ಮಹಾರಾಷ್ಟ್ರದಲ್ಲಿ ರಕ್ಷಿಸಲ್ಪಟ್ಟ 'ಧವಳಲಕ್ಷ್ಮಿ' ಎಂಬ ಆಲಿವ್ ರಿಡ್ಲಿ ಆಮೆಯು, ಸ್ಯಾಟಲೈಟ್ ಟ್ಯಾಗ್ ಮೂಲಕ 3500 ಕಿ.ಮೀ. ಪ್ರಯಾಣಿಸಿ ಓಮನ್‌ನ ಮಸೀರಾ ದ್ವೀಪ ತಲುಪಿತ್ತು. ಇದೀಗ ಈ ಆಮೆಯು ಮರಳಿ ಭಾರತದ ಕರಾವಳಿಗೆ ಬಂದು ಕಾರವಾರದ ಸಮುದ್ರ ತೀರದಲ್ಲಿ ಬೀಡುಬಿಟ್ಟಿದೆ.
ಕಾರವಾರ (ಜೂ.3): ಮಹಾರಾಷ್ಟ್ರದ ಕರಾವಳಿಯಿಂದ ಹೊರಟ ಆಲಿವ್ ರಿಡ್ಲಿ ಪ್ರಭೇದದ ಹೆಣ್ಣು ಆಮೆ ಬರೋಬ್ಬರಿ 3500 ಕಿ.ಮೀ. ಪ್ರಯಾಣ ಬೆಳೆಸಿ ಓಮನ್ ದೇಶದ ಸಮೀಪವಿರುವ ಮಸೀರಾ ದ್ವೀಪದವರೆಗೂ ತಲುಪಿ ಮತ್ತೆ ಕಾರವಾರದ ಕಡಲತೀರ ತಲುಪಿದೆ.
2025ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ದಹಾನು ಕರಾವಳಿಯಲ್ಲಿ ಆಲಿವ್ ರಿಡ್ಲಿ ಪ್ರಭೇದದ ಹೆಣ್ಣು ಆಮೆ ಮೀನುಗಾರರ ಬಲೆಗೆ ಬಿದ್ದಿತ್ತು. ಈ ಆಮೆಯನ್ನು ವಿಜ್ಞಾನಿಗಳು ರಕ್ಷಿಸಿ ಧವಳಲಕ್ಷ್ಮಿ ಎಂದು ನಾಮಕರಣ ಮಾಡಿದ್ದರು. ಆಮೆಯ ಚಲನವಲನ ಅಧ್ಯಯನಕ್ಕಾಗಿ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವಿಜ್ಞಾನಿ ಸುರೇಶ್, ಮಹಾರಾಷ್ಟ್ರ ಮ್ಯಾಂಗ್ರೋವ್ ಫೌಂಡೇಶನ್ ತಂತ್ರಜ್ಞರ ತಂಡ ಆಮೆ ಬೆನ್ನಿಗೆ ಸ್ಯಾಟಲೈಟ್ ಡಿವೈಸ್ ಅಳವಡಿಸಿ ಸಮುದ್ರಕ್ಕೆ ಬಿಟ್ಟಿದ್ದರು.
ಮಹಾರಾಷ್ಟ್ರ ತಂಡ ಆಮೆಯ ಓಡಾಟವನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿತ್ತು. ಆಮೆಯು ಮಹಾರಾಷ್ಟ್ರ ಕರಾವಳಿಯಿಂದ ಪಶ್ಚಿಮಕ್ಕೆ ಆಳ ಸಮುದ್ರವನ್ನು ದಾಟಿ, ಓಮನ್ ಸಮೀಪವಿರುವ ಮಸೀರಾ ದ್ವೀಪದವರೆಗೂ ತಲುಪಿತ್ತು. ಅಲ್ಲಿಂದ ಮರಳಿ ಭಾರತದತ್ತ ಪ್ರಯಾಣ ಬೆಳೆಸಿದ ಈ ಆಮೆ ಕೇರಳ, ಮುರುಡೇಶ್ವರ ಸೇರಿ ವಿವಿಧ ಕಡಲತೀರಗಳಲ್ಲಿ ಓಡಾಟ ನಡೆಸಿ, ಸದ್ಯ ಕಾರವಾರದ ಕಾಂಟಿನೆಂಟಲ್ ಶೆಲ್ಫ್ ಬ್ರೇಕರ್ ಪ್ರದೇಶದಲ್ಲಿ ಬೀಡುಬಿಟ್ಟಿದೆ.
ಕಾರವಾರದ ಸಾಗರ ವಿಜ್ಞಾನಿ ಡಾ। ಶಿವಕುಮಾರ ಹರಗಿ ಮಾತನಾಡಿ, ಆಮೆಗಳು ಎಲ್ಲಿಗೇ ಹೋದರೂ, ಕೊನೆಗೆ ತಾವು ಮೊಟ್ಟೆಯೊಡೆದು ಬಂದ ಮೂಲ ಸ್ಥಾನಕ್ಕೇ ಮರಳುತ್ತವೆ ಎಂದು ವಿವರಿಸಿದ್ದಾರೆ.

