ಉಗ್ರ ಸಂಘಟನೆ ಸದಸ್ಯನಲ್ಲದಿದ್ದರೂ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿ ವಿಚಾರಣೆ ಮಾಡಬಹುದು : ಹೈಕೋರ್ಟ್‌

ಭಯೋತ್ಪಾದಕ ಸಂಘಟನೆಯ ಸದಸ್ಯರಲ್ಲದಿದ್ದರೂ ಯುಎಪಿಎ ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. 

Person can be prosecuted for terrorist act he is not member of terrorist organisation Karnataka High Court akb

ಬೆಂಗಳೂರು: ಭಯೋತ್ಪಾದಕ ಸಂಘಟನೆಯ ಸದಸ್ಯರಲ್ಲದಿದ್ದರೂ ಯುಎಪಿಎ ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಯಾವುದೇ ನಿಷೇಧಿತ ಸಂಘಟನೆ ಅಥವಾ ಭಯೋತ್ಪಾದಕ ಸಂಘಟನೆಯ ಸದಸ್ಯರಲ್ಲದಿದ್ದರೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಕೃತ್ಯಕ್ಕಾಗಿ ಕಾನೂನು ಕ್ರಮ ಜರುಗಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

 ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಜೊತೆಗೆ ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಇಬ್ಬರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಶಿವಶಂಕರ ಅಮರಣ್ಣನವರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.  

ಕೇಂದ್ರದ ಆದೇಶ ಪಾಲಿಸಲು ಟ್ವಿಟರ್ ನಕಾರ, ಕರ್ನಾಟಕ ಹೈಕೋರ್ಟ್‌‌ಗೆ ಅರ್ಜಿ!

ಯುಎಪಿಎ ಕಾನೂನಿನ ಸೆಕ್ಷನ್ 15 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಭಯೋತ್ಪಾದಕ ಕೃತ್ಯಕ್ಕಾಗಿ ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು ಮತ್ತು ಈ ಕಾನೂನಿನ ಅಡಿಯಲ್ಲಿ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲು ಅವನು ಭಯೋತ್ಪಾದಕ ಸಂಘಟನೆಯ ಸದಸ್ಯನೇ ಆಗಿರಬೇಕು ಎಂಬ ನಿಯಮವಿಲ್ಲ. ಶಂಕಿತ ಭಯೋತ್ಪಾದಕ ಗ್ಯಾಂಗ್ ಅಥವಾ ಸಂಘಟನೆಯ ಸದಸ್ಯನಾಗಿರಲೇಬೇಕು ಎಂಬ ನಿಯಮವಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವುದು ಕಾಯಿದೆಯ ಸೆಕ್ಷನ್ 20 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. 


ಆದ್ದರಿಂದ ನಿಷೇಧಿತ ಸಂಘಟನೆಯ ಸದಸ್ಯರಲ್ಲದ ವ್ಯಕ್ತಿಗಳನ್ನು ಯುಎಪಿಎ ಅಡಿಯಲ್ಲಿ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂಬ ಮೇಲ್ಮನವಿದಾರರ ವಾದವು ಯಾವುದೇ ಹುರುಳನ್ನು ಹೊಂದಿಲ್ಲ, ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪು ಜುಲೈ 1 ರಂದು ಪ್ರಕಟವಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್‌ ಹತ್ಯೆ ಪ್ರಕರಣದ ಆರೋಪಿಗಳಾದ ಇರ್ಫಾನ್ ಪಾಷಾ Irfan Pasha(32) ಮತ್ತು ಮೊಹಮ್ಮದ್ ಮುಜೀಬ್ ಉಲ್ಲಾ Mohammad Mujib Ulla (46) ಅವರು , ತಮಗೆ ಜಾಮೀನು ನಿರಾಕರಿಸಿ ವಿಶೇಷ ನ್ಯಾಯಾಲಯವು 2021 ರ ಏಪ್ರಿಲ್ 21 ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಈ ತೀರ್ಪು ನೀಡಿದೆ. 

ಬಿಜೆಪಿಯ ಐಟಿ ಸೆಲ್‌ಗೂ ಲಗ್ಗೆಯಿಟ್ಟ ಭಯೋತ್ಪಾದಕ: ಬಂಧಿತ ಉಗ್ರ ಜಮ್ಮು ಕೇಸರಿ ಪಾಳಯದ ಐಟಿ ಮುಖ್ಯಸ್ಥ!

2016 ರ ಅಕ್ಟೋಬರ್ 16 ರಂದು ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)  ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಆ ಐವರಲ್ಲಿ ಈ ಇಬ್ಬರು ಸೇರಿದ್ದಾರೆ.  ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಪಿಎಫ್‌ಐ ಅಧ್ಯಕ್ಷ ಎಂದು ಹೇಳಲಾದ ಅಸೀಮ್ ಷರೀಫ್ (Asim Shariff) ನೇತೃತ್ವದ ಐವರು ಆರ್‌ಎಸ್‌ಎಸ್ ಕಾರ್ಯಕರ್ತರಲ್ಲಿ ಭಯ ಹುಟ್ಟಿಸಲು ಆರ್‌ಎಸ್‌ಎಸ್‌ನ ಸಮವಸ್ತ್ರದಲ್ಲಿದ್ದ ರುದ್ರೇಶ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಐವರು ಆರೋಪಿಗಳಲ್ಲಿ ಯಾರೊಬ್ಬರೂ ಮೃತ ವ್ಯಕ್ತಿಯೊಂದಿಗೆ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ಆರ್‌ಎಸ್‌ಎಸ್ ಸದಸ್ಯರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೇ ಅವರನ್ನು ಹತ್ಯೆಗೈಯಲಾಗಿದೆ ಎಂದು ಪೀಠ ಹೇಳಿದೆ.

ಪೀಠವು ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿನ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತ್ತು ಮತ್ತು ಅಪರಾಧದಲ್ಲಿ ಭಾಗಿಯಾಗಿರುವುದನ್ನು ತೋರಿಸಲು ಆರೋಪಿಗಳ ವಿರುದ್ಧ ಪ್ರಾಥಮಿಕ ಪ್ರಕರಣವಿದೆ ಎಂದು ವಿಚಾರಣಾ ನ್ಯಾಯಾಲಯವು ಸರಿಯಾಗಿ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು. 'ಆದ್ದರಿಂದ, ಯುಎಪಿಎಯ ಸೆಕ್ಷನ್ 43 (ಡಿ) (5) ಅಡಿಯಲ್ಲಿ ಒಳಗೊಂಡಿರುವ ನಿಬಂಧನೆಗಳ ಪ್ರಕಾರ, ಸದರಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಆರೋಪಿಗಳು ಯಾವುದೇ ಅಪರಾಧ ಇಲ್ಲ ಎಂದು ನ್ಯಾಯಾಲಯವು ತೀರ್ಮಾನಕ್ಕೆ ಬರುವವರೆಗೆ ಜಾಮೀನಿಗೆ ಅರ್ಹರಾಗಿರುವುದಿಲ್ಲ ಎಂದು ಅವರ ಮೇಲ್ಮನವಿಗಳನ್ನು ತಿರಸ್ಕರಿಸುವಾಗ ನ್ಯಾಯಾಲಯವು ಹೇಳಿದೆ.

ಆರೋಪಿಗಳ ಪರ ವಕೀಲ ಎಸ್.ಬಾಲಕೃಷ್ಣನ್ ವಾದ ಮಂಡಿಸಿದ್ದರು. ಎನ್‌ಐಎ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.
 

Latest Videos
Follow Us:
Download App:
  • android
  • ios