ಉತ್ತರಾಖಂಡದ ಪಿಥೋರಗಢದಲ್ಲಿ ನಡೆದ ಜೌಲ್‌ಜೀಬಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ಹರೀಶ್ ಧಾಮಿ ವೇದಿಕೆಯಲ್ಲಿದ್ದ ಮೈಕ್ ಮತ್ತು ಕುರ್ಚಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ವೈರಲ್ ವಿಡಿಯೋ ಹಾಗೂ ಘಟನೆಯ ವಿವರ ಇಲ್ಲಿದೆ.

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಧಾರ್ಚುಲಾದ ಕೈ ಶಾಸಕ ಹರೀಶ್ ಧಾಮಿ ಮತ್ತು ಅವರ ಬೆಂಬಲಿಗರು ಪಿಥೋರಗಢ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ 10 ದಿನಗಳ ಜೌಲ್ಜಿಬಿ ಮೇಳದ ಉದ್ಘಾಟನಾ ವೇದಿಕೆ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕಾಂಗ್ರೆಸ್‌ ನಾಯಕ ಹೇಳುವುದೇನು?

ಮುಖ್ಯಮಂತ್ರಿಗಳು ಸಾಂಪ್ರದಾಯಿಕ ಜಾತ್ರೆ ಉದ್ಘಾಟಿಸಿ ಸ್ಥಳದಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಕೈ ನಾಯಕರ ಪ್ರಕಾರ, ಜಾತ್ರೆ ಸಮಿತಿಯ ಅಧ್ಯಕ್ಷರೂ ಆಗಿರುವ ಧಾರ್ಚುಲಾ ಶಾಸಕರು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ಉದ್ದೇಶಿಸಿ ಮಾತನಾಡಲು ಮತ್ತು ಸ್ಥಳೀಯ ಬೇಡಿಕೆ ಗಮನಕ್ಕೆ ತರಲು ಪ್ರಯತ್ನವನ್ನು ನಿರಾಕರಿಸಲ್ಪಟ್ಟಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ.

ಹರೀಶ್‌ ದಾಮಿ ಹೇಳುವುದೇನು?

ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹರೀಶ್ ಧಾಮಿ ಆರೋಪಿಸಿದ್ದಾರೆ. ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಧಾಮಿ, ರಾಜ್ಯ ಸರ್ಕಾರವು ವಿರೋಧ ಪಕ್ಷಗಳನ್ನು ಎದುರಿಸಲು ಹೆದರುತ್ತಿದೆ. ಈ ಮೇಳದ ಅಧ್ಯಕ್ಷನಾಗಿದ್ದರೂ, ನನಗೆ ಮಾತನಾಡಲು, ಸ್ಥಳೀಯ ಜನರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಡಲು ಅವಕಾಶ ನೀಡಲಾಗಿಲ್ಲ. ಸರ್ಕಾರ ಭ್ರಷ್ಟದಿಂದ ತುಂಬಿದೆ. ಅಷ್ಟೇ ಅಲ್ಲ ವಿರೋಧ ಪಕ್ಷಗಳಿಗೆ ಹೆದರುತ್ತಿದೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಸತ್ಯ ಕೇಳಲು ಮುಖ್ಯಮಂತ್ರಿಗೆ ಧೈರ್ಯವಿಲ್ಲ ಎಂದು ಶಾಸಕರು ಹೇಳಿದ್ದಾರೆ. ಘಟನೆಯ ನಂತರ, ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯ ಮೇಲೆ ಹತ್ತಿ ಪ್ರತಿಭಟನೆ ನಡೆಸಿ, ಪಿಥೋರಗಢ ಶಾಸಕ ಮಯೂಖ್ ಸಿಂಗ್ ಮಹಾರ್ ಅವರನ್ನು ಆಹ್ವಾನಿಸದಿರುವುದನ್ನು ಆಕ್ಷೇಪಿಸಿದ್ದಾರೆ

ಶಿಷ್ಟಾಚಾರ ಉಲ್ಲಂಘನೆ!

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಖೇಶ್ ಪಂತ್, ಆಡಳಿತವು ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಆರೋಪಿಸಿ, ಪ್ರಸ್ತುತ ಸರ್ಕಾರವು ಜಿಲ್ಲೆಯಿಂದ ಚುನಾಯಿತ ಸಾರ್ವಜನಿಕ ಪ್ರತಿನಿಧಿ ಆಹ್ವಾನಿಸದೆ ಎಲ್ಲಾ ನೈತಿಕ ನೀತಿಗಳನ್ನು ತೊಡೆದು ಹಾಕಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಧಾರ್ಚುಲಾ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಎ.ಕೆ. ಸಿಂಗ್ ಮಾತನಾಡಿ, ಸಿಎಂ ಸ್ಥಳದಿಂದ ನಿರ್ಗಮಿಸಿದ ನಂತರ ಮತ್ತು ಕಾರ್ಯಕ್ರಮ ಮುಗಿದ ನಂತರ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಲಿಖಿತ ದೂರು ಸಲ್ಲಿಸುವುದಾಗಿ ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ, ಆದರೆ ನಮಗೆ ಇನ್ನೂ ದೂರು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಜೌಲ್ಜಿಬಿ ಮೇಳ ಉದ್ಘಾಟಿಸಿದ ಸಿಎಂ ಧಾಮಿ!

ಇದಕ್ಕೂ ಮುನ್ನ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 10 ದಿನಗಳ ಸಾಂಸ್ಕೃತಿಕ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿದ್ದಾರೆ. ಇದು ಭಾರತ, ನೇಪಾಳ ಮತ್ತು ಟಿಬೆಟ್‌ನ ವ್ಯಾಪಾರಿ ಮತ್ತು ಸರಕುಗಳನ್ನು ಒಟ್ಟುಗೂಡಿಸುತ್ತದೆ. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಕಾರ್ಯಕ್ರಮದ ಐತಿಹಾಸಿಕ ಮಹತ್ವವದ ಕುರಿತು ಮಾತನಾಡಿದ್ದಾರೆ. ಈ ಜಾತ್ರೆ ಶತಮಾನಗಳಷ್ಟು ಹಳೆಯದಾದ ವಾಣಿಜ್ಯ ಸಂಬಂಧಗಳು ಮತ್ತು ಗಡಿನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ

ಧಾಮಿಯವರ ಕ್ರಮ ಖಂಡನೀಯ ಎಂದು ಸ್ಥಳೀಯ ಬಿಜೆಪಿ ನಾಯಕ ಮಹೇಂದ್ರ ಸಿಂಗ್ ಬುಡಿಯಾಲ್ ಹೇಳಿದ್ದಾರೆ. ಮುಖ್ಯಮಂತ್ರಿಯವರ ಬಿಗಿಯಾದ ವೇಳಾಪಟ್ಟಿಯಿಂದಾಗಿ ಅವರು ಕಾಶಿಪುರದಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಬೇಕಾಗಿರುವುದರಿಂದ ಕಾರ್ಯಕ್ರಮ ಈಗಾಗಲೇ ಸಂಕ್ಷಿಪ್ತವಾಗಿ ಇಡಲಾಗಿತ್ತು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯ ವಿರುದ್ಧ ಧಾಮಿ ನಿಂದನೀಯ ಭಾಷೆಯನ್ನು ಬಳಸಿದ ರೀತಿ ಖಂಡನೀಯ. ಧಾರ್ಚುಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ನೆಲೆ ಕಳೆದುಕೊಳ್ಳುತ್ತಿರುವುದರಿಂದ ಶಾಸಕರ ಕಡೆಯಿಂದ ಇದು ಸಂಪೂರ್ಣ ಹತಾಶೆ ಎಂದು ಬಿಜೆಪಿ ನೋಡುತ್ತದೆ" ಎಂದು ಬುಡಿಯಾಲ್ ಹೇಳಿದರು.