ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಭಾವಿ ಪತ್ನಿ ಹಾಗೂ ಆಕೆಯ ಪ್ರೇಮಿಯಿಂದ ಕೊಲೆಯಾದ ಕೇತನ್ ಅಗರ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೃತನ ಕುಟುಂಬಕ್ಕೆ ನ್ಯಾಯದ ಭರವಸೆ ನೀಡಿದ್ದಾರೆ. 

ಪುಣೆ (ಜೂ.26): ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಢ ಕೋಟೆಯಿಂದ (Lohagad Fort) ಭಾವಿ ಪತ್ನಿ ಹಾಗೂ ಆಕೆಯ ಪ್ರೇಮಿ ಸೇರಿ ಯುವಕನನ್ನು ಪ್ರಪಾತಕ್ಕೆ ತಳ್ಳಿ ಕೊ* ಮಾಡಿದ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಮೃತ ಯುವಕ ಕೇತನ್ ಅಗರ್ವಾಲ್ ಅವರ ಕುಟುಂಬಸ್ಥರನ್ನು ಭೇಟಿಯಾದ ಮುಖ್ಯಮಂತ್ರಿಗಳು, ಈ ಭೀಕರ ಕೃತ್ಯ ಎಸಗಿದ ತಪ್ಪಿತಸ್ಥರಿಗೆ ಕಾನೂನಿನಡಿಯಲ್ಲಿ "ಅತ್ಯಂತ ಕಠಿಣ ಶಿಕ್ಷೆ" ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ, ದೇಶದ ಅತ್ಯಂತ ಪ್ರಸಿದ್ಧ ಹಿರಿಯ ವಕೀಲರಾದ ಉಜ್ವಲ್ ನಿಕಮ್ ಅವರನ್ನು ಈ ಪ್ರಕರಣದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ (Special Public Prosecutor) ನೇಮಕ ಮಾಡಬೇಕೆಂಬ ಕುಟುಂಬದ ಮನವಿಯನ್ನು ತಕ್ಷಣವೇ ಪುರಸ್ಕರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

26/11 ಮುಂಬೈ ದಾಳಿ ಪ್ರಕರಣದ ವಕೀಲ ಉಜ್ವಲ್ ನಿಕಮ್ ಎಂಟ್ರಿ!

ಈ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸಲು ವಿಶೇಷ ಆಸಕ್ತಿ ತೋರಲಾಗಿದ್ದು, ಮುಂಬೈ 26/11 ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿ ಉಗ್ರ ಕಸಬ್‌ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇಶದ ಖ್ಯಾತ ಹಿರಿಯ ವಕೀಲ ಉಜ್ವಲ್ ನಿಕಮ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಲು ಸಿಎಂ ಆದೇಶಿಸಿದ್ದಾರೆ. ದೇಶದ ಹಲವು ಹೈಪ್ರೊಫೈಲ್ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಉಜ್ವಲ್ ನಿಕಮ್ ಅವರು ಕೂಡ ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾಗಿ ಕೆಲಸ ಮಾಡಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ (CMO) ಸಾಮಾಜಿಕ ಜಾಲತಾಣ 'X' ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮೃತ ಕೇತನ್ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್ ಅವರು ಶುಕ್ರವಾರ ಪುಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಣ್ಣೀರಿಡುತ್ತಾ ವಿನಂತಿಸಿಕೊಂಡರು.

ಇದಕ್ಕೆ ಸ್ಪಂದಿಸಿದ ಸಿಎಂ, "ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಶ್ರಮಿಸಲಿದೆ" ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಪ್ರಕರಣದ ತ್ವರಿತ ವಿಚಾರಣೆಗಾಗಿ ವಿಶೇಷ 'ಫಾಸ್ಟ್ ಟ್ರ್ಯಾಕ್ ಕೋರ್ಟ್' (Fast-track Court) ಸ್ಥಾಪಿಸುವಂತೆ ಮತ್ತು ಉಜ್ವಲ್ ನಿಕಮ್ ಅವರನ್ನು ನೇಮಿಸುವಂತೆ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿಗೆ ತಕ್ಷಣವೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಪ್ರೇಮಿಯ ಜೊತೆ ಸೇರಿ ಭಾವಿ ಪತಿಯನ್ನೇ ಕೊಂದ ಯುವತಿ!

ಜೂನ್ 18 ರಂದು ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಲೋಹಗಢ ಕೋಟೆಯ ಪ್ರಪಾತಕ್ಕೆ ತಳ್ಳಿ ಕೇತನ್ ಅಗರ್ವಾಲ್ ಅವರನ್ನು ಭೀಕರವಾಗಿ ಕೊ* ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಮೃತ ಕೇತನ್ ಮತ್ತು ಸಿಯಾ ಗೋಯಲ್ ಅವರಿಗೆ ಬರುವ ನವೆಂಬರ್ ತಿಂಗಳಿನಲ್ಲಿ ವಿವಾಹ ನಿಶ್ಚಯವಾಗಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆಕೆ ತನ್ನ ರಹಸ್ಯ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಭಾವಿ ಪತಿ ಕೇತನ್‌ನನ್ನು ಮುಗಿಸಲು ಭೀಕರ ಸಂಚು (Conspiracy) ರೂಪಿಸಿದ್ದಳು. ಅದರಂತೆ ಜೂನ್ 18 ರಂದು ಲೋಹಗಢ ಕೋಟೆಗೆ ಪ್ರವಾಸಕ್ಕೆಂದು ಕರೆದೊಯ್ದು, ಅಲ್ಲಿನ ಕಡಿದಾದ ಬಂಡೆಯ ಮೇಲಿನಿಂದ ಕೆಳಗೆ ತಳ್ಳಿ ಈ ಕ್ರೂರ ಕೊ*ಯನ್ನು ಇಬ್ಬರೂ ಸೇರಿ ಜಾರಿಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಮಹಾರಾಷ್ಟ್ರದಾದ್ಯಂತ ತೀವ್ರ ಸಂಚಲನ ಮೂಡಿಸಿದೆ.