Uttarakhand Cloudburst: ಡೆಹ್ರಾಡೂನ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ತಮ್ಸಾ ನದಿ ಉಕ್ಕಿ ಹರಿದು, ಐತಿಹಾಸಿಕ ತಪಕೇಶ್ವರ ಮಹಾದೇವ ದೇಗುಲ ಜಲಾವೃತವಾಗಿದೆ. ಸಹಸ್ರಧಾರ ಸೇರಿದಂತೆ ಹಲವೆಡೆ ಭಾರೀ ಹಾನಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಮೇಘಸ್ಫೋಟಕ್ಕೆ ಉತ್ತರಾಖಂಡ್ ತತ್ತರ:
ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು, ಒಂದು ಅನಾಹುತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಭಾರಿ ಪ್ರವಾಹ ರಾಜ್ಯವನ್ನು ತತ್ತರಗೊಳ್ಳುವಂತೆ ಮಾಡಿದೆ. ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ಇಲ್ಲಿನ ಐತಿಹಾಸಿಕ ತಪಕೇಶ್ವರ ಮಹಾದೇವ ಜಲಾವೃತವಾಗಿದೆ. ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯ ಸೂಕ್ಷ್ಮ ಅವಲೋಕನ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ತಪಕೇಶ್ವರ ದೇಗುಲ ಜಲಾವೃತ
ಬೆಳಗ್ಗೆ 5 ಗಂಟೆಯಿಂದ ನದಿಯಲ್ಲಿ ನೀರಿನ ಮಟ್ಟ ಭಾರಿ ಏರಿಕೆಯಾಗಿ ನದಿ ತೀವ್ರವಾಗಿ ಉಕ್ಕಿ ಹರಿಯಲು ಪ್ರಾರಂಭಿಸಿತು, ಇಡೀ ದೇವಾಲಯದ ಆವರಣವು ಮುಳುಗಿಹೋಯಿತು... ಈ ರೀತಿಯ ಪರಿಸ್ಥಿತಿ ಬಹಳ ಸಮಯದಿಂದ ಸಂಭವಿಸಿರಲಿಲ್ಲ, ಇದರಿಂದ ವಿವಿಧ ಸ್ಥಳಗಳಲ್ಲಿ ಭಾರೀ ಹಾನಿಯಾಗಿದೆ. ಜನರು ಈ ಸಮಯದಲ್ಲಿ ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಇಲ್ಲಿಯವರೆಗೆ ಯಾವುದೇ ಮಾನವ ನಷ್ಟ ವರದಿಯಾಗಿಲ್ಲ ಎಂದು ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ ಹೇಳಿದ್ದಾರೆ.
ಬೆಳಿಗ್ಗೆ 4:45 ರ ಸುಮಾರಿಗೆ ನೀರು ಗುಹೆಯೊಳಗೆ ಪ್ರವೇಶಿಸಿತು. ನಂತರ, ನೀರಿನ ಮಟ್ಟ ಹೆಚ್ಚಾಗಲು ಪ್ರಾರಂಭಿಸಿದಾಗ, ಅದು 10 ರಿಂದ 12 ಅಡಿಗಳಿಗೆ ಏರಿ ಶಿವಲಿಂಗವನ್ನು ಸ್ಪರ್ಶಿಸಿತ್ತು. ಆದರೂ ಹೇಗೋ ನಾವು ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಹಗ್ಗದ ಸಹಾಯದಿಂದ ಮೇಲಕ್ಕೆ ಬಂದೆವು ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರವಾಹದ ತೀವ್ರತೆಯನ್ನು ವಿವರಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿನ್ನೆ ತಡರಾತ್ರಿ ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ. ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಸಹಸ್ರಧಾರ ಸಮೀಪ ಹಲವರು ನಾಪತ್ತೆ
ಮತ್ತೊಂದು ವರದಿಯ ಪ್ರಕಾರ, ಸಹಸ್ರಧಾರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಭವಿಸಿದ ಪ್ರವಾಹದಿಂದ ಅನೇಕ ಜನರು ನಾಪತ್ತೆಯಾಗಿದ್ದಾರೆ. ಅಂಗಡಿಗಳಿಗೆ ಹಾನಿಯಾಗಿದೆ. ಅನೇಕ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಜಜ್ರಾ ಬಳಿ ಪರ್ವಾಲ್ ಗ್ರಾಮದಲ್ಲಿ ಅಸನ್ ನದಿ ಉಕ್ಕೇರಿದ್ದರಿಂದ ಎಂಟು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಒಂದು ಟ್ರ್ಯಾಕ್ಟರ್, ಸ್ಕೂಟಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನಂದಾ ಕೀ ಚೌಕಿ ಸೇತುವೆ ಕೂಡ ಹಾನಿಗೊಳಗಾಗಿದೆ. ಭಾರಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡೆಹ್ರಾಡೂನ್ ಜಿಲ್ಲಾಧಿಕಾರಿ ಶಾಲಾ ಕಾಲೇಜು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ.
ಸಹಸ್ರಧಾರದ ಕಾಲಿಗಡ್ ಸಮೀಪ ಬಲವಾದ ಪ್ರವಾಹದೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದಿದ್ದು, ಅಲ್ಲಿದ್ದ 7ರಿಂದ 8 ಅಂಗಡಿಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇಲ್ಲೂ ಇಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕಾಣೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಡೆಹ್ರಾಡೂನ್‌ನಲ್ಲಿ, ಮೋಹನಿ ರಸ್ತೆ, ಪೂರನ್ ಬಸ್ತಿ, ಬಷೀರ್ ರಸ್ತೆ, ಭಗತ್ ಸಿಂಗ್ ಕಾಲೋನಿ, ಸಂಜಯ್ ಕಾಲೋನಿ ಮುಂತಾದ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಐಟಿ ಪಾರ್ಕ್ ಬಳಿ ಇತ್ತೀಚೆಗೆ ನಿರ್ಮಿಸಲಾದ ರಸ್ತೆಗೂ ಹಾನಿಯಾಗಿದೆ. ಅಪ್ಪರ್ ರಾಜೀವ್ ನಗರದ ಅಧೋಯಿವಾಲಾದಲ್ಲಿ ಟ್ರಾನ್ಸ್‌ಫರ್ಮರ್ ಕೊಚ್ಚಿಹೋಗಿದೆ. ಸೇತುವೆಯೊಂದಕ್ಕೂ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. ವಿವಿಧ ಪ್ರದೇಶಗಳಲ್ಲಿ ನೀರು ನಿಂತಿರುವ ಬಗ್ಗೆ ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ತಂಡಗಳು ಸ್ಥಳಕ್ಕೆ ತೆರಳಿವೆ.
