ಉದಯನಿಧಿ ಸ್ಟ್ಯಾಲಿನ್‌ ಅವರ ಹೇಳಿಕೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದಿ ಕಾಲದಿಂದಲೂ ಸಾಧ್ಯವಾಗದೇ ಇರೋದನ್ನ ಇವರು ಮಾಡಲು ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ. 

ನವದೆಹಲಿ (ಸೆ.7): ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದ ದಿನದಿಂದಲೂ ವ್ಯಾಪಕವಾಗಿ ದೇಶದಲ್ಲಿ ಇದರ ಬಗ್ಗೆ ಚರ್ಚೆಯಾಗಿದೆ. ಇದರ ಬೆನ್ನಲ್ಲಿಯೇ ಡಿಎಂಕೆಯ ಮತ್ತೊಬ್ಬ ನಾಯಕ ಎ.ರಾಜಾ ಕೂಡ ಇಂಥದ್ದೇ ಹೇಳಿಕೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತನಾಡಿದ್ದು, ಸನಾತನ ಧರ್ಮದ ಬಗ್ಗೆ ಪ್ರಶ್ನೆ ಮಾಡಿದ ವ್ಯಕ್ತಿಗಳನ್ನು ಟೀಕಿಸಿದ್ದಾರೆ. ಇಡೀ ದೇಶವೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸರ್ಕಾರವನ್ನು ಟೀಕಿಸಲು ಅವರಿಗೆ ಬೇರೆ ಯಾವ ವಿಚಾರಗಳೂ ಸಿಗುತ್ತಿಲ್ಲ. ಅದಕ್ಕಾಗಿ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ದೇಶ ಅಭಿವೃದ್ಧಿ ಆಗುತ್ತಿದ್ದರೆ, ಕೆಲವರಿಗೆ ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಸರಕಾರದ ಸಾಧನೆಗಳನ್ನು ದುರ್ಬಲಗೊಳಿಸಲು ಸನಾತನ ಧರ್ಮದ ವಿಚಾರವನ್ನು ಬೊಟ್ಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದರು. ಆದರೆ ರಾವಣನ ದುರಹಂಕಾರದಿಂದಲೂ ಬಾಬರ್ ಮತ್ತು ಔರಂಗಜೇಬನ ಕ್ರೌರ್ಯಗಳಿಂದಲೂ ಸನಾತನವನ್ನು ಅಳಿಸಲು ಸಾಧ್ಯವಾಗಿಲ್ಲ ಅನ್ನೋದನ್ನು ವಿರೋಧಿಸುವವರು ಮರೆತಿದ್ದಾರೆ. ಹೀಗಿರುವಾಗ ಈ ಕ್ಷುಲ್ಲಕರಿಗೆ ಸನಾತನವನ್ನು ಹೇಗೆ ನಾಶ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಜಗತ್ತಿನಲ್ಲಿ ಒಂದು ಸತ್ಯವಿದೆ. ಜನರು ತಮ್ಮ ಮೂರ್ಖತನದಿಂದ ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಉಗುಳು ತಮ್ಮ ಮೇಲೆ ಬೀಳುತ್ತದೆ ಎಂದು ಅವರಿಗೆ ತಿಳಿದಿಲ್ಲ. ರಾವಣ, ಹಿರಣ್ಯಕಶ್ಯಪ ಮತ್ತು ಕಂಸನಂಥವರು ದೈವಿಕ ಶಕ್ತಿಗೆ ಸವಾಲು ಹಾಕಿದ್ದರು. ಕೊನೆಗೆ ಅವರು ಎಲ್ಲವನ್ನೂ ಕಳೆದುಕೊಂಡರು. ಅವರ ಪಾಲಿಗೆ ಏನೂ ಉಳಿಯಲಿಲ್ಲ. ಆದರೆ, ಸನಾತನ ಧರ್ಮದ ದೇವರು ಉಳಿದುಕೊಂಡಿದ್ದಾನೆ ಮತ್ತು ಈಗಲೂ ಇದ್ದಾನೆ.ಸನಾತನ ಧರ್ಮವು ಸತ್ಯವಾಗಿದೆ ಮತ್ತು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದರು. ಉತ್ತರ ಪ್ರದೇಶ ಉತ್ತಮ ರಾಜ್ಯಗಳಲ್ಲಿ ಒಂದಾಗಿದೆ ಎಂದು ಯೋಗಿ ಹೇಳಿದರು. ಇದು ದೇವರ ಕೃಪೆ. ಸನಾತನ ಧರ್ಮ ಎದ್ದು ನಿಂತಾಗ ಅಯೋಧ್ಯೆ ಮತ್ತು ಕಾಶಿಯಲ್ಲಿ ರಾಮಮಂದಿರ ಏಳುತ್ತದೆ ಮತ್ತು ಈ ನಗರಗಳು ಬೆಳೆಯುತ್ತಲೇ ಇರುತ್ತದೆ ಎಂದಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಸನಾತನ ಧರ್ಮ ಕುರಿತು ಚರ್ಚೆ ಆರಂಭವಾಗಿದೆ. ಸನಾತನ ಧರ್ಮವನ್ನು ಕೇವಲ ವಿರೋಧಿಸಬಾರದು ಅದನ್ನೂ ಸಂಪುರ್ಣವಾಗಿ ನಿರ್ಮೂಲನೇ ಮಾಡಬೇಕು ಎಂದು ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಉದಯನಿಧಿ ಹೇಳಿದ್ದರು. ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ಅಳಿಸಬೇಕು. ಹಾಗೆಯೇ ನಾವು ಸನಾತನವನ್ನೂ ನಾಶಪಡಿಸಬೇಕು ಎಂದಿದ್ದರು.

ಸ್ಟ್ಯಾಲಿನ್‌, ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಚೆನ್ನೈ ಪೊಲೀಸರಿಗೂ ಬಂತು ಕುತ್ತು!

ಸನಾತನ ಧರ್ಮ ವಿವಾದ ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಕಟ್ಟುನಿಟ್ಟಿನ ಪ್ರತಿಕ್ರಿಯೆ ನೀಡುವಂತೆ ಕೋರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಚಿವರೊಂದಿಗೆ ಸಭೆ ನಡೆಸಿದ್ದರು, ಈ ವೇಳೆ ಸನಾತನ ಧರ್ಮದ ಕುರಿತು ಉದಯನಿಧಿ ಅವರ ಹೇಳಿಕೆಗೆ ಸರಿಯಾಗಿ (ವಾಸ್ತವಗಳೊಂದಿಗೆ) ಪ್ರತಿಕ್ರಿಯಿಸುವಂತೆ ಎನ್‌ಡಿಎ ಮಂತ್ರಿಗಳಿಗೆ ಪಿಎಂ ಮೋದಿ ಕೇಳಿದ್ದರು.

ಸನಾತನ ಧರ್ಮ ಡೆಂಘೀ, ಮಲೇರಿಯಾವಲ್ಲ, ಏಡ್ಸ್ ರೋಗಿವಿದ್ದಂತೆ: ಎ. ರಾಜಾ

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ತಮ್ಮ ಪುತ್ರನ ಹೇಳಿಕೆಯ ನಂತರ ಪುತ್ರ ಉದಯನಿಧಿಯನ್ನು ಸಮರ್ಥಿಸಿಕೊಂಡಿದ್ದಾರೆ. ಉದಯನಿಧಿ ಹೇಳಿಕೆಯನ್ನು ಬೆಂಬಲಿಸಿರುವ ಎಂಕೆ ಸ್ಟಾಲಿನ್, ಬಿಜೆಪಿ ಪರ ಶಕ್ತಿಗಳು ದಬ್ಬಾಳಿಕೆಯ ತತ್ವಗಳ ವಿರುದ್ಧದ ನಿಲುವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಸನಾತನ ಚಿಂತನೆಯುಳ್ಳ ಜನರ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದಿದ್ದರು.