ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ದೆಹಲಿಯನ್ನು ಮಣಿಸಿ ಐತಿಹಾಸಿಕ ಜಯ ದಾಖಲಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ರಾನ್ ಇಕ್ಬಾಲ್ ಅವರ ಅಜೇಯ ಶತಕದ ನೆರವಿನಿಂದ ಜಮ್ಮು ಮತ್ತು ಕಾಶ್ಮೀರ ತಂಡವು 179 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿತು.
ದೆಹಲಿ: ರಣಜಿ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ದೆಹಲಿಯನ್ನು ಸೋಲಿಸಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿ 65 ವರ್ಷಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಾ ಬಂದಿದ್ದು,ಈ ಕಾದಾಟದಲ್ಲಿ ದೆಹಲಿ ವಿರುದ್ಧ ಜಮ್ಮು ಮತ್ತು ಕಾಶ್ಮೀರಕ್ಕೆ ಇದು ಮೊದಲ ಜಯವಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 179 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ ಅವರ ಅಜೇಯ ಶತಕ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿತು.
ಜವಾಬ್ದಾರಿಯುತ ಆಟವಾಡಿದ ಜಮ್ಮು-ಕಾಶ್ಮೀರ
147 ಎಸೆತಗಳಲ್ಲಿ 133 ರನ್ ಗಳಿಸಿ ಕಮ್ರಾನ್ ಅಜೇಯರಾಗಿ ಉಳಿದರೆ, ನಾಯಕ ಪರಸ್ ದೋಗ್ರಾ 10 ರನ್‌ಗಳೊಂದಿಗೆ ಗೆಲುವಿನಲ್ಲಿ ಕಮ್ರಾನ್‌ಗೆ ಸಾಥ್ ನೀಡಿದರು. ಶುಭಂ ಖಜೂರಿಯಾ(8), ವಿವ್ರಾಂತ್ ಶರ್ಮಾ(3), ಮತ್ತು ವಂಶಜ್ ಶರ್ಮಾ(8) ಅವರ ವಿಕೆಟ್‌ಗಳನ್ನು ಜಮ್ಮು ಮತ್ತು ಕಾಶ್ಮೀರ ಎರಡನೇ ಇನ್ನಿಂಗ್ಸ್‌ನಲ್ಲಿ ಕಳೆದುಕೊಂಡಿತು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ದೆಹಲಿ 211 ರನ್‌ಗಳಿಗೆ ಆಲೌಟ್ ಆಗಿದ್ದರೆ, ಜಮ್ಮು ಮತ್ತು ಕಾಶ್ಮೀರ 310 ರನ್ ಗಳಿಸಿ 99 ರನ್‌ಗಳ ನಿರ್ಣಾಯಕ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ದೆಹಲಿ 277 ರನ್‌ಗಳಿಗೆ ಆಲೌಟ್ ಆಯಿತು. ಆರು ವಿಕೆಟ್ ಪಡೆದ ವಂಶಜ್ ಶರ್ಮಾ ಅವರ ಬೌಲಿಂಗ್ ಜಮ್ಮು ಮತ್ತು ಕಾಶ್ಮೀರಕ್ಕೆ ಬಲ ನೀಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಅಕಿಬ್ ನಬಿ ಅವರ ಬೌಲಿಂಗ್, ದೆಹಲಿಯನ್ನು 211 ರನ್‌ಗಳಿಗೆ ಕಟ್ಟಿಹಾಕಲು ಜಮ್ಮು ಮತ್ತು ಕಾಶ್ಮೀರಕ್ಕೆ ನೆರವಾಯಿತು. ಕಳೆದ ಋತುವಿನಲ್ಲಿ ಮಾಜಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿ ಜಮ್ಮು ಮತ್ತು ಕಾಶ್ಮೀರ ಐತಿಹಾಸಿಕ ಸಾಧನೆ ಮಾಡಿತ್ತು.
ಕರ್ನಾಟಕ-ಮಹಾರಾಷ್ಟ್ರ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯ:
ನಾಸಿಕ್: ಶ್ರೇಯಸ್ ಗೋಪಾಲ್ ಆಲ್ರೌಂಡ್ ಪ್ರದರ್ಶನ ಹಾಗೂ ಮಯಾಂಕ್ ಅಗರ್‌ವಾಲ್ ಅವರ ಆಕರ್ಷಕ ಶತಕದ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಮಹಾರಾಷ್ಟ್ರ ಎದುರು ಕರ್ನಾಟಕ ತಂಡವು ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 13 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದ ಕರ್ನಾಟಕ ತಂಡವು 3 ಅಂಕಗಳನ್ನು ಪಡೆದು ಗ್ರೂಪ್ 'ಬಿ'ನಲ್ಲಿ ಅಗ್ರಸ್ಥಾನಿಯಾಗಿಯೇ ಮುಂದುವರೆದಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 313 ರನ್ ಗಳಿಸಿ ಸರ್ವಪತನ ಕಂಡಿತು. ನಾಯಕ ಮಯಾಂಕ್ ಅಗರ್‌ವಾಲ್ 80 ರನ್ ಸಿಡಿಸಿದರೆ, ಸ್ಮರಣ್ ರವಿಚಂದ್ರನ್ 54 ಹಾಗೂ ಶ್ರೇಯಸ್ ಗೋಪಾಲ್ ಆಕರ್ಷಕ 71 ರನ್ ಸಿಡಿಸಿದರು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಮಹರಾಷ್ಟ್ರ ತಂಡವು ಪೃಥ್ವಿ ಶಾ(71) ಹಾಗೂ ಜಲಜಾ ಸಕ್ಸೇನಾ(72) ಆಕರ್ಷಕ ಅರ್ಧಶತಕದ ಹೊರತಾಗಿಯೂ 300 ರನ್‌ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಅಗಿ ಹೊರಹೊಮ್ಮಿದರು.
ಇನ್ನು ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡಕ್ಕೆ ನಾಯಕ ಮಯಾಂಕ್ ಅಗರ್‌ವಾಲ್ ಶತಕ ಸಿಡಿಸಿ ಆಸರೆಯಾದರು. ಮಯಾಂಕ್ ಅಗರ್‌ವಾಲ್ 103 ರನ್ ಸಿಡಿಸಿದರೆ, ಅಭಿನವ್ ಮನೋಹರ್ 96 ರನ್ ಸಿಡಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕದ ಹೊಸ್ತಿಲಲ್ಲಿ ಎಡವಿದರು. ಕರ್ನಾಟಕ 8 ವಿಕೆಟ್ ಕಳೆದುಕೊಂಡು 309 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
