ಕಾಲೇಜು ಓದುವುದಕ್ಕೆಂದ ಬಂದು, ಅದೇ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದ 37.229 ಗ್ರಾಂ MDMA ಡ್ರಗ್ಸ್ ಸಮೇತ 18 ವರ್ಷದ ಯುವತಿ ಮತ್ತು 24 ವರ್ಷದ ಯುವಕನನ್ನು ಬಂಧಿಸಲಾಗಿದೆ. ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡು ಈ ದಂಧೆ ನಡೆಸುತ್ತಿದ್ದು, ಇದೀಗ ಜೈಲು ಪಾಲಾಗಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದ ಬರೋಬ್ಬರಿ 37.229 ಗ್ರಾಂ MDMA ಡ್ರಗ್ಸ್ ಜೊತೆ ಯುವತಿ ಹಾಗೂ ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಕೇರಳದ ಕೋತಮಂಗಲಂನಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಯುವತಿ ಪೀರುಮೇಡು ಎಲಪ್ಪಾರ ಹೆಲಿಬೆರಿಯಾದ ಒಟ್ಟಪ್ಲಾಕಲ್ ಮನೆಯ ರಿಸಾನಾ ಫಾತಿಮಾ (18) ಮತ್ತು ಕೋತಮಂಗಲಂ ಇರಮಲ್ಲೂರಿನ ಪೂತೋಳಿಲ್ ಮನೆಯ ಅನಂತು ಪ್ರಸಾದ್ (24) ಎಂದು ಗುರುತಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಕಾಲೇಜಿಗೆ ಬಂದು ಡ್ರಗ್ಸ್ ಪೆಡ್ಲರ್ ಆದಳು
ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸ್ಪೆಷಲ್ ಡ್ರೈವ್ ನಡೆಸುತ್ತಿತ್ತು. ಈ ವೇಳೆ ಕೋತಮಂಗಲಂ ಟೌನ್‌ನಲ್ಲಿ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಪ್ರಮೋದ್ ಎಂ.ಪಿ ಮತ್ತು ಅವರ ತಂಡ ತಪಾಸಣೆ ನಡೆಸಿದಾಗ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಡ್ರಗ್ಸ್ ವ್ಯವಹಾರಕ್ಕೆ ಬಳಸುತ್ತಿದ್ದ ಮೂರು ಮೊಬೈಲ್ ಫೋನ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಡುಕ್ಕಿ ಮೂಲದ ರಿಸಾನಾ, ಕೋತಮಂಗಲಂನ ಖಾಸಗಿ ಪ್ರೊಫೆಷನಲ್ ಕಾಲೇಜೊಂದರಲ್ಲಿ ಓದಲು ಬಂದಿದ್ದಳು. ಆದರೆ ಕೆಲವೇ ತಿಂಗಳಲ್ಲಿ ಓದು ಬಿಟ್ಟು ಡ್ರಗ್ಸ್ ಮಾರಾಟ ದಂಧೆಗೆ ಇಳಿದಿದ್ದಳು ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡು ಡ್ರಗ್ಸ್ ಸಾಗಣೆ
ಆರೋಪಿಗಳು ದಿನಕ್ಕೆ ಸುಮಾರು 3,000 ರೂಪಾಯಿ ಬಾಡಿಗೆ ಇರುವ ಐಷಾರಾಮಿ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಂಡು ಡ್ರಗ್ಸ್ ಡೀಲ್ ಮಾಡುತ್ತಿದ್ದರು. ಸದ್ಯ ಇಬ್ಬರನ್ನೂ ಕೋತಮಂಗಲಂ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಪ್ರಮೋದ್ ಎಂ.ಪಿ. ನೇತೃತ್ವದ ಈ ಕಾರ್ಯಾಚರಣೆಯಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿದ್ದೀಕ್ ಎ.ಇ, ಪ್ರಿವೆಂಟೀವ್ ಆಫೀಸರ್ ಶಮೀರ್ ವಿ.ಎ, ಪ್ರಿವೆಂಟೀವ್ ಆಫೀಸರ್‌ಗಳಾದ (ಗ್ರೇಡ್) ರಸಾಕ್ ಕೆ.ಎ, ಸುನಿಲ್ ಪಿ.ಎಸ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಉಬೈಸ್ ಪಿ.ಎಂ, ಅಖಿಲೇಶ್ ವೇಲಾಯುಧನ್ ಮತ್ತು ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ರೆನ್ಸಿ ಕೆ.ಎ. ಭಾಗಿಯಾಗಿದ್ದರು.


