ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಪ್ರಧಾನಿ ಮೋದಿ ವಿರುದ್ಧ 'ವೋಟ್ ಚೋರ್, ಗದ್ದಿ ಛೋಡ್' ಎಂದು ಘೋಷಣೆ ಕೂಗಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ರಾಷ್ಟ್ರವಿರೋಧಿ ಶಕ್ತಿಗಳನ್ನು ಆಹ್ವಾನಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹೈದರಾಬಾದ್ (ನ.15): ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಪಕ್ಷಗಳು ವ್ಯಾಪಕವಾಗಿ ಬಳಸುತ್ತಿರುವ ‘ವೋಟ್ ಚೋರ್, ಗದ್ದಿ ಛೋಡ್’ (ಮತಗಳ್ಳ, ಕುರ್ಚಿ ಬಿಡು) ಘೋಷಣೆಯನ್ನು ಶನಿವಾರ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಹೇಳಿದ್ದಾರೆ. ವಿದೇಶಿ ಪ್ರಜೆಯೊಬ್ಬರು ನೀಡಿದ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ್ ಶೃಂಗಸಭೆ’ಯಲ್ಲಿ ಮಾತನಾಡಿದ ಯುರೋಪಿಯನ್ ಸೋಷಿಯಲಿಸ್ಟ್ ಪಾರ್ಟಿಯ (ಪಿಇಎಸ್) ಪ್ರಧಾನ ಕಾರ್ಯದರ್ಶಿ ಗಿಯಾಕೊಮೊ ಫಿಲಿಬೆಕ್, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ನಾವು ಅದನ್ನು ರಕ್ಷಿಸಿಕೊಳ್ಳಬೇಕು ಮತ್ತು ಅದನ್ನು ರಕ್ಷಿಸಲು ಉತ್ತಮ ಮಾರ್ಗವೆಂದರೆ ರಾಹುಲ್ ಗಾಂಧಿ ಮತ್ತು ಭಾರತೀಯ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದು’ ಎಂದಿದ್ದಾರೆ. ಇದೇ ವೇಳೆ ಮೋದಿಯವರನ್ನು ಉಲ್ಲೇಖಿಸಿ ‘ವೋಟ್ ಚೋರ್, ಗದ್ದಿ ಛೋಡ್’ ಎಂದಿದ್ದಾರೆ.
ಬಿಜೆಪಿ ಕಿಡಿ: ಇಟಲಿ ವ್ಯಕ್ತಿಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಮಿತಿಗಳನ್ನು ಮೀರಿ, ರಾಷ್ಟ್ರವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ. ಕಾಂಗ್ರೆಸ್ ದೇಶವಿರೋಧಿ ಶಕ್ತಿಗಳನ್ನು ಆಹ್ವಾನಿಸುತ್ತಿದೆ ಎಂದು ಆರೋಪಿಸಿದೆ.














