ಬುಲಂದ್‌ಶಹರ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಪತ್ತೆಹಚ್ಚಿದ್ದಾನೆ. ಪತ್ನಿಯ ಮೊಬೈಲ್‌ನಲ್ಲಿ ಸಿಕ್ಕ "ಸಿಮೆಂಟ್ ಮತ್ತು ನೀಲಿ ಡ್ರಮ್" ಫೋಟೋಗಳಿಂದ, ಆಕೆ ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆಂದು ಅರಿತುಕೊಂಡಿದ್ದಾನೆ. 

ಬುಲಂದ್‌ಶಹರ್ (ಮಾ.19): ಪತ್ನಿಯ ಅಕ್ರಮ ಸಂಬಂಧದ ನಡುವೆ ತನ್ನನ್ನೇ ಕೊಲೆ ಮಾಡಲು ಹೆಂಡತಿ ರೂಪಿಸಿದ್ದ ಭೀಕರ ಸಂಚನ್ನು ಕಂಡು ಪತಿಯೊಬ್ಬ ಬೆಚ್ಚಿಬಿದ್ದಿದ್ದಾನೆ. ಪತ್ನಿಯ ಮೊಬೈಲ್‌ನಲ್ಲಿ ಸಿಕ್ಕ "ಸಿಮೆಂಟ್ ಮತ್ತು ನೀಲಿ ಡ್ರಮ್" ಫೋಟೋಗಳನ್ನು ಆತನನ್ನು ಎಷ್ಟು ಭಯಭೀತನನ್ನಾಗಿ ಮಾಡಿತ್ತು ಎಂದರೆ, ತನ್ನ ಜೀವ ಉಳಿಸಿಕೊಳ್ಳಲು ಆಕೆಯನ್ನು ಆಕೆಯ ಪ್ರೇಮಿಯ ಜೊತೆಗೇ ಕಳುಹಿಸಿಕೊಟ್ಟಿದ್ದಾನೆ.

ಬುಲಂದ್‌ಶಹರ್‌ನ ರಾಜ್‌ಕುಮಾರ್ ಎಂಬುವವರ ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಕಳೆದ ವರ್ಷ ಜುಲೈನಲ್ಲಿ ತನ್ನ ಆರು ತಿಂಗಳ ಮಗುವನ್ನು ಬಿಟ್ಟು, "ತವರು ಮನೆಗೆ ಹೋಗುತ್ತಿದ್ದೇನೆ" ಎಂದು ಹೇಳಿ ಹೋದ ಪತ್ನಿ, ವಾಸ್ತವವಾಗಿ ತನ್ನ ಪ್ರೇಮಿಯ ಜೊತೆ ವಾಸಿಸುತ್ತಿದ್ದಳು ಎಂದು ರಾಜ್‌ಕುಮಾರ್ ಆರೋಪಿಸಿದ್ದಾರೆ. "ನಾನು ಆಕೆಯನ್ನು ಪ್ರಶ್ನಿಸಿದಾಗಲೆಲ್ಲಾ ಸಾಕ್ಷಿ ಕೇಳುತ್ತಿದ್ದಳು" ಎಂದು ರಾಜ್‌ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಮೊಬೈಲ್‌ನಲ್ಲಿ ಸಿಕ್ಕಿತು ಆ 'ಭೀಕರ' ಸಾಕ್ಷಿ!

ಒಮ್ಮೆ ಪತ್ನಿ ತನ್ನ ಪ್ರೇಮಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ರಾಜ್‌ಕುಮಾರ್ ಆಕೆಯ ಮೊಬೈಲ್ ಕಿತ್ತುಕೊಂಡಿದ್ದಾರೆ. ಆ ಫೋನ್ ಪರಿಶೀಲಿಸಿದಾಗ ಅವರಿಗೆ ಕಂಡ ದೃಶ್ಯಗಳು ನಡುಕ ಹುಟ್ಟಿಸುವಂತಿದ್ದವು. ಅದರಲ್ಲಿ ಪತ್ನಿಯ ಅರೆಬರೆ ಫೋಟೋಗಳು ಮಾತ್ರವಲ್ಲದೆ, ಫೇಸ್‌ಬುಕ್‌ನಲ್ಲಿ ಕೊಲೆಗೆ ಸಂಬಂಧಿಸಿದ ಪೋಸ್ಟ್‌ಗಳಿದ್ದವು. ಆ ಪೋಸ್ಟ್‌ಗಳಿಗೆ "ಸಿಮೆಂಟ್ ಔರ್ ಡ್ರಮ್" (ಸಿಮೆಂಟ್ ಮತ್ತು ಡ್ರಮ್) ಎಂಬ ಕ್ಯಾಪ್ಶನ್ ನೀಡಲಾಗಿತ್ತು. ಅಷ್ಟೇ ಅಲ್ಲದೆ, ರಾಜ್‌ಕುಮಾರ್ ಅವರ ಫೋಟೋ ಮೇಲೆ "ನೀಲೀ ಡ್ರಮ್ ಮತ್ತು ಸಿಮೆಂಟ್" ಎಂದು ಬರೆಯಲಾಗಿತ್ತು. ಇದನ್ನು ನೋಡಿದ ರಾಜ್‌ಕುಮಾರ್‌ಗೆ ಪತ್ನಿ ತನ್ನನ್ನು ಕೊಲೆ ಮಾಡಿ ಡ್ರಮ್‌ನಲ್ಲಿ ಹಾಕಲು ಸ್ಕೆಚ್ ಹಾಕಿದ್ದಾಳೆ ಎಂಬುದು ಖಚಿತವಾಯಿತು.

ಏನಿದು "ನೀಲಿ ಡ್ರಮ್ ಮತ್ತು ಸಿಮೆಂಟ್" ರಹಸ್ಯ?

2025ರ ಮಾರ್ಚ್‌ನಲ್ಲಿ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಎಂಬುವವರ ಭೀಕರ ಹತ್ಯೆಗೆ ಸಂಬಂಧಿಸಿದ್ದಾಗಿದೆ. ಸೌರಭ್ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಸೇರಿ ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪುರಾವೆ ನಾಶಪಡಿಸಲು ಅದನ್ನು ನೀಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು. ಅದೇ ಮಾದರಿಯಲ್ಲಿ ರಾಜ್‌ಕುಮಾರ್‌ನನ್ನು ಕೊಲೆ ಮಾಡಲು ಪತ್ನಿ ಹವಣಿಸುತ್ತಿದ್ದಳು.

ಜೀವ ಉಳಿಸಿಕೊಳ್ಳಲು ಪತಿಯ ನಿರ್ಧಾರ

ಪತ್ನಿ ತನ್ನನ್ನು ಮಾತ್ರವಲ್ಲದೆ ತನ್ನ ಮೂವರು ಸಹೋದರರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ರಾಜ್‌ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಾಗ, ಪತ್ನಿ ತನಗೆ ತನ್ನ ಪ್ರೇಮಿಯ ಜೊತೆಗೇ ಇರಬೇಕೆಂದು ಹಠ ಹಿಡಿದಿದ್ದಾಳೆ. ಆಗ ರಾಜ್‌ಕುಮಾರ್ ಆ ಪ್ರೇಮಿಯನ್ನು ಭೇಟಿಯಾಗಿ, ಕೊನೆಗೆ ತನ್ನ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಪತ್ನಿಯನ್ನು ಆತನ ಜೊತೆಗೇ ಕಳುಹಿಸಿಕೊಡಲು ಒಪ್ಪಿಕೊಂಡಿದ್ದಾರೆ.