ಮಿರ್ಜಾಪುರ ಮೂಲದ ರಾಜ್‌ಕುಮಾರ್ ಮಿಶ್ರಾ ಲಂಡನ್‌ನ ಬೆಲ್ಲಿಂಗ್‌ಬರಿ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಯುಕೆಗೆ ತೆರಳಿದ್ದ ಎಂಜಿನಿಯರ್ ಮಿಶ್ರಾ, ಲೇಬರ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಸುದ್ದಿ ಅವರ ಹುಟ್ಟೂರಿನಲ್ಲಿ ಸಂಭ್ರಮ ಮೂಡಿಸಿದೆ. ಕುಟುಂಬ ಹೆಮ್ಮೆ ವ್ಯಕ್ತಪಡಿಸಿದೆ.
ನವದೆಹಲಿ (ಮೇ.16): ಎಲ್ಲಿಯ ಮಿರ್ಜಾಪುರ, ಎಲ್ಲಿಯ ಇಂಗ್ಲೆಂಡ್. ಆದರೆ, ಐದು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಯುಕೆಗೆ ತೆರಳಿದ್ದ ಮಿರ್ಜಾಪುರ ಮೂಲದ ರಾಜ್‌ಕುಮಾರ್ ಮಿಶ್ರಾ ಲಂಡನ್‌ನ ಬೆಲ್ಲಿಂಗ್‌ಬರಿ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದ ಭಟೆವ್ರಾ ಗ್ರಾಮದವರಾದ ಮಿಶ್ರಾ, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಪದವಿ ಪಡೆಯುವ ಸಲುವಾಗಿ ಲಂಡನ್‌ಗೆ ತೆರಳಿದ್ದರು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅವರು ಶಿಕ್ಷಣ ಮುಗಿಸಿದ ನಂತರ ಅಲ್ಲಿಯೇ ಉಳಿದು, ಉದ್ಯೋಗವನ್ನು ಕಂಡುಕೊಂಡಿದ್ದರು. ಕ್ರಮೇಣ ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
ಎರಡು ತಿಂಗಳ ಹಿಂದೆ ಅವರು ಲೇಬರ್ ಪಕ್ಷ ಸೇರಿ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ವಿಜಯ ಸಾಧಿಸಿದ್ದಾರೆ.ಏಪ್ರಿಲ್ 3 ರಂದು ಮಿಶ್ರಾ ಅವರನ್ನು ಕೌನ್ಸಿಲರ್ ಆಗಿ ಆಯ್ಕೆ ಮಾಡಲಾಗಿತ್ತು. ಕೇವಲ ಒಂದು ವಾರದ ನಂತರ, ಏಪ್ರಿಲ್ 12 ರಂದು, ಅವರನ್ನು ಬೆಲ್ಲಿಂಗ್ಬರಿಯ ಮೇಯರ್ ಆಗಿ ನಾಮನಿರ್ದೇಶನ ಮಾಡಲಾಯಿತಲ್ಲದೆ, ಪ್ರಮಾಣ ವಚನ ಸ್ವೀಕರಿಸಿದರು. ಲಂಡನ್‌ನಿಂದ ವೀಡಿಯೊ ಸಂದೇಶದಲ್ಲಿ, ಅವರು ಸುದ್ದಿಯನ್ನು ದೃಢಪಡಿಸಿದ್ದಲ್ಲದೆ, ತಮ್ಮ ಆಯ್ಕೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಅವರ ಹುಟ್ಟೂರು ಮಿರ್ಜಾಪುರದಲ್ಲಿ ಈ ಸುದ್ದಿ ಮಿಂಚಿನಂತೆ ಹರಡಿ ಸಂಭ್ರಮಾಚರಣೆಗೆ ಕಾರಣವಾಗಿದೆ. ಹೆಮ್ಮೆಯಲ್ಲೇ ಮುಳುಗಿದ್ದ ಅವರ ಕುಟುಂಬವು, ರಾಜ್‌ಕುಮಾರ್ ಒಂದು ಸಣ್ಣ ಹಳ್ಳಿಯಿಂದ ವಿದೇಶದಲ್ಲಿ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸುವವರೆಗಿನ ಅವರ ಪ್ರಯಾಣವು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಸ್ಥಳೀಯ ರೈತ ಮುನ್ನಾ ಲಾಲ್ ಮಿಶ್ರಾ ಅವರ ಕುಟುಂಬದ ಒಂಬತ್ತು ಒಡಹುಟ್ಟಿದವರಲ್ಲಿ ರಾಜ್‌ಕುಮಾರ್ ಆರನೆಯವರು. ಅವರು ಯುಕೆಗೆ ಹೋಗುವ ಮೊದಲು ಚಂಡೀಗಢದಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದರು. ರಾಜ್‌ಕುಮಾರ್ ಮಿಶ್ರಾ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದು, ಅಲ್ಯೇಲಿ ಶಾಶ್ವತವಾಗಿ ನೆಲೆಸಲು ಆಯ್ಕೆ ಮಾಡಿಕೊಂಡರು ಎಂದು ಅವರ ಸಹೋದರ ಸುಶೀಲ್ ಕುಮಾರ್ ಮಿಶ್ರಾ ಹೇಳಿದ್ದಾರೆ.
"ಆತ ಉನ್ನತ ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗಿದ್ದ. ಈಗ ಅವರು ಮೇಯರ್ ಆಗಿ ಆಯ್ಕೆಯಾದ ಸುದ್ದಿ ನಮಗೆ ಬಂದಿದೆ. ಇದು ಹೆಮ್ಮೆಯ ಕ್ಷಣ." ಎಂದು ರಾಜ್‌ಕುಮಾರ್ ಮಿಶ್ರಾ ಅವರ ತಂದೆ ರೈತ ಮುನ್ನಾ ಲಾಲ್ ಮಿಶ್ರಾ ಹೇಳಿದ್ದಾರೆ. ರಾಜ್‌ಕುಮಾರ್ ಮಿಶ್ರಾ ಪ್ರತಾಪ್‌ಗಢದ ಅಭಿಷೇಕ್ತಾ ಮಿಶ್ರಾ ಅವರನ್ನು ವಿವಾಹವಾಗಿದ್ದು, ಅವರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಈಗ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.
ಪ್ರಮಾಣವಚನ ಸ್ವೀಕಾರದ ನಂತರ ರಾಜ್‌ಕುಮಾರ್ ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ, "ನಾನು ಮಿರ್ಜಾಪುರದ ಭಟೆವ್ರಾದವನು. ಮೇಯರ್ ಆಗಿ ಆಯ್ಕೆಯಾಗಿರುವುದು ಅಪಾರ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ" ಎಂದು ಹೇಳಿದರು.


