ಭಾರಿ ಮಳೆಗೆ ಮುಳುಗಿದ ವಡೋದರಾ: ಮನೆ ಮಹಡಿ ಮೇಲೆ ವಿರಮಿಸುತ್ತಿರುವ ಮೊಸಳೆ ವೀಡಿಯೋ ವೈರಲ್
ಈ ಬಾರಿಯ ಭಾರಿ ಮಳೆಗೆ ಗುಜರಾತ್‌ನ ವಡೋದರಾದಲ್ಲಿ ಪ್ರವಾಹ ಉಂಟಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಳುಗಿರುವ ಮನೆಗಳ ರೂಫ್‌ಗಳ (ಟೆರೇಸ್) ಮೇಲೆ ಮೊಸಳೆಗಳು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಅಲ್ಲಿ ಕಂಡು ಬರುತ್ತಿದ್ದು, ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಾರಿಯ ಭಾರಿ ಮಳೆಗೆ ಗುಜರಾತ್‌ನ ವಡೋದರಾದಲ್ಲಿ ಪ್ರವಾಹ ಉಂಟಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಗುಜರಾತ್‌ನಲ್ಲಿ ಇಡೀ ವರ್ಷ ಸುರಿಯುವ ಮಳೆ ಕೆಲವೇ ದಿನಗಳಲ್ಲಿ ಭರಪೂರ ಸುರಿದಿದ್ದು, ಇದರಿಂದ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಮುಳುಗಿರುವ ಮನೆಗಳ ರೂಫ್‌ಗಳ (ಟೆರೇಸ್) ಮೇಲೆ ಮೊಸಳೆಗಳು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಅಲ್ಲಿ ಕಂಡು ಬರುತ್ತಿದ್ದು, ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಡೋದರಾದ ಅಕೋಟಾ ಸ್ಟೇಡಿಯಂ ಬಳಿಯ ಮನೆಯೊಂದರ ಮೇಲೆ ಹೀಗೆ ಮೊಸಳೆ ವಿಶ್ರಮಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಇನ್ನು ವಡೋದರಾದಲ್ಲಿಇದುವರೆಗೆ ಸುರಿದ ಧಾರಾಕಾರ ಮಳೆಯಿಂದ ಜೀವಹಾನಿಯೂ ಸಂಭವಿಸಿದ್ದು, ಇದುವರೆಗೆ ಒಟ್ಟು 28 ಜನ ಮಳೆ ಸಂಬಂಧಿ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಪ್ರವಾಹದಿಂದಾಗಿ ನಿರಾಶ್ರಿತರಾಗಿದ್ದಾರೆ. ಗುಜರಾತ್‌ನ 12 ಜಿಲ್ಲೆಗಳಲ್ಲಿ ಇನ್ನು ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬದುಕಲು ಏನೂ ಉಳಿದಿಲ್ಲ, ಗುಜರಾತ್ ಪ್ರವಾಹದಲ್ಲಿ 50 ಲಕ್ಷ ರೂ ಕಾರು ಕಳೆದುಕೊಂಡ ವ್ಯಕ್ತಿಯ ಅಳಲು!
ವಡೋದರಾದಲ್ಲಿ ಹರಿಯುತ್ತಿರುವ ವಿಶ್ವಮಿತ್ರೆ ನದಿ ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, ವಡೋದರಾದಲ್ಲಿ ಪ್ರವಾಹದಿಂದಾಗಿ ಮನೆ ಮಹಡಿಯ ಮೇಲೆ ನಿಂತು ರಕ್ಷಣೆಗಾಗಿ ಕೈ ತೋರಿದ ಅನೇಕರನ್ನು ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಿದ್ದಾರೆ. ಅಲ್ಲದೇ ಭಾರತೀಯ ಸೇನೆಯ ಮೂರು ತುಕಡಿಗಳನ್ನು ಕೂಡ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸಚಿವ ರುಶಿಕೇಶ್ ಪಟೇಲ್ ಮಾತನಾಡಿ, ಪ್ರವಾಹ ಪೀಡಿತ ಸ್ಥಳದಿಂದ ಒಟ್ಟು 5 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದ್ದು, 12,00 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರವಾಹ ನೀರು ಇಳಿದ ನಂತರ ಘಟನಾ ಸ್ಥಳದಲ್ಲಿ ಸ್ವಚ್ಛತೆ ಮಾಡಿ ಸೋಂಕು ನಿವಾರಕಗಳನ್ನು ಸಿಂಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಅಲ್ಲದೇ ಅಹ್ಮದಾಬಾದ್, ಸೂರತ್, ಭರುಚ್, ಆನಂದ್‌ನ ಮಹಾನಗರ ಪಾಲಿಕೆಯ ಸಿಬ್ಬಂದಿಯನ್ನು ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸುವಂತೆ ಸೂಚಿಸಲಾಗಿದೆ.
ಕೊಳದಲ್ಲಿದ್ದ ಮರಿ ಆನೆ ಮೇಲೆ ದಾಳಿಗೆ ಬಂದ ದೈತ್ಯ ಮೊಸಳೆ, ಹೋರಾಡಿ ರಕ್ಷಿಸಿದ ತಾಯಿ ಆನೆ!
ಅಧಿಕಾರಿಗಳು ನೀಡಿದ ಮಾಹಿತಿಯಂತೆ ರಾಜ್ಯದ 140 ಜಲಾಶಯಗಳು ಹಾಗೂ ಡ್ಯಾಂಗಳು 24 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಒಟ್ಟು 204 ಡ್ಯಾಮ್‌ಗಳಲ್ಲಿ 122 ಡ್ಯಾಂಗಳ ಬಳಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಭೂಪೇಂದ್ರ ಪಟೇಲ್ ಜೊತೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.