾ ಎಚ್ಚರಿಸಿದ್ದಾರೆ.