ಉಗ್ರರ ಮನವೊಲಿಸಲು ಪಾಲಕರನ್ನು ಕರೆ ತಂದ ಸೇನೆ ಪಾಲಕರ ಮನವಿಗೆ ಕರಗಿದ ಉಗ್ರರು ಶರಣು ಯೋಧರ ನಡೆಗೆ ಭಾರೀ ಮೆಚ್ಚುಗೆ

ಶ್ರೀನಗರ (ಜು.7): ಉಗ್ರರು ಅಟ್ಟಹಾಸ ಮೆರೆಯುವ ಕಾಶ್ಮೀರದಲ್ಲಿ ಅವರನ್ನು ಮಣಿಸಲು ಭದ್ರತಾ ಪಡೆಗಳು ಹೊಸ ತಂತ್ರ ಅನುಸರಿಸಿ ಯಶ ಕಂಡಿವೆ. ಕುಲ್ಗಾಂ ಜಿಲ್ಲೆಯಲ್ಲಿ ಅಡಗಿ ಕುಳಿತ ಇಬ್ಬರು ಉಗ್ರರು ಪಾಲಕರ ಮಾತುಗಳನ್ನು ಕೇಳಿ ಭದ್ರತಾ ಪಡೆಗಳ ಎದುರು ಶರಣಾದ ಅಚ್ಚರಿಯ ಘಟನೆ ಬುಧವಾರ ನಡೆದಿದೆ. ಉಗ್ರರ ಹತ್ಯೆ ಮಾಡುವ ಬದಲು ಪಾಲಕರ ಮೂಲಕ ಮನವೊಲಿಸಿದ ಯೋಧರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕುಲ್ಗಾಂ ಜಿಲ್ಲೆಯ ಹಡಿಗಾಮ್‌ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಉಗ್ರರು, ಅಡಗಿದ್ದ ಮನೆಯಿಂದಲೇ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರು. ಇಬ್ಬರೂ ಸ್ಥಳೀಯ ಯುವಕರಾದ ನದೀಮ್‌ ಅಬ್ಬಾಸ್‌ ಭಟ್‌ ಹಾಗೂ ಖಲೀಫ್‌ ಮೀರ್‌ ಎಂದು ತಿಳಿದಿದ್ದೇ ತಡ, ಯೋಧರು ಅವರ ಪಾಲಕರನ್ನು ಸ್ಥಳಕ್ಕೆ ಕರೆ ತರೆ ತಂದಿದ್ದಾರೆ.

ಉಗ್ರ ಸಂಘಟನೆ ಸದಸ್ಯನಲ್ಲದಿದ್ದರೂ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿ ವಿಚಾರಣೆ ಮಾಡಬಹುದು : ಹೈಕೋರ್ಟ್‌

ಇಬ್ಬರೂ ಇತ್ತೀಚೆಗೆ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಸೇರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಉಗ್ರ ನದೀಮ್‌ನ ತಾಯಿ, ‘ನೀನು ಮಾಡಿದ ಅಪರಾಧಗಳನ್ನು ಕ್ಷಮಿಸುವಂತೆ ನಾನು ಭದ್ರತಾ ಪಡೆಗಳಲ್ಲಿ ಕೋರಿಕೊಳ್ಳುತ್ತೇನೆ, ಹೊರಗೆ ಬಾ, ನಾವೆಲ್ಲ ನಿನಗಾಗಿ ಕಾಯುತ್ತಿದ್ದೇವೆ’ ಎಂದು ಕಣ್ಣೀರಿಟ್ಟಿದ್ದಾರೆ. ಪಾಲಕರ ಸತತ ಒತ್ತಾಯದ ಮೇರೆಗೆ ಇಬ್ಬರೂ ಉಗ್ರರು ಶಸ್ತ್ರಾಸ್ತ್ರಗಳನ್ನು ಕೆಳಗಿರಿಸಿ ಭದ್ರತಾ ಪಡೆಗಳ ಎದುರು ಶರಣಾಗಿದ್ದಾರೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದಾದ್ಯಂತ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸರಣಿ ಎನ್‌ಕೌಂಟರ್‌ಗಳು ನಡೆಯುತ್ತಿವೆ. ಅನೇಕ ಭಯೋತ್ಪಾದಕರು ಮತ್ತು ಅವರ ಕಮಾಂಡರ್‌ಗಳನ್ನು ನಿರ್ಮೂಲನೆ ಮಾಡಲಾಗಿದೆ.

ಬಿಜೆಪಿಯ ಐಟಿ ಸೆಲ್‌ಗೂ ಲಗ್ಗೆಯಿಟ್ಟ ಭಯೋತ್ಪಾದಕ: ಬಂಧಿತ ಉಗ್ರ ಜಮ್ಮು ಕೇಸರಿ ಪಾಳಯದ ಐಟಿ ಮುಖ್ಯಸ್ಥ!

ಮೆಹಬೂಬಾ ಮೆಚ್ಚುಗೆ: ಭದ್ರತಾ ಪಡೆಗಳ ಈ ನಡೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಶರಣಾದ ಉಗ್ರರ ಕುಟುಂಬದವರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಯೋಧರು ಹಾಗೂ ಕುಟುಂಬದವರ ಪ್ರಯತ್ನದಿಂದಾಗಿ 2 ಪ್ರಾಣಗಳ ಉಳಿದಿವೆ. ಭಯೋತ್ಪಾದನೆಗೆ ಸೇರಿದ ಯುವಕರಿಗೆ ಮತ್ತೊಂದು ಅವಕಾಶ ನೀಡುವ ಇಂತಹ ಪ್ರಯತ್ನಗಳು ಮುಂದುವರೆಯಲಿ’ ಎಂದು ಟ್ವೀಟ್‌ ಮಾಡಿದ್ದಾರೆ.