ಮದ್ವೆಯಾದದ 2 ವರ್ಷಕ್ಕೆ ಡಿವೋರ್ಸ್, 9 ಕಿ.ಮೀ ಉದ್ಧಂಡ ಯಾತ್ರೆ ಮೂಲಕ ಹರಕೆ ತೀರಿಸಿದ ವ್ಯಕ್ತಿ, ಪತ್ನಿಯಿಂದ ಮುಕ್ತಿ ಪಡೆದರೆ ರಸ್ತೆಯಲ್ಲಿ 9 ಕಿಲೋಮೀಟರ್ ಉದ್ದಂಡ ನಮಸ್ಕಾರ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದ. 

ಲಖನೌ(ಮಾ.30) ಮದುವೆಯಾಗಿ ಸಂಸಾರ ಚೆನ್ನಾಗಿರಲು, ಯಾವುದೇ ಸಮಸ್ಯೆಗಳು ಬರದಂತೆ ಕಾಪಾಡಲು ದೇವರ ಮೊರೆ ಹೋಗುವುದು, ಪೂಜೆ, ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತ್ನಿಯಿಂದ ಮುಕ್ತಿ ಕೊಟ್ಟರೆ 9 ಕಿಲೋಮೀಟರ್ ಉದ್ದಂಡ ನಮಸ್ಕಾರ ಹಾಗುತ್ತೇನೆ ಎಂದು ಹರಕೆ ಹೊತ್ತಿದ್ದ. ಇದರಂತೆ ಕಾನೂನಿನ ಅಡಿಯಲ್ಲಿ ಈತ ವಿಚ್ಚೇದನ ಪಡೆದ ಬೆನ್ನಲ್ಲೇ ದೇವರಿಗೆ ನೀಡಿದ ಹರಕೆ ಮಾತನ್ನು ಈಡೇರಿಸಿದ್ದಾನೆ. ಇದೀಗ ಈ ಹರಕೆ ಭಾರಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬಸ್ತಿಯಲ್ಲಿ.

ಯೋಗೇಶ್ ಅನ್ನೋ ಯುವಕ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಮದುವೆಯಾದ ಆರಂಭದಲ್ಲೇ ಮನಸ್ತಾಪಗಳು ಎದುರಾಗಿತ್ತು. ಮನಸ್ತಾಪ ತೀವ್ರಗೊಂಡಿತ್ತು. ಜಗಳ ನಿತ್ಯವಾಗಿತ್ತು. ಹಲವು ಮಾತುಕತೆ, ಸಂಧಾನಗಳು ನಡೆದಿದೆ. ಆದರೂ ಪ್ರಯೋಜನವಾಗಲಿಲ್ಲ. ಯೋಗೇಶ್ ಸಮಸ್ಯೆಗಳು ತೀವ್ರಗೊಂಡಿತ್ತು. ಹೇಗೋ ಒಂದು ವರ್ಷ ಸಂಸಾರ ನಡೆಸಿದರೂ ಒಂದು ದಿನ ಇಬ್ಬರಿಗೂ ನೆಮ್ಮದಿ ಇರಲಿಲ್ಲ. ಡಿವೋರ್ಸ್ ಅರ್ಜಿ ಸಲ್ಲಿಸಿದರೆ ಜೀವನಾಂಶ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ಹೀಗಾಗಿ ಇರೋ ಸಮಸ್ಯೆಗಳು ಮತ್ತಷ್ಟು ಜಟಿವಾಗಲಿದೆ ಎಂದು ಪರಿತಪಿಸಿದ್ದ.

ದೇವರ ಮೊರೆ ಹೋದ ಯೋಗೇಶ್

ಭಾನುಪುರದಲ್ಲಿರುವ ಬಾದ್ವಾ ಮಾತಾ ದೇವಸ್ಥಾನಕ್ಕೆ ತೆರಳಿದ ಯೋಗೇಶ್ ತನ್ನನ್ನು ಪತ್ನಿಯಿಂದ ಮಾನಸಿಕ ಕಿರುಕುಳದಿಂದ ಮುಕ್ತಿಕೊಡಿಸಿದರೆ ದಂಡಾವತ ಯಾತ್ರೆ ಮಾಡುವುದಾಗಿ ಹರಕೆ ಹೊತ್ತಿದ್ದಾನೆ. ಈ ತೀವ್ರ ಕಿರಿಕುಳದಿಂದ ಮುಕ್ತಿ ಪಡೆದರೆ ಮನೆಯಿಂದ ದೇವಸ್ಥಾನವರೆಗೆ ಉದ್ಧಂಡ ನಮಸ್ಕಾರ ಹಾಕುತ್ತಾ ದರ್ಶನಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದ. ಹೀಗೆ ಹರಕೆ ಹೊತ್ತ ಕೆಲವೇ ದಿನಗಳಲ್ಲಿ ಮಹತ್ವದ ಬೆಳವಣಿಗೆ ನಡೆದಿತ್ತು

ತವರು ಮನೆಗೆ ಹೋದ ಪತ್ನಿ

ಹರಕೆ ಹೊತ್ತ ಕೆಲ ದಿನಗಳಲ್ಲೇ ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಪತ್ನಿ ಮರಳಿ ಮನೆಗೆ ಬರಲಿಲ್ಲ. ಪತ್ನಿಯ ಪೋಷಕರು ಕರೆ ಮಾಡಿ ಸಮಸ್ಯೆ ತೀವ್ರಗೊಂಡಿದೆ. ಮುಂದೇನು ಎಂದು ಮಾತನಾಡಿದ್ದಾರೆ. ಈ ಮಾತುಕತೆ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಸಲ್ಲಿಸಲು ಮುಂದಾಗಿದ್ದಾರೆ. ಇದರಂತೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಇದರಿಂದ ಕೆಲವೇ ತಿಂಗಳಲ್ಲಿ ಕೋರ್ಟ್ ಡಿವೋರ್ಸ್ ನೀಡಿದೆ.

ಡಿವೋರ್ಸ್ ಸಿಕ್ಕ ದಿನವೇ ಹರಕೆ ತೀರಿಸಿದ ಯೋಗೇಶ್

ಕೋರ್ಟ್ ಡಿವೋರ್ಸ್ ನೀಡುತ್ತಿದ್ದಂತೆ ಅದೇ ದಿನ ಮನೆಯಿಂದ ಬಾದ್ವಾ ಮಾತಾ ದೇವಸ್ಥಾನವರೆಗೆ ಉದ್ಧಂಡ ನಮಸ್ಕಾರ ಹಾಗುತ್ತಾ ಸಾಗಿದ್ದಾನೆ. ಯೋಗೇಶ್ ಕುಟುಂಬಸ್ಥರು, ಆಪ್ತರು ಸಾಥ್ ನೀಡಿದ್ದಾರೆ. ದಾರಿಯುದ್ಧಕ್ಕೂ ಉದ್ಧಂಡ ನಮಸ್ಕಾರ ಹಾಕುತ್ತಾ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ನಿರಾಳನಾಗಿದ್ದಾನೆ. ಈತನ ಹರಕೆಯಿಂದ ಇದೀಗ ಬಾದ್ವಾ ಮಾತಾ ದೇವಸ್ಥಾನ ಭಾರಿ ಚರ್ಚೆಯಾಗುತ್ತಿದೆ.