ಬಿಜೆಪಿಯ ಐಟಿ ಸೆಲ್‌ಗೂ ಲಗ್ಗೆಯಿಟ್ಟ ಭಯೋತ್ಪಾದಕ: ಬಂಧಿತ ಉಗ್ರ ಜಮ್ಮು ಕೇಸರಿ ಪಾಳಯದ ಐಟಿ ಮುಖ್ಯಸ್ಥ!
* ಜಮ್ಮುವಿನಲ್ಲಿ ಗ್ರಾಮಸ್ಥರಿಂದ ಸೆರೆಹಿಡಿಯಲ್ಪಟ್ಟ ಲಷ್ಕರ್ ಉಗ್ರ ತಾಲಿಬ್ ಹುಸೇನ್ ಶಾ
* ಬಿಜೆಪಿಯ ಐಟಿ ಸೆಲ್‌ಗೂ ಲಗ್ಗೆಯಿಟ್ಟಭಯೋತ್ಪಾದಕ!
* ಬಂಧಿತ ಉಗ್ರ ಜಮ್ಮು ಬಿಜೆಪಿ ಐಟಿ ಮುಖ್ಯಸ್ಥ
ಶ್ರೀನಗರ(ಜು,04): ಜಮ್ಮುವಿನಲ್ಲಿ ಗ್ರಾಮಸ್ಥರಿಂದ ಸೆರೆಹಿಡಿಯಲ್ಪಟ್ಟಲಷ್ಕರ್ ಉಗ್ರ ತಾಲಿಬ್ ಹುಸೇನ್ ಶಾ, ಬಿಜೆಪಿಯ ಸದಸ್ಯನಾಗಿದ್ದು, ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿದ್ದ. ಕಳೆದ ಮೇ 9ರಂದೇ ಈತನಿಗೆ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಸ್ಥಾನ ದೊರೆತಿತ್ತು ಎಂದು ಬೆಳಕಿಗೆ ಬಂದಿದೆ. ಈ ಮೂಲಕ ಪಕ್ಷದ ಒಳಗೆ ಸೇರಿಕೊಂಡು ಬಿಜೆಪಿಯಲ್ಲಿನ ಆಂತರಿಕ ವಿಚಾರಗಳ ಪತ್ತೇದಾರಿಕೆ ಮಾಡಲು ಉಗ್ರರು ಮುಂದಾಗಿದ್ದರೇ ಎಂಬ ಗುಮಾನಿ ಸೃಷ್ಟಿಯಾಗಿದೆ.
ಆತನ ಬಂಧನದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಇದಕ್ಕೆ ಸ್ಪಷ್ಟನೆ ನೀಡಿದೆ. ‘ಬಿಜೆಪಿ ಆನ್‌ಲೈನ್ ಸದಸ್ಯತ್ವಕ್ಕೆ ಅವಕಾಶ ನೀಡುತ್ತಿದ್ದು, ಈ ವೇಳೆ ಅನೇಕರು ಪಕ್ಷ ಸೇರುತ್ತಾರೆ. ಆದರೆ ಆನ್‌ಲೈನ್ ಸದಸ್ಯತ್ವದ ವೇಳೆ ಸೇರುವವರ ಪೂರ್ವಾಪರ ತಿಳಿಯಲು ಸಾಧ್ಯವಿಲ್ಲ. ಹೀಗಾಗಿಯೇ ಇಂಥ ಅಚಾತುರ್ಯ ಆಗಿರಬಹುದು’ ಎಂದು ಜಮ್ಮು ಬಿಜೆಪಿ ವಕ್ತಾರ ಪಠಾನಿಯಾ ಹೇಳಿದ್ದಾರೆ.
ಕಾಶ್ಮೀರಿ ಉಗ್ರರ ಆಯಸ್ಸು ಭಾರೀ ಕಮ್ಮಿ!
ಅಲ್ಲದೆ, ‘ಉಗ್ರರು ಬಿಜೆಪಿ ಸೇರಿ ಗೂಢಚರ್ಯೆ ನಡೆಸುವ ಹೊಸ ಕುತಂತ್ರವನ್ನೂ ಆರಂಭಿಸಿರಬಹುದು. ಈ ಮೂಲಕ ಪಕ್ಷದ ಒಳ ವ್ಯವಹಾರ ತಿಳಿದುಕೊಂಡು ಪಕ್ಷದ ಉನ್ನತ ನಾಯಕರ ಹತ್ಯೆಗೆ ಸಂಚು ಹೂಡುವುದು ಉಗ್ರರ ಹೊಸ ಉಪಾಯವಾಗಿರಬಹುದು. ಪೊಲೀಸರು ಈ ಸಂಚನ್ನು ಭೇದಿಸಿದ್ದಾರೆ’ ಎಂದು ಅವರು ನುಡಿದಿದ್ದಾರೆ.
ಸಶಸ್ತ್ರ ಉಗ್ರರನ್ನೇ ಹಿಡಿದು ಕಾಶ್ಮೀರಿಗರ ಸಾಹಸ!
ಶಸ್ತ್ರಸಜ್ಜಿತರಾದ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರನ್ನು ಜಮ್ಮು-ಕಾಶ್ಮೀರದ ರೇಸಿ ಜಿಲ್ಲೆಯ ಗ್ರಾಮಸ್ಥರೇ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿ ಭಾರೀ ಸಾಹಸ ಪ್ರದರ್ಶಿಸಿದ ಘಟನೆ ಭಾನುವಾರ ವರದಿಯಾಗಿದೆ.
ಮೋಸ್ಟ್ ವಾಂಟೆಡ್ LeT ಉಗ್ರರ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು, 5 ಲಕ್ಷ ರೂ ಬಹುಮಾನ ಘೋಷಣೆ!
ಉಪರಾಜ್ಯಪಾಲ ಮನೋಜ್ ಸಿನ್ಹಾ ಹಾಗೂ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಗ್ರಾಮಸ್ಥರ ಸಾಹಸವನ್ನು ಪ್ರಶಂಸಿಸಿದ್ದು, ಅವರಿಗೆ 7 ಲಕ್ಷ ರು. ನಗದು ಬಹುಮಾನ ಘೋಷಿಸಿದ್ದಾರೆ.
ರಜೌರಿ ಸ್ಫೋಟದ ಮಾಸ್ಟರ್ ಮೈಂಡ್:
ಇತ್ತೀಚೆಗೆ ರಜೌರಿ ಜಿಲ್ಲೆಯಲ್ಲಿ ನಡೆದ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್ ಶಾ ಹಾಗೂ ಪುಲ್ವಮಾದ ಫೈಸಲ್ ಅಹ್ಮದ್ ಧಾರ್ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ತುಕ್ಸೋನ್ ಢೋಕ್ ಗ್ರಾಮದಲ್ಲಿ ಆಶ್ರಯ ಪಡೆದಿದ್ದರು. ಗ್ರಾಮಸ್ಥರು ಇಬ್ಬರೂ ಶಸ್ತ್ರಸಜ್ಜಿತ ಉಗ್ರರನ್ನು ಸೆರೆ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಉಗ್ರರ ಬಳಿಯಿಂದ ಬಂದೂಕು, ಗ್ರೆನೇಡ್, ಪಿಸ್ತೂಲು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಉಗ್ರರು ಪ್ರಾಥಮಿಕ ತನಿಖೆಯ ವೇಳೆ ಪಾಕಿಸ್ತಾನಿ ಲಷ್ಕರ್ ಎ ತೊಯ್ಬಾ ಹ್ಯಾಂಡ್ಲರ್ ಸಲ್ಮಾನ್ ಜೊತೆಗೆ ನೇರ ಸಂಪರ್ಕದಲ್ಲಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
7 ಲಕ್ಷ ರು. ಬಹುಮಾನ:
‘ತುಕ್ಸೋನ್ ಢೋಕ್ ಗ್ರಾಮಸ್ಥರ ಸಾಹಸಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಬಂಧಿಸಿದ್ದಾರೆ. ಸಾಮಾನ್ಯ ಜನರು ಸಾಹಸ ಪ್ರದರ್ಶಿಸುತ್ತಿರುವಾಗ ಭಯೋತ್ಪಾದನೆಯ ಕೊನೆ ದಿನಗಳು ದೂರವಿಲ್ಲ. ಈ ಧೀರ ಗ್ರಾಮಸ್ಥರಿಗೆ 5 ಲಕ್ಷ ರು. ನಗದು ಬಹುಮಾನ ಘೋಷಿಸುತ್ತೇನೆ’ ಎಂದು ಲೆ. ಗವರ್ನರ್ ಪಾಂಡೆ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಗ್ರಾಮಸ್ಥರಿಗೆ 2. ಲಕ್ಷ ರು ನಗದು ಬಹುಮಾನ ಘೋಷಿಸಿದ್ದಾರೆ.