Asianet Suvarna News Asianet Suvarna News

ಗುಂಡೇಟಿಗೆ ಬಲಿಯಾದ ಉದ್ಯಮಿ: 3 ವರ್ಷದ ಬಳಿಕ ಕೇಸ್‌ಗೆ ವಾಟ್ಸಾಪ್‌ನಿಂದ ಟ್ವಿಸ್ಟ್: ಅತ್ತು ಕರೆದ ಪತ್ನಿಯೇ ಪಾತಕಿ

ಸಣ್ಣದೊಂದು ಕೂದಲು ಸಿಕ್ಕಿದರೂ ಕೊಲೆಗಾರನ ಪತ್ತೆ ಮಾಡ್ತಾರೆ ಪೊಲೀಸರು ಆದ್ರೆ ಈ ಪ್ರಕರಣದಲ್ಲಿ ಹಾಗಾಗಿರಲಿಲ್ಲ, ಆದರೆ ಸುಳ್ಳಿಗೆ ಆಯಸ್ಸಿಲ್ಲ, ಸತ್ಯಕ್ಕೆ ಸಾವಿಲ್ಲ ಎಂಬ ಮಾತಿನಂತೆ ಘಟನೆ ನಡೆದು ಮೂರು ವರ್ಷಗಳ ನಂತರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

twist to businessman Vinod Bharara murder case who was shot dead three years ago Gym Affair Led Murder husband by wife akb
Author
First Published Jun 18, 2024, 10:40 PM IST | Last Updated Jun 18, 2024, 11:02 PM IST

ಚಂಡೀಗಢ: ಸಣ್ಣದೊಂದು ಕೂದಲು ಸಿಕ್ಕಿದರೂ ಕೊಲೆಗಾರನ ಪತ್ತೆ ಮಾಡ್ತಾರೆ ಪೊಲೀಸರು ಆದ್ರೆ ಈ ಪ್ರಕರಣದಲ್ಲಿ ಹಾಗಾಗಿರಲಿಲ್ಲ, ಆದರೆ ಸುಳ್ಳಿಗೆ ಆಯಸ್ಸಿಲ್ಲ, ಸತ್ಯಕ್ಕೆ ಸಾವಿಲ್ಲ ಎಂಬ ಮಾತಿನಂತೆ ಘಟನೆ ನಡೆದು ಮೂರು ವರ್ಷಗಳ ನಂತರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗುಂಡೇಟಿಗೆ ಬಲಿಯಾದ ಉದ್ಯಮಿಯ ಸಾವಿನ ಹಿಂದೆ ಇದ್ದಿದ್ದು ಮಾತ್ರ ಅತ್ತು ಕರೆದು ನಾಟಕವಾಡಿದ ಪತ್ನಿಯೇ ಎಂಬುದು ಕೊನೆಗೂ ಬಯಲಾಗಿದೆ. 

ಅಂದು 2021ರ ಡಿಸೆಂಬರ್ 15, ಹರಿಯಾಣದ ಪಾಣಿಪತ್‌ನಲ್ಲಿ ಉದ್ಯಮಿ ವಿನೋದ್ ಭರಾರಾ ಗುಂಡೇಟಿಗೆ ಬಲಿಯಾಗಿದ್ದರು. ಅವರ ಮನೆಯಲ್ಲೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಪೊಲೀಸರಿಗೆ ಶೂಟರ್ ದೇವ್ ಸುನರ್ ಶರಣಾಗಿದ್ದ. ಹೀಗಾಗಿ ಪೊಲೀಸರು ಕೂಡ ಪ್ರಕರಣದ ಬಗ್ಗೆ ಬೇರೆ ಆಯಾಮದಿಂದ ಯೋಚಿಸಲು ಹೋಗಿರಲಿಲ್ಲ, ವಿನೋದ್ ಅವರನ್ನು ಶೂಟ್‌ ಮಾಡಿದ್ದ ದೇವ್ ಸುನರ್, ತಾನು ಅಪಘಾತ ಮಾಡಿದ್ದ ಪ್ರಕರಣದಲ್ಲಿ ವಿನೋದ್‌ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಅವರು ನಿರಾಕರಿಸಿದ್ದರಿಂದ ಅವರನ್ನು ಗುಂಡಿಕ್ಕಿ ಕೊಂದೇ ಎಂದು ಹೇಳಿಕೆ ನೀಡಿದ್ದ.  ಹೀಗಾಗಿ ದೇವ್‌ ಸುನರ್‌ಗೆ ಶಿಕ್ಷೆಯಾದರೆ ಇತ್ತ ಫೈಲ್‌ ಕ್ಲೋಸ್ ಆಗಿತ್ತು. 

ಪೊಲೀಸ್ ಅಧಿಕಾರಿಗೆ ಬಂತು ವಾಟ್ಸಾಪ್ ಸಂದೇಶ

ಆದರೆ ಇತ್ತ ವಿನೋದ್ ಅವರ ಕುಟುಂಬದವರಿಗೆ ಮಾತ್ರ ಇದರಲ್ಲೇನೋ ಬೇರೆ ಕಣ್ಣಿಗೆ ಕಾಣದ ಕಪಟ ಇದೆ ಎಂಬ ಬಗ್ಗೆ ಸಂಶಯವಿತ್ತು. ಈ ಮಧ್ಯೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಐಪಿಎಸ್ ಅಧಿಕಾರಿ ಅಜಿತ್ ಸಿಂಗ್ ಶೇಖಾವತ್ ಅವರ ಫೋನ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿದ್ದು, ಇದು ಪ್ರಕರಣಕ್ಕೆ ರೋಚಕ ತಿರುವು ನೀಡಿದೆ. ವಿನೋದ್‌ಗೆ ನಿಕಟವಾಗಿರುವ ಯಾರೋ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ಎಂಬ ಮನವಿ ಈ ವಾಟ್ಸಾಪ್ ಸಂದೇಶದಲ್ಲಿತ್ತು. ಆದರೆ ಆಸ್ಟ್ರೇಲಿಯಾದಲ್ಲಿರುವ ವಿನೋದ್ ಅವರ ಸೋದರನೇ ಈ ಸಂದೇಶ ಕಳುಹಿಸಿದ್ದ ಎಂಬ ವಿಚಾರವನ್ನು ಪೊಲೀಸರು ನಂತರ ಪತ್ತೆ ಮಾಡಿದ್ದರು. ಇದಾದ ನಂತರ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರಲ್ಲೇನೋ ತಪ್ಪಾಗಿದೆ ಎಂಬ ವಿಚಾರ ಪೊಲೀಸ್ ಅಧಿಕಾರಿಯನ್ನು ಕಾಡಿದೆ. 

ದೋಸೆ ಕಾವಲಿಯಿಂದ ಹೊಡೆದು ಗಂಡನ ಪರಲೋಕಕ್ಕೆ ಅಟ್ಟಿದ ಸತಿ

ನಾನು ಪ್ರಕರಣವನ್ನು ಮತ್ತೆ ವಿಮರ್ಶಿಸಿದಾಗ ಕೇವಲ ಅಪಘಾತ ಪ್ರಕರಣ ಇತ್ಯರ್ಥಗೊಳಿಸಲು ನಿರಾಕರಿಸಿದ ಕಾರಣಕ್ಕಾಗಿ ಯಾರಾದರೂ ಇನ್ನೊಬ್ಬ ವ್ಯಕ್ತಿಯನ್ನು ಏಕೆ ಕೊಲೆ ಮಾಡ್ತಾರೆ ಎಂದು ನಾನು ಆಶ್ಚರ್ಯಪಟ್ಟೆ. ಏಕೆಂದರೆ ನಿರ್ಲಕ್ಷ್ಯದ ಚಾಲನೆಯ ಪ್ರಕರಣದಲ್ಲಿ ಅಷ್ಟೊಂದು ದಂಡ ಇರುವುದಿಲ್ಲ ಹಾಗೂ ಆರೋಪಿಗಳು ಹೆಚ್ಚಾಗಿ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಕೊಲೆಗೆ ಕಠಿಣ ಶಿಕ್ಷೆ ಇದೆ ಎಂದು ಅಧಿಕಾರಿ ಮತ್ತೆ ಈ ಬಗ್ಗೆ ಯೋಚನೆ ಮಾಡಿದ್ದಾರೆ. 

ಪತ್ನಿ ಮೇಲೆ ಕಣ್ಣಿಟ್ಟಿದ ಪೊಲೀಸ್ ತಂಡ
ಇದಾದ ನಂತರ ಹಿರಿಯ ಅಧಿಕಾರಿ ಅಜಿತ್ ಸಿಂಗ್ ಶೇಖಾವತ್ ಅವರು ಹರಿಯಾಣ ಪೊಲೀಸ್‌ ಇಲಾಖೆಯ ಅಪರಾಧ ತನಿಖಾ ಏಜೆನ್ಸಿಯ ದೀಪಕ್ ಕುಮಾರ್ ಅವರನ್ನು ಸಂಪರ್ಕಿಸಿ ಈ ಪ್ರಕರಣದ ಬಗ್ಗೆ ಮತ್ತೆ ಪರಿಶೀಲಿಸುವಂತೆ ಕೇಳಿದ್ದಾರೆ. ಇದಾದ ನಂತರ ಪೊಲೀಸರಿಗೆ ಉದ್ಯಮಿ ವಿನೋದ್ ಅವರನ್ನು ಹತ್ಯೆ ಮಾಡಿದ ದೇವ್ ಸುನರ್ ಅವರು ವಿನೋದ್ ಅವರ ಪತ್ನಿ ನಿಧಿಯ ಜೊತೆ ಬಹಳ ಆತ್ಮೀಯವಾಗಿದ್ದ ಜಿಮ್ ತರಬೇತುದಾರ ಸುಮಿತ್ ಎಂಬಾತನಿಗೆ ಬಹಳ ಆತ್ಮೀಯ ಗೆಳೆಯ ಎಂಬುದು ತಿಳಿಯುತ್ತದೆ. ಹೀಗಾಗಿ ಇವರ ಚಲನವಲನದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.

ಜಿಮ್ ತರಬೇತುದಾರನ ಜೊತೆ ಪತ್ನಿಯ ಪ್ರೇಮ

ವಿನೋದ್ ಅವರ ಪತ್ನಿ ನಿಧಿ ಜಿಮ್ ತರಬೇತುದಾರ ಸುಮಿತ್‌ನನ್ನು ಜಿಮ್‌ನಲ್ಲಿ ಭೇಟಿಯಾಗಿದ್ದರು, ಈ ಭೇಟಿ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದು ಪತಿ ವಿನೋದ್‌ಗೆ ತಿಳಿದು ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅಲ್ಲದೇ ತನ್ನ ಪತ್ನಿಯಿಂದ ದೂರ ಇರುವಂತೆ ಸುಮಿತ್‌ಗೆ ವಿನೋದ್ ವಾರ್ನ್ ಮಾಡಿದ್ದರು. ಆದರೆ ಜಗಳ ಮುಂದುವರೆದಂತೆ ಇಬ್ಬರು ಸೇರಿ ವಿನೋದ್ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಜೊತೆಗೆ ಇದಕ್ಕಾಗಿ ಹರ್ಯಾಣದ ಟ್ರಕ್ ಚಾಲಕ ದೇವ್ ಸುನರ್‌ಗೆ 10 ಲಕ್ಷ ನೀಡಿದ್ದರು. ಅಲ್ಲದೇ ವಿನೋದ್ ಕಾರಿಗೆ ಅಪಘಾತವನ್ನು ಮಾಡಿಸಿದ್ದರು. ಆದರೆ ಆ ಅವಘಡದಲ್ಲಿ ವಿನೋದ್ ಪಾರಾಗಿದ್ದರು. ಆದರೆ ನಂತರದಲ್ಲಿ 2ನೇ ಬಾರಿ ಹತ್ಯೆಗೆ ಸಂಚು ರೂಪಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!

ಈ ಬಗ್ಗೆ ಹಲವು ಮಾಹಿತಿಗಳನ್ನು ಸೇರಿಸಿ ಅಧ್ಯಯನ ನಡೆಸಿ ಪೊಲೀಸರು ನಿಧಿ ಹಾಗೂ ಸುಮಿತ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ವಿನೋದ್ ಹತ್ಯೆಗೈದ್‌ ಆರೋಪಿ ದೇವ್ ಸುನರ್‌ನ ಕಾನೂನು ವೆಚ್ಚ ಹಾಗೂ ಮನೆವೆಚ್ಚವನ್ನು  ವಿನೋದ್ ಸಾವಿನ ನಂತರ ಸಿಕ್ಕಾ ವಿಮಾ ಹಣದಿಂದ ಭರಿಸಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈಗ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಒಟ್ಟಿನಲ್ಲಿ ಸತ್ಯಕ್ಕೆ ಸಾವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Latest Videos
Follow Us:
Download App:
  • android
  • ios