ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ, 14 ವರ್ಷದ ಬಾಲಕನೊಬ್ಬ ಸೇಡು ತೀರಿಸಿಕೊಳ್ಳಲು 7 ವರ್ಷದ ಮಗುವಿಗೆ ಜಾನುವಾರುಗಳಿಗೆ ಬಳಸುವ ಆಕ್ಸಿಟೋಸಿನ್ ಇಂಜೆಕ್ಷನ್ ಚುಚ್ಚಿ ಕೊಂದಿದ್ದಾನೆ. ದೌರ್ಜನ್ಯ ಯತ್ನವನ್ನು ತಡೆದಿದ್ದಕ್ಕೆ ಹಗೆತನ ಸಾಧಿಸಿ ಈ ಕೃತ್ಯ ಎಸಗಿದ್ದಾನೆ.
ಬಿಜ್ನೋರ್, ಉತ್ತರ ಪ್ರದೇಶ (ಜೂ.29): ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಅದಕ್ಕೆ ಸೇಡು ತೀರಿಸಿಕೊಳ್ಳಲು 14 ವರ್ಷದ ಅಪ್ರಾಪ್ತ ಬಾಲಕನೊಬ್ಬ 7 ವರ್ಷದ ಮುಗ್ಧ ಮಗುವಿಗೆ ಜಾನುವಾರುಗಳಿಗೆ ಬಳಸುವ ಅಪಾಯಕಾರಿ ಇಂಜೆಕ್ಷನ್ ಚುಚ್ಚಿ ಭೀಕರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಬೆಳಕಿಗೆ ಬಂದಿದೆ. ಹಸು-ಎಮ್ಮೆಗಳಿಂದ ಹೆಚ್ಚು ಹಾಲು ಕರೆಯಲು ಗ್ರಾಮೀಣ ಭಾಗದಲ್ಲಿ ಬಳಸಲಾಗುವ 'ಆಕ್ಸಿಟೋಸಿನ್' (Oxytocin) ಇಂಜೆಕ್ಷನ್ ಅನ್ನು ಮಗುವಿಗೆ ಬಲವಂತವಾಗಿ ಚುಚ್ಚಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೀರತ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಮೃತ ಬಾಲಕನ ತಂದೆ ಪೊಲೀಸರಿಗೆ ನೀಡಿರುವ ಅಧಿಕೃತ ದೂರಿನ ಪ್ರಕಾರ, ಜೂನ್ 25 ರಂದು ಅವರ 13 ವರ್ಷದ ಮಗಳು ಬಿಜ್ನೋರ್‌ನ ಮದ್ರಸಾದಿಂದ ಮನೆಗೆ ವಾಪಸ್ ಬರುತ್ತಿದ್ದಾಗ ಹಾದಿಯಲ್ಲಿ ಈ 14 ವರ್ಷದ ಬಾಲಕ ಆಕೆಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಬಾಲಕಿಯ ತಾಯಿ ಮತ್ತು ಆಕೆಯ 7 ವರ್ಷದ ತಮ್ಮ (ಮೃತ ಬಾಲಕ) ತಕ್ಷಣ ಸ್ಥಳಕ್ಕೆ ಧಾವಿಸಿ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ. ತನಗೆ ಬುದ್ಧಿ ಕಲಿಸಲು ಬಂದ ಇಡೀ ಕುಟುಂಬದ ಮೇಲೆ ಆ ಬಾಲಕ ಅಂದೇ ಹಗೆತನ ಸಾಧಿಸಿದ್ದಾನೆ.
ಮನೆಗೆ ಎಳೆದೊಯ್ದು ಇಂಜೆಕ್ಷನ್ ಚುಚ್ಚಿದ ಕಿರಾತಕ
ತನ್ನ ಮೇಲಿನ ದೌರ್ಜನ್ಯದ ಆರೋಪದಿಂದ ತೀವ್ರ ಕೆರಳಿದ 14 ವರ್ಷದ ಆರೋಪಿ ಬಾಲಕ, ಜೂನ್ 26 ರ ಸಂಜೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದಾನೆ. ಒಂಟಿಯಾಗಿ ಸಿಕ್ಕ 7 ವರ್ಷದ ಬಾಲಕನನ್ನು ಬಲವಂತವಾಗಿ ತಳ್ಳುತ್ತಾ ತನ್ನ ಮನೆಗೆ ಎಳೆದೊಯ್ದಿದ್ದಾನೆ. ಅಲ್ಲಿ ಗ್ರಾಮೀಣ ಭಾಗದಲ್ಲಿ ದನಕರುಗಳಿಗೆ ಬಳಸಲೆಂದು ಇಟ್ಟಿದ್ದ 'ಆಕ್ಸಿಟೋಸಿನ್' ದ್ರವ ತುಂಬಿದ್ದ ಸಿರಿಂಜ್ ಅನ್ನು ಆ ಮಗುವಿನ ದೇಹಕ್ಕೆ ಬಲವಂತವಾಗಿ ಚುಚ್ಚಿದ್ದಾನೆ.
ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ಇಂಜೆಕ್ಷನ್ ಚುಚ್ಚಿದ ತಕ್ಷಣವೇ ಮಗುವಿನ ದೇಹದಲ್ಲಿ ಯಾವುದೇ ತಕ್ಷಣದ ಆರೋಗ್ಯ ಸಮಸ್ಯೆ ಅಥವಾ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ, ಮರುದಿನ (ಜೂನ್ 27) ಮುಂಜಾನೆಯಿಂದ ಮಗುವಿಗೆ ಇಡೀ ದೇಹದಲ್ಲಿ ತೀವ್ರವಾದ ನರಗಳ ಸೆಳೆತ ಮತ್ತು ಮೂರ್ಛೆ ರೋಗದಂತಹ ಭೀಕರ ದೈಹಿಕ ನೋವು (Body Cramps) ಕಾಣಿಸಿಕೊಂಡಿದೆ.
ಇದರಿಂದ ಗಾಬರಿಯಾದ ಪೋಷಕರು ಮೊದಲು ಮಗುವನ್ನು ಸ್ಥಳೀಯ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಪರಿಸರ ಸುಧಾರಿಸದಿದ್ದಾಗ ತಕ್ಷಣವೇ ಬಿಜ್ನೋರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಷಕಾರಿ ಇಂಜೆಕ್ಷನ್ ದೇಹದಾದ್ಯಂತ ಹರಡಿ ಮಗುವಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಮೀರತ್‌ನ ಸೂಪರ್‌ಸ್ಪೆಷಾಲಿಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿದೆ.
ಪೋಸ್ಟ್‌ಮಾರ್ಟಮ್ ವರದಿ ಬಳಿಕ ಮುಂದಿನ ಕ್ರಮ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಜ್ನೋರ್ ವೃತ್ತ ಪೊಲೀಸ್ ಅಧಿಕಾರಿ (Circle Officer) ಅಭಯ್ ಕುಮಾರ್ ಪಾಂಡೆ, "ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಮಗುವಿನ ಸಾವಿಗೆ ದೇಹ ಸೇರಿದ ಆಕ್ಸಿಟೋಸಿನ್ ಇಂಜೆಕ್ಷನ್ ಎಷ್ಟು ಕಾರಣ ಮತ್ತು ಅದರ ನಿಖರವಾದ ವೈದ್ಯಕೀಯ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ (Postmortem Report) ವರದಿ ಕೈ ಸೇರಿದ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಲಿದೆ" ಎಂದು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕನ ಈ ಕ್ರೌರ್ಯ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.


