ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ವಿವಿಯ ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಆಹ್ವಾನಿಸಿದ್ದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ (ಆ.10): ಇಲ್ಲಿನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ವಿವಿಯ ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಆಮಂತ್ರಿಸಿದ್ದಕ್ಕೆ ಕೆಲವು ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇತ್ತೀಚೆಗೆ ಕಾಕ್ರೋಚ್‌ ಪಾರ್ಟಿ (ಸಿಜೆಪಿ) ಪ್ರತಿಭಟನಾಕಾರರ ಮೇಲಿನ ಹಿಂಸೆಯ ಪ್ರಕರಣವನ್ನು ಸಿಜೆಐ ನಿರ್ವಹಿಸಿದ ರೀತಿ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ದಿಲ್ಲಿ ಪ್ರತಿಭಟನೆ ವೇಳೆ ಉಗ್ರ ದಾಳಿಗೆ ಪಾಕಿಸ್ತಾನದ ಸಂಚು, ಅಗತ್ಯ ವಸ್ತು ಸಂಗ್ರಹಿಸಿ ದೆಹಲಿಗೆ ತೆರಳಿದ್ದ ತಂಡ!

ಸಿಜೆಪಿ ಪ್ರಕರಣ ನಿಭಾಯಿಸಿದ ರೀತಿಗೆ ಅಸಮಾಧಾನ

ವಿವಿಯ 2026ನೇ ಸಾಲಿನ ಘಟಿಕೋತ್ಸವಕ್ಕೆ ಸಿಜೆಐ ಆಮಂತ್ರಣವನ್ನು ವಿರೋಧಿಸಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸಹಿ ಸಂಗ್ರಹ ಮಾಡಿದ್ದಾರೆ. ಇದನ್ನು ಉಪಕುಲಪತಿ, ರಿಜಿಸ್ಟ್ರಾರ್‌, ಪ್ರಾಧ್ಯಾಪಕರು ಮತ್ತು ವಿವಿಯ ಇತರ ಅಧಿಕಾರಿಗಳಿಗೆ ಸಲ್ಲಿಸಿದ್ದು, ‘ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯದ ವಿಡಿಯೋ ನೋಡುವಂತೆ ಮನವಿ ಮಾಡಿದಾಗ, ಅದಕ್ಕೆಲ್ಲ ಸಮಯವಿಲ್ಲ ಎಂದು ಸಿಜೆಐ ಹೇಳಿದ್ದರು. ಅಲ್ಲದೆ ಯುವಕರನ್ನು ಜಿರಳೆಗಳು ಎಂದು ಕರೆದಿದ್ದರು. ಹಾಗಾಗಿ ಅವರನ್ನು ಅತಿಥಿಯಾಗಿ ಕರೆಯಬಾರದು’ ಎಂದು ಒತ್ತಾಯಿಸಿದ್ದಾರೆ.