ವಂದೇ ಭಾರತ್ ಸ್ಲೀಪರ್ ರೈಲಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ವಿಮಾನದಂತೆಯೇ ಟ್ರಾಲಿ ಬಳಸಿ, ಸೀಲ್ ಮಾಡಿದ ಫುಡ್ ಬಾಕ್ಸ್‌ಗಳನ್ನು ಸಿಬ್ಬಂದಿ ವಿತರಿಸುತ್ತಿದ್ದಾರೆ. ಜೊತೆಗೆ, ಪ್ರೀಮಿಯಂ ಬೆಡ್‌ಶೀಟ್‌ ಹೊಸ ಸೌಲಭ್ಯಗಳು ಭಾರತೀಯ ರೈಲ್ವೆ ಪ್ರಯಾಣದ ಅನುಭವವನ್ನೇ ಬದಲಿಸುತ್ತಿವೆ.

ಭಾರತೀಯ ರೈಲ್ವೆ ಪ್ರಯಾಣ ಈಗ ನೆಕ್ಟ್‌ ಲೆವೆಲ್‌ಗೆ ತಲುಪುತ್ತಿದೆ. 'ಚಾಯ್-ಚಾಯ್' ಅನ್ನೋ ಕೂಗಿನ ಬದಲು ಈಗ 'ಫ್ಲೈಟ್‌ನಂತಹ ಸೇವೆ' ಸಿಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಆಹಾರ ಪೂರೈಸುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರೈಲ್ವೆ ಸಿಬ್ಬಂದಿ ಮುಚ್ಚಿದ ಸರ್ವಿಸ್ ಟ್ರಾಲಿಗಳನ್ನು ತಳ್ಳಿಕೊಂಡು ಬೋಗಿಯಲ್ಲಿ ಓಡಾಡುತ್ತಿದ್ದಾರೆ. ಅವರು ಪ್ರಯಾಣಿಕರಿಗೆ ಸೀಲ್ ಮಾಡಿದ ಫುಡ್ ಬಾಕ್ಸ್‌ಗಳನ್ನು ನೀಡುತ್ತಿದ್ದಾರೆ.

ಕೈಗವಸು, ಮಾಸ್ಕ್ ಮತ್ತು ಹೇರ್‌ನೆಟ್ ಧರಿಸಿರುವ ಸಿಬ್ಬಂದಿ, ಹೆಚ್ಚು ಸ್ವಚ್ಛತೆ ಹಾಗೂ ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಹಿಂದಿನ ರೈಲು ಪ್ರಯಾಣದ ಅನುಭವಕ್ಕಿಂತ ಬಹಳ ಭಿನ್ನವಾಗಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಕ್ಲಿಪ್‌ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬರ್ತ್‌ನಲ್ಲಿ ಬಣ್ಣಬಣ್ಣದ, ಆಕರ್ಷಕ ಬ್ಲಾಕ್-ಪ್ರಿಂಟ್ ವಿನ್ಯಾಸದ ಬೆಡ್‌ಶೀಟ್ ಬಳಸಿ ವಿಶ್ರಾಂತಿ ಪಡೆಯುತ್ತಿರುವುದು ಕಾಣಿಸುತ್ತದೆ. ಸಾಮಾನ್ಯವಾಗಿ ಎಸಿ ಕೋಚ್‌ಗಳಲ್ಲಿ ಬಳಸುವ ಬಿಳಿ ಬೆಡ್‌ಶೀಟ್‌ಗಳಿಗೆ ಹೋಲಿಸಿದರೆ ಇದೊಂದು ದೊಡ್ಡ ಬದಲಾವಣೆ.

ಆದಿತ್ಯ ಯಾದವ್ ಎಂಬ ಟ್ರಾವೆಲ್ ಬ್ಲಾಗರ್ ಈ ವಿಡಿಯೋವನ್ನು ಟ್ವೀಟ್ ಮಾಡಿ, ಈ ಸೇವೆಯನ್ನು 'ಫ್ಲೈಟ್‌ನಂತೆ' ಇದೆ ಎಂದು ಬಣ್ಣಿಸಿದ್ದಾರೆ. ಅವರ ಈ ಮಾತು ತಕ್ಷಣವೇ ಆನ್‌ಲೈನ್‌ನಲ್ಲಿ ಜನಪ್ರಿಯವಾಯಿತು. ಈ ಮಾತಿಗೆ ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲುಗಳಲ್ಲಿ ತಾವು ಹಿಂದೆಂದೂ ಕಂಡಿರದ ರೀತಿಯಲ್ಲಿ ಆಹಾರವನ್ನು ಅಚ್ಚುಕಟ್ಟಾಗಿ ನೀಡಲಾಗುತ್ತಿದೆ ಎಂದು ಹಲವರು ಹೇಳಿದ್ದಾರೆ.

ವೈರಲ್ ವಿಡಿಯೋ ನೋಡಿ

View post on Instagram

ಈ ಕ್ಲಿಪ್‌ನಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಸ್ವಚ್ಛವಾದ ಬೋಗಿಯೊಳಗೆ ಕೈಗವಸು, ಮಾಸ್ಕ್ ಮತ್ತು ಹೇರ್‌ನೆಟ್ ಧರಿಸಿ, ಸೀಲ್ ಮಾಡಿದ ಊಟದ ಬಾಕ್ಸ್‌ಗಳನ್ನು ಹಂಚುತ್ತಿರುವುದು ಕಾಣಿಸುತ್ತದೆ. ಅವರು ದೊಡ್ಡ, ಮುಚ್ಚಿದ ನೀಲಿ ಬಣ್ಣದ ಟ್ರಾಲಿಯನ್ನು ಬಳಸುತ್ತಿದ್ದು, ಅದು ಕೂಡಾ ಅಚ್ಚುಕಟ್ಟಾಗಿ ಕಾಣುತ್ತಿದೆ.

ಆಗಾಗ ರೈಲಿನಲ್ಲಿ ಪ್ರಯಾಣಿಸುವವರಿಗೆ ಈ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಿಂದೆ ಬಳಸುತ್ತಿದ್ದ ಸಂಪೂರ್ಣ ಬಿಳಿ ಬಣ್ಣದ ಬೆಡ್‌ಶೀಟ್‌ಗಳು ಕೋಚ್‌ಗೆ ಒಂದು ರೀತಿ 'ಶವಾಗಾರದಂತಹ' (morgue-like) ಅನುಭವ ನೀಡುತ್ತಿತ್ತು ಎಂದು ಒಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ.

ರೈಲಿನ ಬಗ್ಗೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 17 ರಂದು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದರು. ಈ ರೈಲು ಪ್ರಯಾಣದ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಗಂಟೆಗೆ 180 ಕಿ.ಮೀ. ವಿನ್ಯಾಸ ವೇಗವನ್ನು ಹೊಂದಿರುವ ಈ ರೈಲಿನಲ್ಲಿ 16 ಬೋಗಿಗಳಿವೆ. ಇದು ತ್ರೀ-ಟೈಯರ್, ಟೂ-ಟೈಯರ್ ಮತ್ತು ಫಸ್ಟ್-ಕ್ಲಾಸ್ ಎಸಿ ವಿಭಾಗಗಳಲ್ಲಿ ಸುಮಾರು 800 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಇದರಲ್ಲಿ 'ಕವಚ್' ಮತ್ತು ತುರ್ತು 'ಟಾಕ್-ಬ್ಯಾಕ್' ವ್ಯವಸ್ಥೆಗಳಂತಹ ಸುರಕ್ಷತಾ ಕ್ರಮಗಳೂ ಇವೆ.